Friday, January 15, 2010

ಅಪಘಾತ



ಶ್ರಾವಣಕುಮಾರ ತನ್ನ ಕೆಲಸದ ಬಗ್ಗೆ ಯೋಚಿಸುತ್ತಾ ಬೈಕಿನ ಆಕ್ಸಿಲರೇಟರ್ ಜೋರಾಗಿ ತಿರುಗಿಸಿದ. ಘಂಟೆಗೆ ನಲವತ್ತರ ವೇಗ ತೋರಿಸುತ್ತಿದ್ದ ಮುಳ್ಳು ಕ್ರಮೇಣ ಅರವತ್ತು ಕೀಲೋಮೀಟರ್ ಕಡೆಗೆ ಸಾಗಿತ್ತು. ರಾಜದೂತ್ ಬೈಕಿನ ಸ್ಪೀಡೋಮೀಟರಿನಲ್ಲಿ ನಲವತ್ತು-ಐವತ್ತು ನಡುವೆಯಿದ್ದ ಹಸುರು ಪರಿಧಿಯನ್ನು ಮುಳ್ಳು ದಾಟಿತ್ತು. ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಬೈಕ್ ಓಡಿಸುವುದು ಶ್ರಾವಣನಿಗೆ ಬಹಳ ಇಷ್ಟದ ಕೆಲಸ. ಅದಕ್ಕೆ ಕಾರಣಗಳು ಹಲವು: ಕಡೆಗೂ ಈ ಹೆದ್ದಾರಿ ತಲುಪುವುದು ಬೆಂಗಳೂರನ್ನು ಎಂಬುದು ಒಂದು ಕಾರಣ. ಜೊತೆಗೆ ಆ ಹೆದ್ದಾರಿಯ ರಸ್ತೆಗಳು ಸಮತಟ್ಟಿನಲ್ಲಿರದೇ ಅಂಕುಡೊಂಕುಗಳಿಂದ ಕೂಡಿದ್ದರಿಂದ ಬೈಕನ್ನು ಹಾಗೆ, ಹೀಗೆ ವಾಲಿಸುತ್ತಾ ಸಾಗಲು ಅನುಕೂಲ. ಜೊತೆಗೆ ಆರ್ ಅಂಡ್ ಬಿ ವಿಭಾಗದ ಕೃಪಾಕಟಾಕ್ಷ ಈಚೆಗಷ್ಟೇ ಆ ಹೆದ್ದಾರಿಯ ಮೇಲಾಗಿದ್ದು ರಸ್ತೆ ಚೆನ್ನಾಗಿಯೂ ಇತ್ತು.

ಶ್ರಾವಣನಿಗೆ ಈ ಹೆದ್ದಾರಿ ಹೊಸದೇನೂ ಅಲ್ಲ. ಪ್ರತೀ ಬಾರಿ ಜಡಚರ್ಲದಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದ ಬೋಯಿನಪಲ್ಲಿಯ ಸಹಕಾರ ಸಂಘಕ್ಕೆ ಅವನು ತನ್ನ ಸಂಸ್ಥೆಯ ವತಿಯಿಂದ ಭೇಟಿ ಕೊಡುವುದಿತ್ತು. ಸಹಕಾರ ಸಿದ್ಧಾಂತ, ಸೂತ್ರಗಳ ಬಗ್ಗೆ ಸಣ್ಣ ಗುಂಪುಗಳಿಗೆ ಪಾಠಮಾಡುವುದೂ ಅವನ ಕೆಲಸಗಳಲ್ಲಿ ಒಂದು. ಹೀಗೆ ಆಗಾಗ ಈ ಸಹಕಾರ ಸಂಘಕ್ಕೆ ಬಂದು, ಹೋಗಿ ಮಾಡುವುದರಿಂದ - ಅವನಿಗೆ ಈ ರಸ್ತೆ ಸುಪರಿಚಿತವಾಗಿದ್ದು ಕಣ್ಣು ಮುಚ್ಚಿಕೊಂಡರೂ ಬೈಕನ್ನು ಇಲ್ಲಿ ಓಡಿಸಬಹುದು ಅನ್ನಿಸಿತ್ತು. ಪ್ರತಿಬಾರಿಯೂ ಅದೇ ಕಾರ್ಯಕ್ರಮ: ಹೈದರಾಬಾದಿನಿಂದ ಹೊರಡುವುದು, ಷಾದ್ ನಗರದಲ್ಲಿ ಚಹಾ ಕುಡಿಯುವುದು, ಬೋಯಿನಪಲ್ಲಿಯಲ್ಲಿ ಪಾಠ, ಸಂಜೆಗೆ ಮತ್ತೆ ಷಾದ್ ನಗರದಲ್ಲಿ ಚಹಾ ಕುಡಿದು - ಹೈದರಾಬಾದಿಗೆ ವಾಪಸ್.

ಅಂದೂ ಸಹ ಶ್ರಾವಣ ಇದೇ ಕಾರ್ಯಕ್ರಮದನುಸಾರ, ಇದೇ ರಸ್ತೆಯ ಮೇಲೆ ಬರುತ್ತಿದ್ದ. ಹೌದು. ಪೆಟ್ರೋಲ್ ತುಟ್ಟಿಯ ಈ ಕಾಲದಲ್ಲಿ ಸ್ಪೀಡೋಮೀಟರಿನ ಹಸುರು ಪರಿಧಿಯನ್ನು ದಾಟದ ಶ್ರಾವಣ ಅಂದು ಮಾತ್ರ ಅದನ್ನೂ ಮೀರುವಂತೆ ಆಕ್ಸಿಲರೇಟರ್ ತಿರುಗಿಸಿದ್ದ.

ಮಧ್ಯಾಹ್ನ ಬೋಯಿನಪಲ್ಲಿಯಿಂದ ಜಡಚರ್ಲಕ್ಕೆ ಬಂದು ಊಟ ಮಾಡಬೇಕಿತ್ತು. ಊಟಕ್ಕೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಸಹಕಾರ ಸಂಘದ ಅಧ್ಯಕ್ಷ ಪ್ರತ್ಯಕ್ಷನಾಗಿ ಶ್ರಾವಣನಿಗೆ ನಮಸ್ಕಾರ ಹೊಡೆದು ಕುಶಲ ವಿಚಾರಿಸಿದ. ಸಂಘದ ಕೆಲಸ ಹೇಗೆ ನಡೀತಿದೆ - ಸಂಘದಿಂದ ಬೇರೇವಾದರೂ ಬೇಕೇ? ಎಂದೆಲ್ಲಾ ಮಾತಾಯಿತು. ಶ್ರಾವಣ: "ಸ್ಕೂಲಿನ ರೆಡ್ಡಪ್ಪ ಮಾಸ್ತರ ಬಳಿಯಿಂದ ಪ್ರತಿಬಾರಿಯೂ ಕಪ್ಪು ಹಲಿಗೆ ಎರವಲು ತರುವುದು ಕಷ್ಟವಾಗುತ್ತೆ - ಒಂದು ಹಲಿಗೆ ಕೊಂಡುಬಿಡಿ" ಎಂದು ಸೂಚಿಸಿದ. ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಮುಂದಿನ ಕಮಿಟಿ ಮೀಟಿಂಗಿನಲ್ಲಿ ಈ ಪ್ರಸ್ತಾಪ ಮಾಡುವ ಭರವಸೆ ಕೊಟ್ಟ. ಅಪ್ಪಲರೆಡ್ಡಿ ಏಳುವಷ್ಟರಲ್ಲಿ ಏನೋ ನೆನಪುಮಾಡಿಕೊಂಡು -

"ಸಾಯಂಕಾಲ ಹೈದರಾಬಾದಿಗೆ ಹೋಗ್ತೀರಾ?" ಎಂದು ಕೇಳಿದ.

"ಹೌದು, ಯಾಕೆ?"

"ಏನಿಲ್ಲ, ನನಗೆ ಹಳ್ಳಿಯಲ್ಲಿ ಸ್ವಲ್ಪ ಕೆಲಸ ಇದೆ. ಅದು ಮುಗಿಸಿಕೊಂಡು ನಾನು ಹೈದರಾಬಾದಿಗೆ ಹೋಗಬೇಕು. ಅಲ್ಲಿ ಆರೂ ನಲವತ್ತರ ಟ್ರೈವೀಕ್ಲಿಯಲ್ಲಿ ನಮ್ಮ ಪಾರ್ಟಿ ಕಾರ್ಯಕರ್ತ ಮದ್ರಾಸಿಗೆ ಹೋಗುತ್ತಿದ್ದಾನೆ. ಅವನಿಗೆ ಒಂದು ಪ್ಯಾಕೆಟ್ ಕೊಡಬೇಕು. ನಾನೂ ನಿಮ್ಮ ಜೊತೆ ಬಂದರೆ ಹೇಗೇಂತ ಯೋಚನೆ ಮಾಡುತ್ತಿದ್ದೆ... ನಾಂಪಲ್ಲಿ ಸ್ಟೇಷನ್ ನಲ್ಲಿ ನೀವು ನನ್ನನ್ನ ಇಳಿಸಿಬಿಡುತ್ತೀರಾ? ಈ ಆರ್ ಟಿ ಸಿಯ ಗೋಳು ನಿಮಗೆ ಗೊತ್ತೇ ಇದೆಯಲ್ಲಾ..."

"ಓಹೋ.. ಅದಕ್ಕೇನು... ಖಂಡಿತವಾಗಿ ಬನ್ನಿ ಪರವಾಗಿಲ್ಲ. ನಾನು ನಾಲ್ಕು ಘಂಟೆಗೆ ಸರಿಯಾಗಿ ಕ್ಲಾಸು ಮುಗಿಸುತ್ತೇನೆ. ಎರಡೂವರೆ ಘಂಟೆ ಟೈಮಿರುತ್ತದೆ.. ಎಂಬತ್ತು ಕಿಲೋಮೀಟರ್ ಆರಾಮವಾಗಿ ಹೋಗಬಹುದು."

ಶ್ರಾವಣ ಹೇಳಿದಂತೆಯೇ ಆಗಿದ್ದರೆ ಚೆನ್ನಾಗಿತ್ತು. ಆದರೆ ಅಪ್ಪಲರೆಡ್ಡಿ ಸ್ಥಳೀಯ ರಾಜಕೀಯ ಮುಗಿಸಿ ಸಹಕಾರ ಸಂಘಕ್ಕೆ ಬರುವ ವೇಳೆಗೆ ನಾಲ್ಕೂಮುಕ್ಕಾಲಾಗಿತ್ತು. ಎರಡು ಘಂಟೆ ಸಮಯದಲ್ಲಿ ಹೈದರಾಬಾದೇನೋ ತಲುಪಬಹುದಿತ್ತಾದರೂ - ನಾಂಪಲ್ಲಿ ಸೇರಬಹುದೇ? ಎಂಬ ಪ್ರಶ್ನೆಯಿತ್ತು.

"ಬನ್ನಿ ಹೊರಡೋಣ" ಅಂತ ಗಡಿಬಡಿಮಾಡಿ ಬೈಕಿನ ಕಿಕ್ ಒದ್ದ. ಸಮಯದ ಅಭಾವ ಇದ್ದುದರಿಂದ ಬೇಗ ಹೋಗಲೇ ಬೇಕಿತ್ತು. ಶ್ರಾವಣನ ಮನಸ್ಸಿನಲ್ಲಿ ಇದ್ದುದು ಇಷ್ಟೇ... "ಎಷ್ಟಾದರೂ ರಾಜಕೀಯ ವ್ಯಕ್ತಿ, ಒಂದಿಲ್ಲ ಒಂದು ದಿನ ಕೆಲಸಕ್ಕೆ ಬರುತ್ತಾನೆ. ಸಹಾಯ ಮಾಡಿದರೆ ನಷ್ಟವೇನು?" ಹೀಗೆ ಬೋಯಿನಪಲ್ಲಿಯಿಂದ ಲೆಕ್ಕಾಚಾರ ಹಾಕಿ ಹೊರಟ. ಸ್ಪೀಡೋಮೀಟರಿನ ಮುಳ್ಳು ಹಸಿರು ಪರಿಧಿಯನ್ನು ದಾಟಿತ್ತು.

ಬೈಕ್ ಓಡಿಸುವಾಗ ಶ್ರಾವಣ ಮಾತಾಡುವುದಿಲ್ಲ. ಮಾತಾಡಿದರೆ ಹಿಂದೆ ತಿರುಗಬೇಕಾಗುತ್ತೆ. ಅರಚಿದರೂ ಧ್ವನಿ ಗಾಳಿಯಲ್ಲಿ ತೇಲೀಹೋಗುತ್ತದೆ. ಹಿಂದಿರುವವರಿಗೆ ಕೇಳಿಸುವುದಿಲ್ಲ. ಅದೇ ಹಿಂದೆ ಕೂತಿರುವವರು ಇಷ್ಟಬಂದದ್ದನ್ನು ಚಾಲಕನ ಕಿವಿಯಲ್ಲಿ ಅರಚಬಹುದು. ಹೀಗಾಗಿ ಈ ವನ್-ವೇ ಮಾತುಕತೆ ಶ್ರಾವಣನಿಗೆ ಹಿಡಿಸದು. ಮಾತಾಡದಿರಲು ಮತ್ತೊಂದು ಕಾರಣವೆಂದರೆ ಬಾಯಿ ತೆರೆದ ಕೂಡಲೇ ಒಳಹೊಕ್ಕು ಬರುವ ಹುಳಗಳು. ಗೋಧೂಳಿಯ ಸಮಯ ಉಲ್ಲಾಸಕರ, ಆಹ್ಲಾದಕರ ಎಂದೆಲ್ಲಾ ಹೇಳುವಾಗ ಈ ಸಂಜೆಯ ಅನುಭವ ಶ್ರಾವಣನಿಗೆ ಯಾವಾಗಲೂ ನೆನಪಾಗುತ್ತದೆ. ಬೈಕ್ ಚಲಾಯಿಸುವಾಗ ಕಣ್ಣು ಮೂಗು ಬಾಯಿಯೆಂದು ಹೊಕ್ಕುಬಿಡುವ ಪುಟ್ಟಪುಟ್ಟ ಹಳುಗಳು. ಹೀಗಾಗಿ ಅಪ್ಪಲರೆಡ್ಡಿಯನ್ನ ಹಿಂದೆ ಕೂಡಿಸಿಕೊಂಡು ಬರುತ್ತಿದ್ದ ಶ್ರಾವಣ ಕನ್ನಡಕದೊಂದಿಗೆ ಮೌನವನ್ನೂ ಧರಿಸಿದ್ದ.

ಹೀಗೆ ಯೋಚಿಸುತ್ತಾ, ಕ್ಲಚ್ ಹಿಡಿಯುತ್ತಾ, ಬ್ರೇಕ್ ಒತ್ತುತ್ತಾ, ಗೇರ್ ಬದಲಾಯಿಸುತ್ತಾ, ಆಕ್ಸಲರೇಟರ್ ತಿರುಗಿಸುತ್ತಾ ಹೋಗುತ್ತಿರುವಾಗಲೇ ಷಾದ್ ನಗರ್ ಬಂದುಬಿಟ್ಟಿತ್ತು. ಚಹಾ ಕುಡಿಯಲು ನಿಲ್ಲಿಸಬೇಕೋ ಬೇಡವೋ ಎಂದು ಕೈಗಡಿಯಾರ ನೋಡಿಕೊಂಡ. ಸಮಯವಿಲ್ಲ ಎಂದು ನಿರ್ಧರಿಸಿ ಮುಂದೆ ಸಾಗುತ್ತಿದ್ದಂತೆ ಸ್ಪೀಡೋಮೀಟರಿನ ಮುಳ್ಳು ಮತ್ತೆ ಹಸಿರು ಪರಧಿಗೆ ಬಂದುಬಿಟ್ಟಿತ್ತು. ನಗರ ಪ್ರದೇಶಕ್ಕೆ ಬಂದದ್ದರಿಂದ ಶ್ರಾವಣ ವೇಗವನ್ನು ಇಳಿಸಿದ್ದ.

*
*

ಶ್ರಾವಣ ಎದ್ದಾಗ ಕಾಲು ನೋಯುತ್ತಿತ್ತು. ಪ್ಯಾಂಟ್ ಮೊಣಕಾಲಿನ ಬಳಿ ಹರಿದಿತ್ತು. ಬೈಕ್ ಕೆಳಗೆ ಬಿದ್ದು ಪೆಟ್ರೋಲು ಸುರಿಯುತ್ತಿತ್ತು. ಬೈಕಿನ ಹಿಂದಿನ ಚಕ್ರ ಗಿರ್ರನೆ ತಿರುಗುತ್ತಿತ್ತು. ಬೈಕು ಬುರುಬುರು ಶಬ್ದ ಮಾಡುತ್ತಿತ್ತು. ಶ್ರಾವಣ ಬಗ್ಗಿದ. ಬೈಕನ್ನು ಎತ್ತಿ ನಿಲ್ಲಿಸಿದ. ತಿರುಗುತ್ತಿದ್ದ ಚಕ್ರ ಇದ್ದಕ್ಕಿದ್ದಂತೆ ನಿಂತಾಗ ಗೇರ್ ನಲ್ಲಿದ್ದ ಬೈಕಿನ ಇಂಜನ ನಿಂತುಹೋಯಿತು. ನ್ಯೂಟ್ರಲ್ ಗೆ ಗೇರ್ ಒತ್ತುತ್ತಿದ್ದಂತೆ ಯಾರೋ "ಬೈಕ್ ಪಕ್ಕಕ್ಕೆ ನಿಲ್ಲಿಸಿ ಸ್ಟಾಂಡ್ ಹಾಕಿ" ಎಂದು ಆದೇಶವಿತ್ತರು. ಶ್ರಾವಣ ಹಾಗೆಯೇ ಮಾಡಿದ. ಬಿದ್ದಿದ್ದ ಅಪ್ಪಲರೆಡ್ಡಿಯೂ ಎದ್ದು ನಿಂತ. ಅವನಿಗೆ ಏನೂ ಆಗಿರಲಿಲ್ಲ.... ಸ್ವಲ್ಪ ಕೈ ತರಚಿತ್ತಷ್ಟೇ. ಶ್ರಾವಣನ ಮೊಣಕಾಲು ಗಾಯದಿಂದ ನೋಯುತ್ತಿತ್ತು. ಬಗ್ಗಿ ನೋಡಿಕೊಂಡ.. ಸ್ವಲ್ಪ ರಕ್ತವೂ ಒಸರುತ್ತಿತ್ತು.

"ಥತ್ತೇರಿ" ಎಂದು ಶ್ರಾವಣ ಗೊಣಗಿಕೊಂಡ. ಎದುರಿಗಿದ್ದ ಸೈಕಲ ನೋಡಿದ. ಸರಿಯಾಗಿ ಮಧ್ಯಭಾಗದಲ್ಲಿ ಸೊಟ್ಟಗಾಗಿತ್ತು. ಬಿದ್ದ ಹುಡುಗನನ್ನು ಆಗಲೇ ಅಲ್ಲಿನ "ನೇತಾ"ಗಳು ಸ್ಥಳದಿಂದ ಖಾಲಿ ಮಾಡಿಸಿದ್ದರು.

"ಇಲ್ಲೇ ನಿಂತಿರಿ" ಎಂದು ಯಾರೋ ಆದೇಶ ಕೊಟ್ಟರು. ಶ್ರಾವಣ ತನ್ನ ಗಾಯಗಳನ್ನು ನೋಡಿಕೊಂಡ. ಮೊಣಕಾಲು ತರಚಿತ್ತು. ಬಲಗಾಲಿನ ಹಿಮ್ಮಡಿಯ ಮೇಲಿನ ಚರ್ಮ ಉರಿಯತೊಡಗಿ ಪ್ಯಾಂಟಿನ ಅಂಚನ್ನು ಎತ್ತಿ ನೋಡಿದ. ಸೈಲೆನ್ಸರ್ ತಗಲಿ - ಚರ್ಮ ಎರಡಂಗುಲದಷ್ಟು ಸುಟ್ಟಿತ್ತು. ನೋಡನೋಡುತ್ತಾ ಸುತ್ತ ಜನ ನೆರೆದರು. ಅಪಘಾತ ಹೇಗಾಯಿತು? ಎಲ್ಲರಿಗೂ ತಿಳಿಯುವ ಕುತೂಹಲ.

ಶ್ರಾವಣ ತನ್ನ ಸಮಜಾಯಿಷಿ ಕೊಟ್ಟ. "ಅಲ್ಲಿ ಲಾರಿ ನಿಂತಿತ್ತು. ನಾನು ಅದನ್ನ ದಾಟಿ ಹೋಗುತ್ತಾ ಇದ್ದೆ. ಆ ಕಡೆಯಿಂದ ಸೈಕಲ್ ತಳ್ಳುತ್ತಾ ಹುಡುಗನೊಬ್ಬ ರಸ್ತಾ ದಾಟುತ್ತಿದ್ದ. ನಾನು ನಲವತ್ತರ ವೇಗದಲ್ಲಿ ಬರುತ್ತಾ ಇದ್ದೆ. ಈ ಹುಡುಗ ಇದ್ದಕ್ಕಿದ್ದ ಹಾಗೆ ಲಾರಿಯ ಹಿಂದಿನಿಂದ ಪ್ರತ್ಯಕ್ಷನಾದ.... ನಾನು ಬ್ರೇಕು, ಫ್ರಂಟ್ ಬ್ರೇಕು ಎಲ್ಲಾ ಒತ್ತಿದೆ. ಆದರೆ ನನಗು ಆ ಹುಡುಗನಿಗೂ ಇದ್ದ ಹತ್ತಡಿ ಅಂತರದೊಳಗಾಗಿ ಬೈಕನ್ನು ನಿಲ್ಲಿಸುವುದು ಅಸಾಧ್ಯವಿತ್ತು." ಶ್ರಾವಣ ಹೇಳುತ್ತಿದ್ದ. ಹಾಗೆ... ರಸ್ತೆಯ ಅಂಚಿಗೆ ಬದಲಾಗಿ ರಸ್ತೆಗಡ್ಡ ನಿಲ್ಲಸಿದ್ದ ಲಾರಿಯ ಚಾಲಕ ಸದ್ದಿಲ್ಲದೇ ಲಾರಿಯೊಂದಿಗೆ ಜಾಗ ಖಾಲಿ ಮಾಡಿದ್ದ.

"ನಿಮಗೆ ಗಾಯ ಆಯಿತೇ? ತೋರಿಸಿ...?" ಯಾರೋ ಕೇಳಿದರು. ಶ್ರಾವಣ ಗಾಯಗಳನ್ನು ಪ್ರದರ್ಶಿಸಿದ. ಜನ ಸಹಾನುಭೂತಿ ವ್ಯಕ್ತಪಡಿಸಿದರು. "ಹುಡುಗನಿಗೇನಾಯಿತು?" ದನಿಯೊಂದು ಕೇಳಿತು. "ಡಕ್ಟರ ಬಳಿ ಒಯ್ದಿದ್ದಾರೆ. ಏನೇ ಆದರೂ ಹುಡುಗನದ್ದೇ ತಪ್ಪು."

"ನೀವೂ ಡಾಕ್ಟರ ಹತ್ತಿರ ತೋರಿಸಿಕೊಂಡುಬಿಡಿ" ಉಚಿತ ಸಲಹೆ ಗುಂಪಿನಿಂದ ಬಂತು."

"ಇದು ಇತ್ಯರ್ಥವಾಗಲಿ." ಶ್ರಾವಣ ಗಡಿಯಾರ ನೋಡಿಕೊಳ್ಳುತ್ತಾ ಹೇಳಿದ. ಆಗಲೇ ಸಮಯ ಆರು ಘಂಟೆಯಾಗಿತ್ತು. ಅಪ್ಪಲರೆಡ್ಡಿಯ ಕೆಲಸವಂತೂ ಕೆಟ್ಟೇ ಕೆಟ್ಟಿತ್ತು.

ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಬಂದು "ಒಂದು ಕಾಫಿ ಕುಡಿದು ಬರೋಣ ಬನ್ನಿ" ಎಂದ. "ಅದು ಸರಿ ಅವರೇನಂತಾರೆ?" ಶ್ರಾವಣ ಕುಂಟುತ್ತಾ ಕೇಳಿದ. "ಇದು ಇತ್ಯರ್ಥ ಆಗೋದಕ್ಕೆ ಸ್ವಲ್ಟ ಟೈಂ ಹಿಡಿಯುತ್ತೆ. ದುಡ್ಡು ಕೇಳುತ್ತಾರಿ. ಪರವಾಗಿಲ್ಲ ಅನ್ನಿಸೋ ಮೊತ್ತ ಆದರೆ ಕೊಟ್ಟು ಬಿಡೋದು. ಇಲ್ಲವಾದರೆ ಪೋಲೀಸ್ ಕೇಸ್ ಆಗುತ್ತೆ. ಆಗಲಿಬಿಡಿ. ಇಲ್ಲಿ ನನ್ನ ವಕೀಲ ಮಿತ್ರರಿದ್ದಾರೆ - ಅವರಿಗೂ ಹೇಳಿಕಳಿಸಿದ್ದೇನೆ. ಬೇಗನೇ ಇತ್ಯರ್ಥ ಮಾಡೋಣ.."

"ಪಾಪ ನಿಮ್ಮ ನಾಂಪಲ್ಲಿ ಕೆಲಸ ಹಾಳಾಯಿತು..."

"ಅದೆಲ್ಲಾ ನಮಗೆ ಇದ್ದದ್ದೇ ಬಿಡಿ. ನೀವು ಅದಕ್ಕಾಗಿ ಬೇಜಾರು ಮಾಡಿಕೋಬೇಡಿ."

ಕಾಫಿಗಾಗಿ ಹೋಟೇಲ್ ಪ್ರವೇಶಿಸುತ್ತಿದ್ದಂತೆ ಶ್ರಾವಣ ಹೇಳಿದ... "ಸರ್.... ನನಗನ್ನಿಸುತ್ತೆ - ಅವರು ಕೇಳಿದಷ್ಟು ದುಡ್ಡು ಕೊಟ್ಟುಬಿಡೋದು ವಾಸೀಂತ. ಯಾಕೇಂದ್ರೆ ನನ್ನ ಲೈಸೆನ್ಸು 'ಶರಣ್' ಅನ್ನೋ ಹೆಸರಿನಲ್ಲಿದೆ. ಯಾವುದೋ ಬ್ರೋಕರ್ ಕೈಲಿ ಮಾಡಿಸಿದ್ದೆ. ಅವನು ಹೆಸರು ಸರಿಯಾಗಿ ಬರಕೊಳ್ಳದೇ ಹೀಗೆ ಮಾಡಿದ್ದಾನೆ. ಕೇಸ್ ಆದರೆ ಸ್ವಲ್ಪ ತೊಂದರೆ... ಜೊತೆಗೆ ಇದು ಆಫೀಸಿನ ಗಾಡಿ.."


"ಅಯ್ಯೋ, ಏನೂ ಯೋಚನೆ ಮಾಡಬೇಡಿ. ಈ ವ್ಯವಹಾರಗಳೆಲ್ಲಾ ಸಾಮಾನ್ಯವೇ. ನಾನು ಇದನ್ನು ಇತ್ಯರ್ಥ ಮಾಡುತ್ತೇನೆ." ಅಪ್ಪಲರೆಡ್ಡಿ ಹೇಳುತ್ತಿದ್ದಂತೆ - ಪಕ್ಕದ ಟೇಬಲ್ಲಿನಲ್ಲಿ ಕೂತು ಇವರ ಮಾತು ಕೇಳಿಸಿಕೊಳ್ಳುತ್ತಿದ್ದವನೊಬ್ಬ ಗಡಿಬಿಡಿಯಿಂದ ಎದ್ದು ಹೋದ.

ಮತ್ತೆ ಸ್ಪಾಟಿಗೆ ವಾಪಸ್ಸಾಗುತ್ತಿದ್ದ ದಾರಿಯಲ್ಲಿ - ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ಬರಲು ಯಾರೋ ಸೂಚಿಸಿದರು. ಅಲ್ಲೇ ಯಾರದೋ ಮನೆಗೆ ಹೋಗಿ ಟಿಂಚರ್ ಹಾಕಿಸಿಕೊಂಡು ಬಂದದ್ದಾಯಿತು. ಸದ್ಯಕ್ಕೆ ತೆರೆದಿದ್ದದ್ದು ಸರಕಾರಿ ದವಾಖಾನೆ ಮಾತ್ರ ಆಗಿದ್ದರಿಂದ - ಅಲ್ಲಿಗೆ ಹೋದರೆ ಹೆಸರು ನಮೂದು ಆಗುತ್ತದೆ ಬೇಡ ಎಂದು ಶ್ರಾವಣ ನಿರ್ಧರಿಸಿದ.

ಅಪ್ಪಲರೆಡ್ಡಿ ಜನರ ಜೊತೆ ಮಾತನಾಡಿ ಚೌಕಾಶಿ ಮಾಡಿ ಹುಡುಗನಿಗೆ ಐನುರು ರೂಪಾಯಿಗಳನ್ನು ಕೊಡುವುದೆಂದು ಇತ್ಯರ್ಥ ಮಾಡಿಬಿಟ್ಟ. ಶ್ರಾವಣನಿಗೆ ಈ ಮೊತ್ತ ಹೆಚ್ಚೆನ್ನಿಸಿದರೂ ಹೇಳಲಾಗಲಿಲ್ಲು. ಆದರೂ ಪ್ರಯತ್ನ ಮಾಡಿದ..."ನೋಡಿ ತಪ್ಪು ನನ್ನದಲ್ಲ. ನೀವೂ ಅದನ್ನ ಒಪ್ಪುತ್ತೀರಿ. ಐನೂರು ಹೆಚ್ಚಲ್ಲವೇ?"

ಆದರೆ ಅಪ್ಪಲರೆಡ್ಡಿಯೊಳಗಿನ ರಾಜಕಾರಣಿ ಜಾಗೃತವಾಗಿದ್ದ. ಕಳೆದ ಬಾರಿ ಚುವಾವಣೆ ಸೋತಿದ್ದ ಈ ಭಾವೀ ಶಾಸಕ - "ಹೋಗಲಿ ಒಪ್ಪಿಕೊಂಡುಬಿಡಿ, ಹುಡುಗನಿಗೆ ಸಹಾಯ ಆದ ಹಾಗಾಗುತ್ತೆ. ಪಾಪ ಬಡವ.." ಎಂದುಬಿಟ್ಟ. ಈ ವಾಕ್ಯದೊಂದಿಗೆ ಮುಂದಿನ ಬಾರಿ ಚುನಾವಣೆಯಲ್ಲಿ ಅವನ ಠೇವಣಿ ಉಳಿಯುವ ಸಾಧ್ಯತೆ ಹೆಚ್ಚಾಗಿತ್ತು.

"ಅಪ್ಪಲರೆಡ್ಡಿಗಾರು ಹೇಳಿದ ಮೇಲೆ ಮುಗೀತು." ಎಂದರು ಜನ. ಬೋಲ್ಟ್ ಮುರಿದು ಒಂದು ಕಡೆ ಬಿಚ್ಚಿಕೊಂಡಿದ್ದ ಬಂಪರನ್ನು ಯಾರೋ ಉಚಿತವಾಗಿ ರಿಪೇರಿ ಮಾಡಿದರು.

"ಶ್ರಾವಣ್ ಹೇಗೂ ಮದರಾಸಿನ ರೈಲು ಹಿಡಿಯೋಕ್ಕೆ ಸಾಧ್ಯವಾಗೋದಿಲ್ಲ - ನಾನು ಬೋಯಿನಪಲ್ಲಿಗೆ ವಾಪಸ್ ಹೋಗುತ್ತೇನೆ. ನೀವು ಹುಷಾರಾಗಿ ಹೋಗಿ. ಪ್ಯಾಕೆಟ್ ಗೆ ನಾನು ಬೇರೆನಾದರೂ ಏರ್ಪಾಟು ಮಾಡುತ್ತೇನೆ. ಸದ್ಯಕ್ಕೆ ದುಡ್ಡು ನಾನೇ ಕೊಟ್ಟಿರುತ್ತೇನೆ. ನೀವು ಆಮೇಲೆ ನನಗೆ ಕೊಟ್ಟರಾಯಿತು. ಸರಿಯೇ?" ಎನ್ನುತ್ತಲೇ ಅಪ್ಪಲರೆಡ್ಡಿ ಹಣ ಎಣಿಸಿಕೊಟ್ಟು ಜಡಚರ್ಲದ ಕಡೆ ಹೋಗುತ್ತಿದ್ದ ಮತ್ತೊಂದು ಬೈಕ ಸವಾರನ ಬೆನ್ನು ಹತ್ತಿದ.

ಶ್ರಾವಣ ಮತ್ತೆ ಮೋಟರ್ಬೈಕಿಗೆ ಕಿಕ್ ಕೊಟ್ಟ. ಎಡ ಮೊಣಕಾಲಿನಿಂದ ರಕ್ತ ಒಸರಿ ಪ್ಯಾಂಟ್ ಚರ್ಮಕ್ಕೆ ಅಂಟಿಕೊಂಡು ಬಿಟ್ಟಿತ್ತು. ಅದನ್ನ ಬಿಡಿಸಿಕೊಂಡ. ಬಲಗಾಲನ್ನು ಒಂದೆರಡುಬಾರಿ ಆಡಿಸಿ ನೋಡಿದ. ಹೈದರಾಬಾದ್ ಸೇರಬಹುದು ಪರವಾಗಿಲ್ಲ, ಅನ್ನಿಸಿತು. ಗೇರ್ ಒತ್ತಿದ.

ರಾಜದೂತ್ ಷಾದ್ ನಗರ ಬಿಡುತ್ತಿದ್ದಂತೆ - ಅಪಘಾತದಲ್ಲಿ ಬಿದ್ದ ಹುಡುಗನ ತಾಯಿಗೆ ಯಾರೋ ಇಪ್ಪತ್ತು ರೂಪಾಯಿ ತಲುಪಿಸಿದರು. ಬಾಡಿಗೆ ಸೈಕಲ್ಲಿನ ಮಾಲೀಕನಿಗೆ ಸೈಕಲ್ ರಿಪೇರಿಗಾಗಿ ಮತ್ತೆ ಇಪ್ಪತ್ತು ರೂಪಾಯಿ ಕೊಡಲಾಯಿತು. ಆ ರಾತ್ರೆ ಮಹಾರಾಜಾ ಬಾರ್ ನಲ್ಲಿ ನೇತಾಗಳ ಸಮಾವೇಶ ಏರ್ಪಾಟಾಗಿತ್ತು.

ಅಪ್ಪಲರೆಡ್ಡಿ - ಮೂವತ್ತು ಓಟುಗಳನ್ನು ಮುಂದಿನ ಚುನಾವಣೆಗೆ ಸಂಪಾದಿಸಿದ ಖುಷಿಯಲ್ಲಿ ಹಳ್ಳಿ ಸೇರಿದ.

ಶ್ರಾವಣ ಹೈದರಾಬಾದ್ ಸೇರಿಕೊಂಡ. ಡಾಕ್ಟರ ಬಳಿ ಹೋಗಿ ಆಂಚಿ ಟೆಟನಸ್ ಸೂಜಿ ಚುಚ್ಚಿಸಿಕೊಂಡ. ಡಾಕ್ಟರಿಗೆ ಇಪ್ಪತ್ತೈದು ರೂಪಾಯಿ ತೆತ್ತು - ಐವತ್ತು ರೂಪಾಯಿಗಳ ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದ. ಈ ಬಾರಿ ಫೆಸ್ಟಿವಲ್ ಅಡ್ವಾನ್ಸ್ ತೆಗೆದುಕೊಂಡು ಅಪ್ಪಲರೆಡ್ಡಿಯ ಸಾಲ ತೀರಿಸಬೇಕೆಂದು ಯೋಚಿಸುತ್ತಲೇ ಮನೆಯೊಳಕ್ಕೆ ಪ್ರವೇಶಿಸಿದ. ಅಪ್ಪಲರೆಡ್ಡಿಯ ಸಾಲ ತೀರಿಸಬೇಕೆಂದು ಯೋಚಿಸುತ್ತಲೇ ಮನೆಯೊಳಗೆ ಪ್ರವೇಶಿಸಿದ. ತುಂಬಾ ಸುಸ್ತಾಗಿತ್ತು. ಬೇಸರವಾಗಿತ್ತು. ಟಿ.ವಿ.ಯ ಸ್ವಿಚ್ ಒತ್ತಿ ಧೊಪ್ಪನೆ ಕುರ್ಚಿಯಲ್ಲಿ ಕೂತ.

ದೂರದರ್ಶನದಲ್ಲಿ ದಕ್ಷಿಣ ಮಧ್ಯ ರೇಲ್ವೆಯ ಪ್ರಕಟಣೆಗಳು ಬರುತ್ತಿದ್ದುವು. ವರಂಗಲ್ ಬಳಿ ಗುಡ್ಸ್ ಗಾಡಿಯೊಂದು ಡೀ-ರೈಲಾದ್ದರಿಂದ ರೈಲುಗಳು ತಡವಾಗಿ ಓಡುತ್ತಿದ್ದುವು. ಮದರಾಸಿಗೆ ಹೋಗಬೇಕಿದ್ದ ಟ್ರೈವೀಕ್ಲಿ ಮೂರು ಘಂಟೆ ತಡವಾಗಿ ನಾಂಪಲ್ಲಿಯಿಂದ ಹೊರಡುತ್ತದೆಂದು ಪ್ರಕಟಿಸಲಾಯಿತು. ಆ ನೋವಿನಲ್ಲೂ ಶ್ರಾವಣನಿಗೆ ನಗು ಬಂತು. ಶ್ರಾವಣ ಗಡಿಯಾರ ನೋಡಿಕೊಂಡ. ಅಪಘಾತವಾದಾಗ ನಿಂತುಹೋಗಿದ್ದ ಗಡಿಯಾರ ಇನ್ನೂ ಆರು ಘಂಟೆ ತೋರಿಸುತ್ತಿತ್ತು.

ಮೇ 1986









No comments:

Post a Comment