Wednesday, September 23, 2009

ಗೃಹಪ್ರವೇಶ



ಹತ್ತು ವರ್ಷಗಳಿಂದ ಕಾಣದೇ ಇದ್ದ ಗೆಳೆಯ ಜೋಗಿರಾಜುವನ್ನು ವಿಶೂ ಇತ್ತೀಚೆಗಷ್ಟೇ ಭೇಟಿಮಾಡಿದ್ದ. ಹಿಂದೆ ಹೈದರಾಬಾದಿನಲ್ಲಿ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸಮಾಡುತ್ತಿದರು. ವಿಶೂ ಮುಂಬಯಿಗೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಜೋಗಿರಾಜುವೂ ಮನೆ, ಮಠ, ಆಸ್ತಿ, ಪಾಸ್ತಿ, ಹೊಲ ಗದ್ದೆ ಎನ್ನುತ್ತಾ ಕರೀಂನಗರಕ್ಕೆ ಹೊರಟುಹೋದ. ವಿಶೂ ಕಳೆದಬಾರಿ ಹೈದರಾಬಾದಿಗೆ ಹೋದಾಗ ಅಕಸ್ಮಾತ್ ಜೋಗಿರಾಜುವಿನ ಭೇಟಿಯಾಗಿತ್ತು. ಆ ಭೇಟಿಯಲ್ಲಿ ಜೋಗಿರಾಜು ಗಲಾಟೆ ಮಾಡಿ ಬಲವಂತದಿಂದ ಅವನನ್ನು ’ಒಂದು ದಿನದ ಮಟ್ಟಿಗಾದರೂ’ ಕರೀಂನಗರಕ್ಕೆ ಬರಬೇಕೆಂದು ಪಟ್ಟು ಹಿಡಿದ. ಕಡೆಗೆ ಕರೆದುಕೊಂಡೂ ಹೋದ. ಹತ್ತು ವರ್ಷಗಳ ಕಾಲದಲ್ಲಿ ತಮ್ಮ ಜೀವನದಲ್ಲಿ ಎಷ್ಟು ಬದಲಾವಣೆ ಬಂದಿದೆ ಎಂದು ಮೆಲುಕು ಹಾಕುವಷ್ಟರಲ್ಲೇ ಒಂದು ದಿನ ಕಳೆದಿತ್ತು.

ಜೋಗಿರಾಜು ತನ್ನ ಅತ್ತೆಯ ಮಗಳನ್ನೇ ಮದುವಯಾಗಿದ್ದು ಈಗವನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ತನ್ನ ಜೊತೆಗೆ ಆಫೀಸಿನಲ್ಲಿ ಕೂತು ಲೆಕ್ಕ ಬರೆಯುತ್ತಿದ್ದ, ವೇಟಗಾಡು, ಅಡವಿರಾಮುಡುವಿನಂತಹ ಸಿನೇಮಾ ನೋಡಿ ಶ್ರೀದೇವಿಯ ಬಗ್ಗೆ ಕನಸುಕಾಣುತ್ತಿದ್ದ, ಅಬೀಡ್ಸ್ ರಸ್ತೆಯಲ್ಲಿ ಕಂಡ ಹುಡುಗಿಯರಿಗೆಲ್ಲ ಲೈನ್ ಹಾಕುತ್ತಿದ್ದ ಜೋಗಿರಾಜು ಈಗ ಸಂಸಾರಸ್ಥ ಎಂದರೆ ವಿಶೂಗೆ ನಂಬುವುದೇ ಕಷ್ಟವಾಗಿತ್ತು. ಹಾಗೆಂದಮಾತ್ರಕ್ಕೆ ವಿಶೂ ಬದಲಾಗಿರಲಿಲ್ಲವೆಂದೇನೂ ಅಲ್ಲ. ಎರಡು ವರ್ಷಗಳಹಿಂದೆ ತಾನೂ ತಾಳಿ ಕಟ್ಟಿದ್ದ. ಈಚೆಗಷ್ಟೇ ವಿಶೂನ ಹೆಂಡತಿ ಪ್ರಸವಕ್ಕೆಂದು ಮೈಸೂರಿಗೆ ಹೋಗಿದ್ದಳು. ಆದರೂ ಈ ಹತ್ತು ವರ್ಷಗಳಲ್ಲಿ ತಾನು ಹೆಚ್ಚು ಬದಲಾಗಿರಲಿಲ್ಲ ಎನ್ನುವುದು ವಿಶೂನ ನಂಬಿಕೆ. ಜೋಗಿರಾಜು ಮಾತ್ರ ವರ್ಷಕ್ಕೊಂದು ಕಿಲೋ ಲೆಕ್ಕದಲ್ಲಿ ಈ ಹತ್ತು ವರ್ಷಗಳಲ್ಲಿ ಸುಮಾರು ಇಪ್ಪತ್ತು ಕಿಲೋ ತೂಕ ಸೇರಿಸಿ ’ದೊಡ್ಡ ಮನುಷ್ಯ’ನಾಗಿದ್ದ. ಕರೀಂನಗರದ ಸೇಠ್‍ನಂತೆ ಗಜಗಂಭೀರವಾಗಿ ಓಡಾಡುತ್ತಿದ್ದ ಜೋಗಿರಾಜುವನ್ನು ಕಂಡು ಚಕಿತಗೊಂಡಿದ್ದ ವಿಶೂಗೆ ಇವನು ಪಕ್ಕದ ಮೇಜಿನಲ್ಲಿ ಕೂತು ಲೆಕ್ಕಪತ್ರ ಬರೆಯುತ್ತಿದ್ದ ಅನ್ನುವುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತಿತ್ತು.

ವಿಶೂ ಕರೀಂನಗರಕ್ಕೆ ಹೋದಾಗ ಗಂಡ ಹೆಂಡತಿ ಇಬ್ಬರೂ ಅವನನ್ನು ಚೆನ್ನಾಗಿ ನೋಡಿಕೊಂಡಿದ್ದರು. ಪೊಗದಸ್ತಾದ ಊಟ ಹಾಕಿ, ಯಾವ ಉಪಚಾರವೂ ಕಡಿಮೆಯಾಗದಂತೆ ನೋಡಿಕೊಂಡಿದ್ದಲ್ಲದೇ ಒಳ್ಳೆಯ ಮಾತುಗಳನ್ನೂ ಆಡಿದ್ದರು. ಸಾಲದ್ದಕ್ಕೆ ವಿಶೂನಿಗೆ ಇಷ್ಟವೆಂದು ಒಂದು ಬಾಟಲಿ ಆವಕ್ಕಾಯಿ, ಒಂದು ಬಾಟಲಿ ಗೋಂಗೂರಾ ಕೂಡಾ ಜೋಗಿರಾಜುವಿನ ಹೆಂಡತಿ ಕಟ್ಟಿಕೊಟ್ಟಿದ್ದಳು.

ಹೊರಡುವುದಕ್ಕೆ ಮೊದಲು ಅವರ ಪ್ರೀತಿಯ ಬಂಧನಕ್ಕೆ ಒಳಗಾಗಿ ತಡೆಯಲಾಗದೇ ವಿಶೂ ಈ ಮಾತುಗಳನ್ನು ಹೇಳಿದ್ದ: "ಮುಂಬಯಿಗೆ ಬನ್ನಿ. ಬಂದಾಗ ನಮ್ಮಲ್ಲೇ ಉಳಿದುಕೊಳ್ಳಿ". ವಿಶೂ ಮುಂಬಯಿಗೆ ಕೆಲಸಕ್ಕೆ ಹೋದಾಗ ಕಲಿತಿದ್ದ ಮೊದಲ ಪಾಠಕ್ಕೆ ಇದು ತದ್ವಿರುದ್ಧವಾಗಿತ್ತು. ಮುಂಬಯಿನ ಗೆಳೆಯರು ಎಲ್ಲರೂ ತನಗೆ ಉಪದೇಶ ಹೇಳಿದ್ದವರೇ - "ಊರಿನಿಂದ ಯಾರನ್ನೂ ಆಹ್ವಾನಿಸಬಾರದು" ಎಂದು. ಹೀಗೆ ಆಹ್ವಾನಿಸುವವರಿಗೆ ಪರಮವೀರ ಚಕ್ರ ಕೊಡಬೇಕೆನ್ನುವುದು ವಿಶೂನ ಆಫೀಸಿನಲ್ಲಿನ ಜೋಕಾಗಿತ್ತು.
೨೫೦ ಚದರಡಿಯ ಮನೆಯಿಂದ ೨೫ ಕಿಲೋಮೀಟರ್ ದೂರ ಲೋಕಲ್ ರೈಲಿನಲ್ಲಿ ಕೆಲಸಕ್ಕೆ ಹೋಗುವ ಮನುಷ್ಯನಿಗೆ ಕರೀಂನಗರದಂಥ ಊರಿನಿಂದ ಅತಿಥಿಗಳು ಬಂದರೆ ಆಗುವ ಪಾಡು ಸಾಮಾನ್ಯದ್ದಲ್ಲ. ಮೊದಲಿಗೆ ಕರೀಂನಗರದಿಂದ ಪತ್ರ ಬರುತ್ತದೆ: " ನಾವುಗಳು ಇಂಥ ತಾರೀಖು ಇಂಥ ರೈಲಿನಲ್ಲಿ ಬರುತ್ತಿದ್ದೇವೆ. ದಯವಿಟ್ಟು ಸ್ಟೇಷನ್‍ಗೆ ಬರುವುದು. ಯಾಕೆಂದರೆ ನಾವು ಇದೇ ಮೊದಲ ಸಾರಿ ಮುಂಬಯಿಗೆ ಬರುತ್ತಿದ್ದೇವೆ. ಹೀಗಾಗಿ ನಮಗೆ ವಿಪರೀತ ಭಯ..." ಹೀಗೆಲ್ಲಾ ಆ ಪತ್ರದೊಳಗೆ ವಾಕ್ಯಗಳು ಭರಪೂರ ತುಂಬಿರುತ್ತವೆ. ನಂತರ ಅತಿಥಿಗಳು ಬರುವ ದಿನ ಸಮೀಪಿಸುತ್ತದೆ. ಅಂದು ದಾದರಿಗೆ ಹೋಗಿ ಅವರನ್ನು ಇಳಿಸಿಕೊಳ್ಳಬೇಕು. ವಿಟಿಯಲ್ಲಿ ಇಳಿಯಬೇಡಿರೆಂಡು ಹೇಳಲು ಆಗುವ ಎಸ್.ಟಿ.ಡಿ ಖರ್ಚು ಬೇರೆ! ದಾದರಿನಿಂದ ಸ್ವಂತ ಖರ್ಚಿನಲ್ಲಿ ಟ್ಯಾಕ್ಸಿಯಲ್ಲಿ ಕರೆತರಬೇಕು. ಈ ಪ್ರಕ್ರಿಯೆಯಲ್ಲಿ ಒಂದೆರಡು ನೂರು ರೂಪಾಯಿಗಳು ಕೈಬಿಡುತ್ತವೆ. ಬಂದ ಅತಿಥಿಗಳು ಸಣ್ಣ ಮಕ್ಕಳನ್ನು ಕರೆತಂದಿರುತ್ತಾರಾದ್ದರಿಂದ ಲೋಕಲ್ ರೈಲಿನ ಪ್ರಯಾಣ ಕಷ್ಟ. ಹೀಗಾಗಿ ಆಟೋ, ಬಸ್, ಟ್ಯಾಕ್ಸಿಗಳ ಕಾಂಬಿನೇಷನ್‌ನಲ್ಲಿ - ಎಲೆಫೆಂಟಾ, ಗೇಟ್‍ವೇ, ತಾರಾಪೂರ್‌ವಾಲಾ, ಪ್ರಿನ್ಸ್ ಆಫ್ ವೇಲ್ಸ್, ಜಹಾಂಗೀರ್, ತಾಜ್, ಮರೀನ್ ಡ್ರೈವ್, ಹ್ಯಾಂಗಿಂಗ್ ಗಾರ್ಡನ್, ಪ್ಲೆನೆಟೇರಿಯಂ ಇತ್ಯಾದಿಗಳನ್ನು ತೋರಿಸಬೇಕು. ಚೌಪಾತಿ ಜುಹೂ ಎಂದು ಗೋಲ್‍ಗಪ್ಪಾ ತಿನ್ನಿಸಬೇಕು. ಮುಂಬಯಿ ವಿಸಿಟ್‍ನ ಜ್ಞಾಪಕಾರ್ಥ ದೊಡ್ಡ ಅಂಗಡಿಯಲ್ಲಿ ಜೀನ್ಸ್ ವ್ಯಾಪಾರ ಮಾಡಿಸಬೇಕು. ಸಾಧ್ಯವಾದರೆ ಶಾಪರ್ಸ್ ಸ್ಟಾಪ್, ಅಕಬರಲಿ ತೋರಿಸಬೇಕು. ಈ ಮಧ್ಯೆ ಬಂದ ವ್ಯಕ್ತಿಯ ಪರ್ಸ್ ಪಿಕ್‍ಪಾಕೆಟ್ ಆಗುವುದು ಖಂಡಿತ.. ಸೋ.. ಒಂದೆರಡು ಸಾವಿರ ಸಾಲ, ಟಿಕೇಟು ಖರೀದಿಸದೇ ಬಂದಿದ್ದರೆ ವಿಟಿಯಲ್ಲಿ ಅದಕ್ಕಾಗಿ ಲೈನ್ ನಿಲ್ಲುವುದು - ಎಂದೂ ಸಾಧ್ಯವಾಗದ ರಿಜರ್ವೇಷನ್ ಮಾಡಿಸುವುದು.. ಈ ಎಲ್ಲ ಗ್ರಹಚಾರಗಳೂ ಯಾಕಿದ್ದೀತು ಎಂದು ವಿಶೂ ಯಾರನ್ನೂ ಸಾಮಾನ್ಯವಾಗಿ ಮುಂಬಯಿಗೆ ಆಹ್ವಾನಿಸುತ್ತಿರಲಿಲ್ಲ. ಇದು ವಿಶೂ ತನ್ನ ಹೆಂಡತಿಯೊಂದಿಗೆ ಮಾಡಿಕೊಂಡಿದ್ದ ಅಲಿಖಿತ ಒಪ್ಪಂದವಾಗಿತ್ತು.

ಜೋಗಿರಾಜು ಹಾಕಿದ ಊಟ, ಆವಕಾಯಿಯ ಅಮಲಿನಲ್ಲಿ ವಿಶು ಅವನನ್ನು ಮುಂಬಯಿಗೆ ಆಹ್ವಾನಿಸಿಬಿಟ್ಟಿದ್ದ. ಆಗ ಅವನನ್ನು ಕರೆದಾಗ ವಿಶೂಗಿದ್ದದ್ದು ಕೃತಜ್ಞತಾಭಾವವೇ ಹೊರತು ಅವನು ನಿಜಕ್ಕೂ ಬರಲಿ ಎಂಬ ಉದಾರ ಮನಸ್ಸಂತೂ ಖಂಡಿತವಾಗಿ ಇರಲಿಲ್ಲ. ಆದರೆ ಜೋಗಿರಾಜು ಮುಂದಿನ ತಿಂಗಳು ಮುಂಬಯಿಗೆ ತಾನು ಬಂದರೂ ಬರಬಹುದು ಎಂದು ಹೇಳಿದಾಗ ಮೇಲಿನ ಚಿತ್ರ ಮನದಲ್ಲಿ ಹೊಕ್ಕು ಹತ್ತಿದ್ದ ಇಡೀ ಅಮಲು ಇಳಿದುಹೋಯಿತು. ಆದರೆ ಈಗ ಮಾಡುವುದಾದರೂ ಏನು? ದಿಟ್ಟವಾಗಿ ಹೆಜ್ಜೆ ಮುಂದಕ್ಕಿಟ್ಟಿದ್ದಾಗಿತ್ತು. "ಹುಂ.ಹುಂ ಬನ್ನಿ" ಎಂದು ಅರ್ಧಂಬರ್ಧ ಗೊಣಗಿದ.

ಈ ವಿಚಾರದಲ್ಲಿ ತಾನು ತಪ್ಪು ಮಾಡಿದೆ ಎಂದೇನೂ ಅವನಿಗನ್ನಿಸಿರಲಿಲ್ಲ. ಅವನ ಜಾಗದಲ್ಲಿ ಯಾರೇ ಇದ್ದಿದ್ದರೂ ಇದನ್ನೇ ಮಾಡುತ್ತಿದ್ದರು. ಅದು ಸಹಜ ಧರ್ಮ. ಆದರೆ ಅಲ್ಲಿಂದ ಮುಂದಕ್ಕೆ ಆದದ್ದು ಮುಖ್ಯ. ವಿಶೂ ಕರೀಂನಗರಕ್ಕೆ ಹೋಗಿಬಂದ ಒಂದು ತಿಂಗಳೊಳಗಾಗಿ ಜೋಗಿರಾಜು ಮುಂಬಯಿಗೆ ಬಂದ. ಆ ದಿನ ಅಕಸ್ಮಾತ್ ವಿಶೂ ಕರೀಂನಗರಕ್ಕೆ ಹೋಗದೇ ಇದ್ದಿದ್ದರೂ ಅವನು ಬರುವವನೇ ಇದ್ದ ಅನ್ನಿಸಿತು. ಯಾಕೆಂದರೆ ಅವನ ಬಳಿ ವಿಶೂನ ವಿಳಾಸವಿದ್ದೇ ಇತ್ತು. ಒಂದು ಪತ್ರ ಹಾಕಿ ಬಂದೇ ಬರುತ್ತಿದ್ದ. ಆದರೆ ತಮಾಷೆಯ ವಿಷಯವೆಂದರೆ ಜೋಗಿರಾಜು ತಾನು ಊಹಿಸಿದ್ದ ಯಾವ ಪ್ರಕ್ರಿಯೆಯನ್ನೂ ಕೈಗೊಳ್ಳಲಿಲ್ಲ. ’ಸ್ಟೇಷನ್ನಿಗೆ ಬಾ’ ಎಂದು ಕರೆಯಲಿಲ್ಲ. ಬದಲಿಗೆ ’ಮನೆಯಲ್ಲಿ ಅಕಸ್ಮಾತ್ ಇರುವುದಿಲ್ಲವಾದರೆ ಪಕ್ಕದ ಮನೆಯಲ್ಲಿ ಬೀಗದ ಕೈ ಕೊಟ್ಟು ಹೋಗಿರು’ ಎಂದು ಬರೆದಿದ್ದ. ತಾನಾಗಿಯೇ ದಾರಿ ಹುಡುಕಿ ಬರುವ ಹಿಮ್ಮತ್ ತೋರಿಸಿದ್ದನ್ನು ಕಂಡು ವಿಶೂ ಅವಾಕ್ಕಾಗಿದ್ದ.

ಜೋಗಿರಾಜು ಮುಂಬಯಿಗೆ ಬರಲಿದ್ದ ದಿನ ತಾನು ಏನು ಮಾಡಬೇಕೋ ತೋರದೇ ಮನೆಯಲ್ಲೇ ಇದ್ದ ಪುಟ್ಟ ಜಾಗದಲ್ಲಿ ಶಥಪಥ ಹಾಕುತ್ತಿದ್ದ. ಒಬ್ಬನೇ ಇದ್ದನಾದ್ದರಿಂದ ಅಡುಗೆ ಇತ್ಯಾದಿ ಮಾಡುವ ಗೋಜಿಗೆ ಹೋಗಲಿಲ್ಲ. ಏನೇ ಆದರೂ ಸ್ಟೇಷನ್‌ಗೆ ಹೋಗಬಾರದೆಂದು ಯೋಚಿಸುತ್ತಿರುವಷ್ಟರಲ್ಲಿ ಇಡೀ ಸಂಸಾರ ತನ್ನ ಮನೆಯ ಬಾಗಿಲಿನಿಂದ ಎಂಟ್ರಿ ತೆಗೆದುಕೊಂಡು, ಕ್ಷಣಾರ್ಧದಲ್ಲೇ ಮನೆಯನ್ನು ಆಕ್ರಮಿಸಿಕೊಂಡುಬಿಟ್ಟರು. ಜೋಗಿರಾಜು, ಅವನ ಹೆಂಡತಿ ರಮಾ, ಮತ್ತು ಮಕ್ಕಳು ತೆಲುಗಿನಲ್ಲಿ ಕವಕವ ಮಾತನಾಡುತ್ತಾ ಮನೆಯಿಡೀ ಅವರೇ ಆಗಿಬಿಟ್ಟರು. ಶತ್ರುಸೈನ್ಯ ತನ್ನ ಮನೆಯಮೇಲೆ ಆಕ್ರಮಣ ಮಾಡುತ್ತಿರುವಂತೆ ವಿಶೂಗೆ ಅನ್ನಿಸಿತ್ತು. ವಿಶೂನ ಹೆಂಡತಿಯಿರಲಿಲ್ಲವಾದ್ದರಿಂದ ಅವರು ಹೇಗಾದರೂ ಇರಬಹುದಿತ್ತು. ವಿಶೂ ನೋಡನೋಡುತ್ತಿದ್ದಂತೆಯೇ ಅವರುಗಳು ಇದ್ದ ಒಂದೇ ಬೆಡ್‍ರೂಮಿನೊಳಕ್ಕೆ ಹೊಕ್ಕು ಅಲ್ಲಿ ಗಂಟುಮೂಟೆ ಬಿಚ್ಚಲು ಪ್ರಾರಂಭಮಾಡಿದರು. ಜೋಗಿರಾಜು ಬಚ್ಚಲಿಗೆ ಹೋಗಿ ಗೀಜರಿನ ಸ್ವಿಚ್ ಒತ್ತಿ ಬಂದ. ಆನಂತರ ಚಹಾ ಕಾಫಿ ಏನಾದರೂ ಬೇಕೇ ಎಂದು ವಿಶೂನನ್ನೇ ಕೇಳಿದ. ರಮಾ ಹೋಗಿ ಅಡುಗೆ ಮನೆ ಸೇರಿದಳು. "ಮಕ್ಕಳಿಗೆ ಹಸಿವಾಗಿದೆ - ಉಪ್ಪಿಟ್ಟು ಮಾಡುವೆ, ಸ್ವಲ್ಪ ರವೆ ಎಲ್ಲಿದೆ ತೋರಿಸಿ" ಎಂದು ವಿಶೂನನ್ನೇ ಕೇಳಿದಳು. ಮನೆಯಲ್ಲಿ ರವೆ ಇರಲಿಲ್ಲ. ಜೋಗಿರಾಜು ತಕ್ಷಣವೇ ಎದ್ದ "ಬಾ ವಿಶೂ, ರವೆ ತೆಗೊಂಡು ಬರೋಣ" ಎಂದ. ವಿಶೂ ಇವೆಲ್ಲ ನೋಡಿ ನಿಸ್ಸಹಾಯಕನಾಗಿದ್ದ. "ಸರಿ" ಎನ್ನುತ್ತಾ ಅವನೂ ಜೋಗಿರಾಜುವಿನ ಹಿಂದೆ ಹೆಜ್ಜೆ ಹಾಕಿದ.

ಬಂದ ಒಂದು ದಿನದೊಳಗಾಗಿಯೇ ಜೋಗಿರಾಜು, ರಮಾ, ಮಕ್ಕಳು - ಎಲ್ಲರೂ ಚೆನ್ನಾಗಿ ಸೆಟಲ್ ಆದರು. ಮಿಕ್ಕ ಅತಿಥಿಗಳಂತೆ ಅವರು ಮನೆಯವರ ಮೇಲೆ ಭಾರ ಹಾಕುವ ಗೋಜಿಗೆ ಹೋಗಲಿಲ್ಲ. ಅವರು ಇನ್ನೂ ಎಷ್ಟುದಿನ ಇಲ್ಲಿರಬಹುದು ಎಂಬ ಸುದ್ದಿಯೂ ವಿಶೂನ ಬಳಿಯಿರಲಿಲ್ಲ. ಅವನಿಗೆ ಅಫೀಸಿನ ಕೆಲಸ ಇತ್ತಾದ್ದರಿಂದ ಅವನು ಪ್ರತಿನಿತ್ಯ ಬೆಳಿಗ್ಗೆಯೇ ಹೊರಟುಬಿಡುತ್ತಿದ್ದ. ಹೋಗುವಾಗ ಮನೆಯ ಬೀಗದಕೈ ಒಯ್ಯುತ್ತಿದ್ದ. ಡೂಪ್ಲಿಕೇಟನ್ನು ಜೋಗಿರಾಜುವಿಗೆ ಕೊಟ್ಟಿದ್ದ. "ಇಲ್ಲಿ ಅವರಿವರ ಮನೆಯಲ್ಲಿ ಬೀಗದ ಕೈ ಕೊಡುವ ವಾಡಿಕೆ ಇಲ್ಲ. ಯಾಕೆಂದರೆ ಅವರ ಟೈಮಿಗೂ ನಮ್ಮದಕ್ಕೂ ಹೊಂದಾಣಿಕೆ ಆಗಲಾರದು. ಜೊತೆಗೆ ಹೆಚ್ಚಿನ ಪರಿಚಯದವರೂ ಸುತ್ತಮುತ್ತ ಯಾರೂ ಇಲ್ಲ" ಎಂದು ವಿಶೂ ಹೇಳಿದ್ದ.

ಎರಡು ದಿನಗಳ ನಂತರ ಒಂದು ಸಂಜೆ ವಿಶೂ ಆಫೀಸಿನಿಂದ ಬರುವಷ್ಟರಲ್ಲಿ ಮನೆಯಲ್ಲಿ ಜೋಗಿರಾಜುವಿನ ಸಂಸಾರವಲ್ಲದೇ ಬೇರೆಯಾರೋ ಇದ್ದರು. ಬುಚ್ಚಿಬಾಬು ಎಂದು ಆತನ ಹೆಸರಂತೆ. ಆ ಬಿಲ್ಡಿಂಗಿನಲ್ಲಿಯೇ ಇದ್ದಾರೆಂದು ತಿಳಿಯಿತು. ರಮಾ ಹೋಗಿ ಅವರನ್ನು ಪರಿಚಯ ಮಾಡಿಕೊಂಡು ಬಂದಿದ್ದಳು. ಅಷ್ಟರಲ್ಲಿ ಇಷ್ಟೆಲ್ಲಾ ತಿಳಿದುಕೊಂಡು ದೋಸ್ತಿ ಮಾಡಿದ ರಮಾಳ ಬಗ್ಗೆ ವಿಶೂ ಕ್ಷಣದ ಮಟ್ಟಿಗೆ ಅವಾಕ್ಕಾದ. "ಇದೇ ಬಿಲ್ಡಿಂಗಿನಲ್ಲಿದ್ದೂ, ಹೈದರಾಬಾದಿನಲ್ಲಿದ್ದಾಗ ತೆಲುಗು ಕಲಿತೂ, ಇವರ ಪರಿಚಯವಾಗಿಲ್ಲವೆಂದರೆ ಆಶ್ಚರ್ಯ" ಎಂದು ಕುಕ್ಕಿದಳು. ಬಂದವರಿಗೆಲ್ಲಾ ಯಾವ ಹಿಂದೇಟೂ ಇಲ್ಲದೇ ತಿಂಡಿ ಚಹಾ ಹಾಕಿ ಕಳುಹಿಸುತ್ತಿದ್ದಳು.

ಇದರಿಂದ ವಿಶೂಗೆ ಸ್ವಲ್ಪ ಕಷ್ಟವೇ ಆಯಿತೇನೋ. ಅವನು ಬರಬರುತ್ತಾ ತನ್ನ ಮನೆಯಲ್ಲೇ ಹೊರಗಿನವನಾಗುತ್ತಾ ಹೋದ. ಒಂದು ರೀತಿಯಲ್ಲಿ ಇದು ಅವನಿಗೆ ವಿಚಿತ್ರ ಅನುಭವವಾಗಿತ್ತು. ತಾನು ಉಳಿಸಿ, ಬೆವರು ಸುರಿಸಿ, ಕಾಡಿ ಬೇಡಿ, ಸಾಲ ಮಾಡಿ ತನ್ನದಾಗಿಸಿಕೊಂಡಿದ್ದ ಈ ಗೂಡಿನಲ್ಲಿ ಒಂದೇ ವಾರದೊಳಗಾಗಿ ಅವನು ಅತಿಥಿಯಾಗಿಬಿಟ್ಟಿದ್ದ. ಈಗೀಗ ಅವನಿಗೆ ತನ್ನ ಮನೆಗೆ ಬರುವುದಕ್ಕೇ ದಾಕ್ಷಿಣ್ಯವಾಗುತ್ತಿತ್ತು. ಜೊತೆಗೆ ಜೋಗಿರಾಜು ಮೇಲೆ ವಿಪರೀತ ಸಿಟ್ಟೂ ಬರುತ್ತಿತ್ತು. ಇಷ್ಟು ದಿನಗಳಾದರೂ ಹೊರಡುವ ಸುದ್ದಿಯೇ ಎತ್ತದಿದ್ದದ್ದು ಅವನಿಗೆ ಚಿಂತೆಯನ್ನುಂಟುಮಾಡಿತ್ತು. ಈ ಸಂಸಾರ ಇಲ್ಲಿ ಮಾಡುತ್ತಿದ್ದುದು ಏನೆಂಬುದೂ ಅವನಿಗೆ ತಿಳಿದಿರಲಿಲ್ಲ. ಈ ಮನುಷ್ಯ ಸಂಸಾರ ಸಮೇತ ಮುಂಬಯಿಗೆ ಬಂದದ್ದು ಯಾಕೆ ಎನ್ನುವುದೂ ತಿಳಿಯಲಿಲ್ಲ. ಈಗ ಏನಾದರೂ ಮಾಡಿ ಜೋಗಿರಾಜುವನ್ನು ಕೇಳಿಯೇಬಿಡಬೇಕು ಎಂದೆಲ್ಲಾ ಯೋಚನೆ ಮಾಡಿದ. ಅವನು ರಾತ್ರೆ ಮಲಗುವಾಗಲೂ ಇದೇ ಮನಸ್ಸನ್ನು ಆವರಿಸಿತ್ತು.

ಮಾರನೆಯ ದಿನ ಮುಂಜಾನೆ ಎಂದಿನಂತೆ ೫.೦೦ ಗಂಟೆಗೆ ಎಚ್ಚರಗೊಂಡ. ಜೋಗಿರಾಜುವಿನ ಸಂಸಾರ ಬೆಡ್‍ರೂಮನ್ನು ಆಕ್ರಮಿಸಿಕೊಂಡಿತ್ತಾದ್ದರಿಂದ ವಿಶೂ ಮುಂದಿನ ಹಾಲ್‌ಗೆ ವರ್ಗಾವಣೆಗೊಂಡಿದ್ದ. ಆರು ಘಂಟೆಗೆ ಮನೆಯ ಕರೆಗಂಟೆಯ ಸದ್ದಾಯಿತು. ಹಾಲಿನವನು ಬರುವ ಸಮಯವಾದ್ದರಿಂದ ಬಾಗಿಲನ್ನು ಸ್ವಲ್ಪವೇ ತೆರೆದು ಕೈಯನ್ನು ಹೊರಹಾಕಿದ. ಯಾರೋ ಕೈಕುಲುಕಿದಂತಾಯಿತು. ಅವಾಕ್ಕಾಗಿ ದಿಗಿಲಿನಿಂದ ಬಾಗಿಲು ತೆರೆದು ನೋಡಿದರೆ ಬಾಗಿಲ ತುಂಬಾ ಆರಡಿ ಎತ್ತರದ ವ್ಯಕ್ತಿ ನಿಂತಿದ್ದ. ವಿಶೂ ಅವನನ್ನು ಎವೆಯಿಕ್ಕದೇ ನೋಡುತ್ತಾ ದೃಷ್ಟಿಯುದ್ಧಕ್ಕೆ ಸನ್ನದ್ಧನಾದ. ಬಾಗಿಲು ತೆರೆದಾಗಲೂ ಹಿಡಿದ ಕೈಯನ್ನು ಹಿಡಿದೇ ಇದ್ದು, ಕುಲುಕುತ್ತಲೇ:

"ವಿಶೂ?" ಎಂದ

"ಯಸ್"

"ಹಾಯ್ ಐ ಆಮ್ ಸಮೀರ್, ಸಮೀರ್ ರೆಡ್ಡಿ. ಕರೀಂನಗರದಿಂದ ಬಂದಿದ್ದೇನೇ.. ರಮಾ, ಜೋಗಿರಾಜು ಇಲ್ಲೇ ಇದ್ದಾರೆ ಅಲ್ಲವೇ?" ಎಂದು ಅರ್ಧ ತೆಲುಗಿನಲ್ಲಿ, ಅರ್ಧ ಇಂಗ್ಲೀಷಿನಲ್ಲಿ ಕೇಳಿದ. "ಹೌದು, ಒಳಕ್ಕೆ ಬನ್ನಿ" ಎನ್ನುತ್ತಾ ತನಗೆ ಬರದೇ ಇರುವ ಕಿರುನಗೆಯನ್ನು ಬಲವಂತವಾಗಿ ತರಿಸಿಕೊಂಡು ಕೈಹಿಂದಕ್ಕೆಳೆದು ಅವನಿಗೆ ದಾರಿ ಬಿಟ್ಟ. ಅವನು ಒಳಕ್ಕೆ ಬಂದವನೇ ವಿಪರೀತ ಪರಿಚಯದವನಂತೆ ಬೂಟು ಗೀಟು ಬಿಚ್ಚಿ, ಸೂಟ್‍ಕೇಸ್ ತೆಗೆದ. ಆ ವೇಳೆಗೆ ಸರಿಯಾಗಿ ರಮಾ ಎದ್ದು ಕಣ್ಣುಜ್ಜುತ್ತಾ ಬಂದಳು. ಬಂದವಳೇ ಎದುರಿನ ಕುರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ ಪಾದ ಅಲ್ಲಾಡಿಸುತ್ತಾ ಕೂತುಬಿಟ್ಟಳು. ಅವಳ ಖುಷಿ ನೋಡಿ ವಿಶೂ ಅವಾಕ್ಕಾದ. "ಏನಿಲ್ಲ, ಬಿಜಿನೆಸ್ ಮೇಲೆ ಮುಂಬಯಿಗೆ ಬರುವುದಿತ್ತು. ಇವರುಗಳು ಇಲ್ಲಿಗೆ ಬರೋ ವಿಷಯ ಹೇಳಿದ್ದರು. ನೋಡಿ ಹೋಗೋಣ ಅಂತ ಬಂದೆ. ನನಗೂ ಠಾಣಾದಲ್ಲೇ ಕೆಲಸವಿದೆ" ಎಂದು ಹೇಳಿದ. ವಿಶೂ ತಲೆಯಾಡಿಸುತ್ತಾ ಕೂತಿದ್ದ.

ರಮಾ ಮೂವರಿಗೂ ಚಹಾ ಮಾಡಿ ತಂದಳು. ನಂತರ ವಿಶೂ ಕಡೆಗೆ ತಿರುಗಿ: "ಮನೇಲಿ ತರಕಾರಿ, ಸಾಮಾನು ಏನೂ ಇಲ್ಲ. ನೀವು ಹೋಗಿ ನೂಡಲ್ಸ್ ತಂದರೆ, ಎಲ್ಲರಿಗೂ ತಿಂಡಿಗಾಗುತ್ತದೆ" ಎಂದಳು. ವಿಶೂ ಭಂಡತನ ತೋರಿಸಿದ: "ಜೋಗಿರಾಜು ಎದ್ದರೆ ಇಬ್ಬರೂ ಹೋಗಬಹುದು" ಎಂದ. ಅವನು ಬರುವವರೆಗೂ ವಿಶೂ ಅಲ್ಲಾಡಲಾರ ಅನ್ನುವ ಸೂಚನೆ ಸಿಕ್ಕ ಕೂಡಲೇ ಅವಳು ಹೆಜ್ಜೆ ಎಳೆಯುತ್ತಾ ಜೋಗಿರಾಜುವನ್ನು ಎಬ್ಬಿಸಲು ಹೋದಳು.

ಜೋಗಿರಾಜು ಎದ್ದ ಮೇಲೆ ಇಬ್ಬರೂ ನೂಡಲ್ಸ್ ವ್ಯಾಪಾರಕ್ಕಾಗಿ ಹೊರಟರು. "ನೀವೂ ಬೇಕಿದ್ದರೆ ಬರಬಹುದು" ಎಂದು ಸಮೀರನಿಗೆ ಹೇಳಿದರೂ ಅವನು ಬರುವ ಮೂಡಿನಲ್ಲಿರಲಿಲ್ಲ ಎಂದು ವಿಶೂಗೆ ತಿಳಿದಿತ್ತು. ಬಿಲ್ಡಿಂಗಿನಿಂದ ಹೊರಕ್ಕೆ ಹೆಜ್ಜೆ ಇಡುತ್ತಿದ್ದಂತೆ ವಿಶೂ ನೇರವಾಗಿ ಜೋಗಿರಾಜುವನ್ನು ಕೇಳಿಯೇ ಬಿಟ್ಟ: "ಅಲ್ಲವೋ ನಿನ್ನ ಪ್ಲಾನ್ ಏನು? ಇನ್ನೂ ಎಷ್ಟು ದಿನ ಮುಂಬಯಿಯಲ್ಲಿ?"

"ಬಂದಾಗಿನಿಂದಲೂ ನಿನ್ನ ಜೊತೆ ಮಾತಾಡಬೇಕೂಂತ ಇದ್ದೆ ನೋಡು. ಆದರೆ ಸಂದರ್ಭ ಒದಗಲಿಲ್ಲ. ನಿಜಕ್ಕೂ ಹೇಳಬೇಕೆಂದರೆ ನಾನು ಮುಂಬಯಿಗೆ ಕೆಲಸ ಹುಡುಕಿ ಬಂದಿದ್ದೇನೆ. ಕರೀಂನಗರ ನನಗೆ ತುಂಬಾ ಬೇಜಾರು ತರಿಸುತ್ತಿದೆ. ಸಣ್ಣ ಊರಿನ ಪೆಟಿ ಕಿರಿಕಿರಿಗಳು.. ಅದಕ್ಕೆ ಬದಲು ಇಲ್ಲಿ ಬಂದು ಅನಾಮಿಕನಾಗಿ ಬಾಳಬೇಕೂಂತ ನನ್ನ ಆಸೆ. ಹಾಗೆ ನೋಡಿದರೆ ಹೈದರಾಬಾದೂ ಕರೀಂನಗರದಿಂದ ಹೆಚ್ಚಿನ ದೂರದಲ್ಲಿಲ್ಲ. ಆದ್ದರಿಂದ ಮುಂಬಯಿಯೇ ವಾಸಿ"

"ಅಲ್ಲ ಕಣಯ್ಯ ಅಷ್ಟೊಂದು ಭೂಮಿಕಾಣಿ ಇರೋನು, ಅದೇ ಇರಲೀಂತ ಕೆಲಸ ಬಿಟ್ಟು ಹೋದವನು, ಈಗ ಹೀಗೆ ಪ್ಲೇಟು ಫಿರಾಯಿಸಿ ಮಾತಾಡುತ್ತಿದ್ದೀಯಲ್ಲಾ... ಹೇಗೆ?"

"ನೋಡು, ಆ ಊರು ಪುಟ್ಟದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ಜಾಗವಲ್ಲ. ಜೊತೆಗೆ ಬೇರೆ ಸಣ್ಣ ಪುಟ್ಟ ತೊಂದರೆಗಳಿವೆ. ನಿನಗೆ ಹೇಳುವಂತಹದ್ದಲ್ಲ. ನನಗೆ ಅಲ್ಲಿಂದ ದೂರ ಹೋಗಬೇಕಾಗಿದೆ ಅಷ್ಟೇ. ಅದಿರಲಿ, ನಿನಗೆ ಯಾರಾದರೂ ಗೊತ್ತಿದ್ದರೆ ಒಂದು ಮಾತು ಹೇಳು. ನಾಳೆ ನನಗೆ ಇಲ್ಲಿ ಕೆಲಸದ ಸಂದರ್ಶನವಿದೆ. ಅದು ಕೊಟ್ಟು ಹೋಗುವುದಕ್ಕೇ ಬಂದಿರೋದು. ಆಚೆ ನಾಡಿದ್ದು ಹೊರಡಲು ಹೈದರಾಬಾದಿನಿಂದಲೇ ಟಿಕೇಟು ಮಾಡಿಸಿ ಬಂದಿದ್ದೇನೆ."

"ನೀನು ಕರೀಂನಗರದಿಂದ ಇಲ್ಲೀವರೆಗೆ ಕೆಲಸ ಹುಡುಕಿ ಬರುವುದು ಯಾಕೆಂದು ನನಗೆ ಇನ್ನೂ ಅರ್ಥವಾಗಿಲ್ಲ. ಅದೂ ಎಟ್ ದಿಸ್ ಸ್ಟೇಜ್ ಇನ್ ಲೈಫ್. ಅಲ್ಲಿ ಚೆನ್ನಾಗಿ ಸೆಟಲ್ ಆಗಿದ್ದೀ.. ಏನೇ ಆದರೂ ಈ ಬಗ್ಗೆ ತಲೆಕೆಡಿಸಿಕೋಬಾಕಾದವನು ನೀನು, ನಾನಲ್ಲ. ಇರಲಿ, ನಿನ್ನ ಬಯೋಡೇಟಾ ಕೊಡು. ಪ್ರಯತ್ನಿಸುತ್ತೇನೆ. ಬಂದ ತಕ್ಷಣ ಕೊಟ್ಟಿದ್ದರೆ, ಬಹುಶಃ ಏನಾದರೂ ಮಾಡಬಹುದಿತ್ತೇನೋ. ನಾನು ನೀವುಗಳು ಊರು ನೋಡಲು ಬಂದಿದ್ದೀರ ಅಂದುಕೊಂಡಿದ್ದೆ."

ಹೀಗೆ ನೂಡಲ್ಸ್ ಕೊಳ್ಳಲು ಹೋಗಿ ಅವರುಗಳು ತಮ್ಮೊಳಗಿನ ವಿಚಾರಗಳನ್ನು ತೋಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೂ ಅವರುಗಳ ನಡುವೆ ಹತ್ತು ವರ್ಷಗಳ ಸಮಯದ ಅಂತರವಿತ್ತು. ಜೋಗಿರಾಜು ಎದುರಿಗಿದ್ದಾಗ ಆ ಹಳೆಯ ದಿನಗಳು ನೆನಪಾಗಿ ವಿಶೂ ಕರಗಿ ಹೋಗುತ್ತಿದ್ದ. ಹಾಗೆ ಯಾಕಾಗುತ್ತದೆಂದು ಅವನಿಗೆ ತಿಳಿಯದಾಗಿತ್ತು. ಆದರೂ ವಿಶೂಗೆ ಎಲ್ಲಕ್ಕಿಂತ ಸಿಟ್ಟು ಬರಲು ಜೋಗಿರಾಜುವಿನ ಇಡೀ ಸಂಸಾರ ತನ್ನ ಖಾಸಗೀ ಸ್ಥಳ ಮತ್ತು ಸಮಯವನ್ನು ಆಕ್ರಮಿಸಿಕೊಳ್ಳುತ್ತಿದ್ದ ರೀತಿಯೇ ಕಾರಣವಾಗಿತ್ತು.

ನೂಡಲ್ಸ್ ಕೊಂಡು ವಾಪಸಾಗುವ ದಾರಿಯಲ್ಲಿ ವಿಶೂ ಜೋಗಿರಾಜುವನ್ನು ಕೇಳಿದ: "ಈಗಷ್ಟೇ ಎಂಟ್ರಿ ತೆಗೊಂಡ ಈ ಮಹಾನುಭಾವ ಯಾರು?" ಬಂದ ಮನುಷ್ಯ ತನಗೆ ಒಂದಿಷ್ಟೂ ಹಿಡಿಸಿಲ್ಲ ಎಂಬುದನ್ನು ಸ್ಪಷ್ಟ ಮಾಡುವುದೂ ವಿಶೂವಿನ ಉದ್ದೇಶವಾಗಿತ್ತು.

"ಅವನದೇ ಒಂದು ಕಥೆ" ಎಂದ ಜೋಗಿ. ಅವನು ಪ್ರಾರಂಭ ಮಾಡಿದ ರೀತಿಯಲ್ಲೇ ಜೋಗಿಗೂ ಅವನನ್ನು ಕಂಡರೆ ಅಸಮಾಧಾನವಿತ್ತು ಎನ್ನುವುದು ಸ್ಪಷ್ಟವಾಗಿತ್ತು. "ಈ ಸಮೀರ್ ರೆಡ್ಡಿ ಕರೀಂನಗರದ ಶ್ರೀಮಂತ. ಪ್ರತೀ ವರ್ಷ ಒಂದು ಹೊಸ ವ್ಯಾಪಾರ ಪ್ರಾರಂಭಿಸಿ ಅದರಲ್ಲಿ ದುಡ್ಡು ಕಳಕೊಳ್ಳುತ್ತಾನೆ. ಅವನಷ್ಟೇ ಶ್ರೀಮಂತ ಕುಟುಂಬದಿಂದ ಬಂದಿರೋ ಅವನ ಹೆಂಡತಿ ದಿನವೂ ಈ ವಿಷಯವನ್ನೆತ್ತಿ ಕಿತ್ತಾಡುತ್ತಾಳೆ. ಇವನು ಆದಷ್ಟೂ ಮನೆಯಿಂದ ದೂರವಿರೋ ನೆಪದಲ್ಲಿ ಅಲ್ಲಿ, ಇಲ್ಲಿ ಓಡಾಡುತ್ತಾ ಇರುತ್ತಾನೆ."

"ಆದರೆ ಇವನು ನಿನಗೆ ಹೇಗೆ ತಗಲಿಕೊಂಡ?" ವಿಶೂ ಅಷ್ಟಕ್ಕೇ ಬಿಡದೇ ಕೇಳಿದ.

"ರಮಾ ಅವನ ಅಂಗಡಿಹೊಂದರಲ್ಲಿ ರಿಸೆಪ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದಳು" ಎಂದಷ್ಟೇ ಹೇಳಿದ. ಜೋಗಿರಾಜು ಹೇಳಿದಷ್ಟು ನೇರವಾಗಿ, ಸರಳವಾಗಿ ಈ ವಿಷಯ ಇರಲಿಲ್ಲ ಎಂದು ವಿಶೂಗೆ ಅನ್ನಿಸಿತಾದರೂ ಅವರ ಖಾಸಗೀ ವಿಚಾರಗಳು ತನಗ್ಯಾಕೆ ಅಂತ ಸುಮ್ಮನಾದ.

ಅವರು ಮನೆಗೆ ಬಂದು ಕಾಫಿ ಕುಡಿಯುವಷ್ಟರಲ್ಲಿ ಊರಿನಿಂದ ಫೋನು ಬಂತು. ವಿಶೂವಿನ ಹೆಂಡತಿ ಹೆಣ್ಣು ಮಗುವನ್ನ ಹಡೆದಿದ್ದಳು. ಈ ಸಂತೋಷದ ಸುದ್ದಿ ಬಂದ ತಕ್ಷಣ ಅವನು ಊರಿಗೆ ಹೋಗುವ ತಯಾರಿ ನಡೆಸಿದ. ಇಲ್ಲಿನ ಕಥೆ ಸಂಕೀರ್ಣಗೊಳ್ಳುವಷ್ಟರಲ್ಲಿ ತಾನು ಇಲ್ಲಿಂದ ಬಚಾವಾಗುತ್ತಿರುವುದು ಅವನ ಮನಸ್ಸಿಗೆ ನೆಮ್ಮದಿ ತಂದಿತ್ತು. ಒಂದು ವಾರದ ಮಗುವಿನೊಂದಿಗೆ ಹೊಸ ಜೀವನ ಪ್ರಾರಂಭಿಸಬಹುದು ಎನ್ನುವ ವಿಚಾರವನ್ನು ಮೆಲುಕುಹಾಕುತ್ತ ಅವನು ಊರಿಗೆ ಹೊರಟು ನಿಂತ.

ಹದಿನೈದು ದಿನಗಳ ರಜೆಯನ್ನು ಊರಲ್ಲಿ ಕಳೆದು ವಾಪಸ್ಸಗಿ ಮನೆಯನ್ನು ಪ್ರವೇಶಿಸಿದಾಗ ವಿಶೂಗೆ ಬಹಳವೇ ಖುಷಿಯಾಯಿತು. ಇದೀಗ ತನ್ನ ಎಲ್ಲ ಹಣವನ್ನೂ ಸುರಿದು ಕೊಂಡುಕೊಂಡ ಹೊಸ ಮನೆಯ ಗೃಹಪ್ರವೇಶ ಮಾಡುತ್ತಿರುವಂತೆ ಅವನಿಗೆ ಅನ್ನಿಸಿತು. ಕಡೆಗೂ ಮನೆ, ಮತ್ತೆ ತನ್ನದಾಯಿತಲ್ಲಾ... !!

ಮೂರು ತಿಂಗಳ ನಂತರ ಹೆಂಡತಿ, ಮಗಳು ವಾಪಸ್ಸು ಮನೆಗೆ ಮತ್ತೆ ಪ್ರವೇಶಿಸಿದರು. ಪುಟ್ಟ ಮಗುವಿನೊಂದಿಗೆ ಹೊಸ ದಿನಚರಿಗೆ ಹೊಂದಿಕೊಳ್ಳುತಾ ಇದ್ದ ಆ ದಿನಗಳಲ್ಲಿ ಒಂದು ದಿನ ಮುಂಜಾನೆ ಮನೆಯ ಕರೆಗಂಟೆಯ ಸದ್ದು ಕೇಳಿಸಿತು. ಬಾಗಿಲು ತೆರೆದರೆ ಎದುರಿಗೆ ಜೋಗಿರಾಜು ನಿಂತಿದ್ದ.

"ಏನಿಲ್ಲಾ ಇಂಟರ್ವ್ಯೂಗೆಂದು ಬಂದಿದ್ದೆನಲ್ಲಾ.. ಆ ಕೆಲಸ ಸಿಕ್ಕಿದೆ. ನಾವುಗಳು ಮನೆ ಸಿಗೋತನಕ ಇದೇ ಬಿಲ್ಡಿಂಗಿನ ಬುಚ್ಚಿಬಾಬು ಮನೇಲಿ ಇಳಕೊಂಡಿದ್ದೇವೆ. ಬುಚ್ಚಿಬಾಬು ನಿನಗೆ ನೆನಪಿರಬಹುದು. ಹೋದ ಸರ್ತಿ ರಮಾ ನಿನಗೆ ಪರಿಚಯ ಮಾಡಿಸಿಕೊಟ್ಟಿದ್ದಳಲ್ಲಾ.."

"ಬಹಳ ಸಂತೋಷ. ಅಂದಹಾಗೆ ಕರೀಂನಗರದ ಬೇಸ್? ಮಾರಿಬಿಟ್ಟೆಯಾ?"

"ಹೌದು. ನಾನು ಮತ್ತೆ ಅಲ್ಲಿಗೆ ಹೋಗಬಾರದು ಅಂತ ನಿರ್ಧಾರ ಮಾಡಿದ್ದೇನೆ. ಐ ಜಸ್ಟ್ ವಾಂಟ್ ಟು ಫರ್ಗೆಟ್ ಇಟ್" ಎಂದೆಲ್ಲಾ ಕಾಫಿ ಹೀರುತ್ತಾ ಜೋಗಿರಾಜು ಹೇಳಿದ.

ಅಂತೂ ಮಿತ್ರ -- ಊರಿಗೆ ಬಂದಿದ್ದಾನೆ ಎಂದಾದ ಮೇಲೆ ಅವನಿಗೆ ಆದಷ್ಟೂ ಸಹಾಯ ಮಾದಬೇಕು ಎಂದು ವಿಶೂ ದಂಪತಿಗಳು ನಿರ್ಧರಿಸಿದರು. ಅವನಿಗಾಗಿ ತಾವೂ ಮನೆ ಹುಡುಗುವ ಪ್ರಕ್ರಿಯೆ ಪ್ರಾರಂಭಿಸಿದರು. ಕರೀಂನಗರದ ಆಸ್ತಿ ಮಾರಾಟ ಮಾಡಿದ್ದರಿಂದ ಒಂದು ಸಣ್ಣ ಫ್ಲಾಟ್ ಕೊಳ್ಳುವಷ್ಟು ಹಣ ಜೋಗಿರಾಜುವಿನ ಬಳಿಯಿತ್ತು. ಎರಡು ವಾರಗಳೊಳಗಾಗಿ ಅವನು ಒಂದು ಫ್ಲಾಟನ್ನು ಖರೀದಿಸಿಯೂ ಬಿಟ್ಟ. ಊರಿನಿಂದ ಸಾಮಾನು ಬರುವಷ್ಟರಲ್ಲಿ ಒಂದು ಸಣ್ಣ ಪೂಜೆ ಮಾಡಿ ಹಾಲುಕ್ಕಿಸುವುದು ಎಂದೂ ನಿರ್ಧಾರ ಮಾಡಿದ್ದಾಯಿತು. ಮಾರನೆಯ ದಿನದ ಪೂಜೆಗೆ ಹೋದಾಗ ಅವರಿಗೆ ಏನು ಕೊಡುವುದು ಎಂದು ಯೋಚಿಸುತ್ತಾ ವಿಶೂ ಕುರ್ಚಿಯನ್ನು ಎಳೆದು ಬಾಲ್ಕನಿಗೆ ಬಂದ. ಕೂತು ಪೇಪರ್ ಕೈಯಲ್ಲಿ ಹಿಡಿಯುತ್ತಿರಲು...

ಕೆಳಗೆ ಟ್ಯಾಕ್ಸಿಯ ಸದ್ದಾಯಿತು. ಕುತೂಹಲದಿಂದ ತಲೆ ಎತ್ತಿ ನೋಡಿದ. ಟ್ಯಾಕ್ಸಿಯ ಟಾಪಿನಿಂದ ಎರಡು ಸೂಟ್‍ಕೇಸ್‍ಗಳನ್ನು ಇಳಿಸಿ ಹೊರಲಾರದೇ ಹೊತ್ತು ಹೋಗುತ್ತಿದ್ದ ವ್ಯಕ್ತಿ: ಸಮೀರಿ ರೆಡ್ಡಿ!

ಕೆಲವು ಕಥೆಗಳ ಅಂತ್ಯ ಹೇಗೇ ಇದ್ದರೂ ಅದು ಕೆಲವರಿಗೆ ಸುಖಾಂತ, ಕೆಲವರಿಗೆ ದುಃಖಾಂತ ಅಂತ ವಿಶೂಗೆ ಅನ್ನಿಸಿತು. ಅವನು ಮತ್ತೆ ನ್ಯೂಸ್ ಪೇಪರಿನಲ್ಲಿ ತಲೆ ಹುದುಗಿಸಿದ.

ಜೂಲೈ ೧೯೯೫



No comments:

Post a Comment