Wednesday, December 16, 2009

ಅವರವರ ಸತ್ಯ




"Grant an idea or belief to be true.
What concrete difference will its being
true make in anyone's actual life?
How will the truth be realised?
What experiences will be
different if the belief were false?
What, in short is the truth's cash
value in experimental terms?"

William James in Pragmatism


ಭಾಸ್ಕರರಾಯರು ಚಿಂತಿತರಾದರು.

ಅದೇನೂ ಹೊಸ ವಿಷಯವಾಗಿರಲಿಲ್ಲ. ಮೈಸೂರು ಬೆಂಗಳೂರುಗಳ ನಡುವೆ ಎಡತಾಕುವಾಗಲೂ, ಹಾಗೂ ಈಗಲೂ ಮಕ್ಕಳ ನಡುವೆ ಹಂಚಿಹೋದ ಭಾಸ್ಕರರಾಯರು ಈಗೀಗ ಎಲ್ಲಕ್ಕೂ ಮೂಕ ಪ್ರೇಕ್ಷಕರು. ಸದಾನಿರಂತರ ಚಿಂತಿತರು. ಎಪ್ಪತ್ತೈದರ ವಯಸ್ಸು ಸಾಮಾನ್ಯದ್ದೇನೂ ಅಲ್ಲ. ಅದು ಚಿಂತಿಸುವ ಚಿಂತೆಯುಂಟುಮಾಡುವ ವಯಸ್ಸು.

ಈ ಶ್ರಾವಣನಿಗೆ ಮೊದಲೇ ಹೆಳಿದ್ದುಂಟು. ಬೇಡವೆಂದು. ಈ ಹೈದರಾಬಾದು ಬೇಡಲೇ ಬೇಡ ಎಂದು. ಎಲ್ಲೋ ದೂರದೂರಿನಲ್ಲಿ ತೆಲುಗರ ತುರುಕರ ನಡುವೆ ಹಂಚಿಹೋಗಿ "ಪರದೇಶಿ" ಆಗುವುದು ಬೇಡ - ಅದರಲ್ಲೂ ಬೆಂಗಳೂರು ಮೈಸೂರುಗಳಲ್ಲಿ ಬೆಚ್ಚನೆಯ ಸರಕಾರಿ ಕಾರಕೂನಕಿ ದೊರೆಯುವಾಗ ಸಿಕ್ಕಸಿಕ್ಕಲ್ಲೆಲ್ಲ ಓಡಾಡುವುದು ಬೇಡವೆಂದು ಟಿಪಿಕಲ್ ಹಳೇ ಮೈಸೂರು ಶೈಲಿಯಲ್ಲಿ ಹೇಳಿದರೂ ಅವನು ಕೇಳಿರಲಿಲ್ಲ. ಬಂದೇ ಬಂದು ಇಲ್ಲೊಂದು ಮನೆಯ ಮಾಡಿದ. ಅದೂ ಎಲ್ಲಿ, ಚಾದರಘಾಟ್ ಸೇತುವೆ ದಾಟಿ ಹಳೇ ನಗರಕ್ಕಂಟಿನಿಂತ ಹೊಸ ಪ್ರಾಂತವೊಂದರಲ್ಲಿ.

ಹೀಗೆಲ್ಲಾ ದೂರದ ಮಗನನ್ನು ನೆನೆಸಿ ನೊಂದು ಕುಳಿತಿದ್ದ ಭಾಸ್ಕರರಾಯರು ಇದೀಗ - ಕೆಲದಿನಗಳ ಮಟ್ಟಿಗೆಂದು - ಅವನಲ್ಲಿಗೇ ಬಂದಿದ್ದರು. ಹಾಗೂ ಬಂದ ದಿನದಿಂದಲೇ ಪ್ರತಿದಿನವೂ ವಾಪಸ್ಸು ಹೋಗುವ ಆಸೆಯಲ್ಲಿ ಸೂಟ್‍ಕೇಸ್ ಕಟ್ಟುವ ಕೆಲಸ ಪ್ರಾರಂಭ ಮಾಡಿದ್ದರು. ಸರ್ವೀಸಿನಲ್ಲಿದ್ದಾಗಲೂ ಅಷ್ಟೇ - ಯಾವುದಾದರೂ ಊರಿಗೆ ವರ್ಗವಾದ ಕೂಡಲೇ ಭಾಸ್ಕರರಾಯರು ರುಜು ಹಾಕುತ್ತಿದ್ದ ಮೊದಲ ಕಾಗದವೆಂದರೆ - ಮೈಸೂರಿಗೆ ಮರುವರ್ಗ ಕೋರುವ ಅರ್ಜಿ! ಹೀಗಾಗಿ ಈ ಪರಕೀಯತೆ ಅವರಿಗೆ ಹೊಸದೇನೂ ಅಲ್ಲ. ಹಾಗೆಯೇ ಇದನ್ನು ಬಿಟ್ಟು ಓಡಿ, ಆ ಮೂಲಕ ವಿಜಯ ಸಾಧಿಸುವ ಆಶಾವಾದವೂ ಹೊಸದಾಗಿರಲಿಲ್ಲ.
ಆಗ, ಸೇತುವೆಯಾಚೆಯ ಅಕಬರಬಾಗಿನಲ್ಲಿ ಮನೆಮಾಡಿದಾಗಲೇ ಇಲ್ಲಿನ ಒಂಟಿತನ ಖಾಲಿತನ ಭಾಸ್ಕರರಾಯರಿಗೆ ಬೇಸರ ತರಿಸಿತ್ತು. ಅವನಿಲ್ಲಿ ಮನೆ ಮಾಡಿದಾಗ ಸುತ್ತಮುತ್ತ ಒಂದು ಮನೆಯೂ ಇದ್ದಿದ್ದಿಲ್ಲ. ಅದು ಹದಿನೈದು ವರ್ಷಗಳಿಗೂ ಹಿಂದಿನ ಮಾತು. ಕಡೆಗೆ ಮನಸ್ಸಿಗೊಂದು ಧೈರ್ಯದ ಭಾವನೆ ನೀಡುವ ಕಾಂಪೌಂಡೂ ಮನೆಯ ಸುತ್ತ ಇರಲಿಲ್ಲ. ಆದರೂ ಆಗ ಈ ಎಲ್ಲ ವಿಷಯಗಳು ರಾಯರನ್ನು ಆಳವಾಗಿ ಕಲಕಿರಲಿಲ್ಲ ಎಂದು ಈಗ ಯೋಚಿಸಿದಾಗ ಅನ್ನಿಸುತ್ತದೆ. ಕಾರಣ:ಆಗಿನ್ನೂ ಭಾಸ್ಕರರಾಯರು ಸರ್ವೀಸಿನಲ್ಲಿದ್ದಂತೆ ನೆನೆಪು. ಇದೀಗ ಅವರು ನಿವೃತ್ತಿ ತಂದ ಅನೇಕ ತೊಂದರೆಗಳಲ್ಲಿ ತಮ್ಮನ್ನು ತಾವೇ ಸಿಲುಕಿಸಿಕೊಂಡಿದ್ದಾರೆ. ಇರುವ ಮೂರು ಮಕ್ಕಳ ನಡುವೆ ಹಂಚಿಹೋಗಿರುವುದು, ’ಅನಿಕೇತನ’ನಾಗಿ ಮಗನಿಂದ ಮಗನಿಗೆ, ಊರಿಂದ ಊರಿಗೆ ಪ್ರಯಾಣ ಬೆಳೆಸಿ ಇಳಿವಯಸ್ಸಿನ ಸಕಲ ಕಷ್ಟಗಳನ್ನೂ ಅನುಭವಿಸುತ್ತಿದ್ದಾರೆ. ಎಪ್ಪತ್ತೈದೆಂದರೆ, ತಾಪತ್ರಯವೂ ಅಷ್ಟೇ. ವಯಸ್ಸಿಗೊಂದೊಂದು ವರ್ಷ ಸೇರಿದಂತೆ, ಒಂದೊಂದು ತೊಂದರೆ, ಒಂದೊಂದು ಹೊಸ ರೋಗ, ಹೊಸ ಮಾತ್ರೆ, ಹೊಸ ಚಿಂತೆ.... ಹಳೆತೆಂದರೆ ದೇಹವೊಂದೇ.

***

ಅಪ್ಪ ಬಂದಂದಿನಿಂದಲೂ ಶ್ರಾವಣ ಅವರ ಬಗ್ಗೆ ಅನೇಕ ಬಾರಿ ಯೋಚಿಸಿದ್ದಾನೆ. ಸುಮ್ಮನೆ ಮೌನವಾಗಿ ಪುಸ್ತಕ ಓದುವ ಅಪ್ಪನಿಗೆ ಕಾಲಹರಣಕ್ಕಾಗಿ ಏನಾದರೂ ಒದಗಿಸಬೇಕು. ಮೈಸೂರಿನಿಂದ ಇಲ್ಲಿಗೆ ಬಂದಾಗಲೆಲ್ಲ ಅಪ್ಪ ಹೀಗೇ. ಏಕೋ ವಿಲಿವಿಲಿ ಒದ್ದಾಡುತ್ತಾರೆ. ಆದರೂ, ಎಷ್ಟುದಿನವೆಂದು ಅಪ್ಪನನ್ನು ಮಹೇಶನ ಬಳಿಯೇ ಬಿಟ್ಟಿರುವುದು. ತನ್ನ ಜವಾಬ್ದಾರಿ ಇಲ್ಲವೇ? ಹಾಗೆ ನೋಡಿದರೆ ಅಪ್ಪ ಎಂದಿಗೂ ಯಾವ ಮಕ್ಕಳಿಗೂ ತೊಂದರೆ ಕೊಟ್ಟವರೇ ಅಲ್ಲ. ಅವರಿಗೆ ಈ ತನ್ನ ಮನೆಯಲ್ಲಿರುವುದಕ್ಕೆ ಇಷ್ಟವೇ ಆದರೂ, ಅಕಬರಬಾಗಿನ ವಾತಾವರಣ ಹಿಡಿಸುವುದಿಲ್ಲ ಎನ್ನಿಸುತ್ತದೆ. ಅಪ್ಪ ಬಂದರೆ ಅವರಿಗೂ ನೆಮ್ಮದಿಯಿರಲೆಂದೇ ತಿರುಮಲಗಿರಿಯಲ್ಲಿ ತಾನೊಂದು ಸೈಟು ಕೊಂಡದ್ದೂ ಆಗಿದೆ. ಸೈಟು ಕೊಳ್ಳಲು ಅಪ್ಪ ಒಂದೇ ಕಾರಣವಲ್ಲವಾದರೂ ಆ ನಿರ್ಧಾರ ಮಾಡಿದಾಗ ಅಪ್ಪ ತನ್ನ ಮನಸ್ಸಿನಲ್ಲಿದ್ದದ್ದು ನಿಜ. ಈಗ ಹೇಗಾದರೂ ಮಾಡಿ ಅಲ್ಲೊಂದು ಮನೆ ಕಟ್ಟಿಬಿಟ್ಟರೆ, ಸ್ವಲ್ಪ ಶಾಂತಿಯಿಂದಿರಬಹುದು. ಜನ ಕಮ್ಮಿಯಿದ್ದಷ್ಟೂ ಮೈಸೂರಿನ ವಾತಾವರಣಕ್ಕೆ ಹತ್ತಿರವಾಗುವುದೆಂದು ಶ್ರಾವಣ ಭಾವಿಸಿದ್ದಾನೆ. ಆಗಾಗ ಅನ್ನಿಸುತ್ತದೆ - ಈ ಅಕಬರಬಾಗಿನಲ್ಲಿ ಮನೆ ಮಾಡುವುದಕ್ಕೆ ಮೊದಲು ಈ ಎಲ್ಲ ಆಯಾಮಗಳನ್ನೂ ಯೋಚಿಸಬೇಕಿತ್ತು ಎಂದು. ಆದರೂ ಇದನ್ನು ಕೊಂಡಾಗ ಕೈಲಿದ್ದ ಹಣದಲ್ಲಿ ಬೇರೇನು ಮಾಡಬಹುದಿತ್ತು ಎಂಬ ಸಮಜಾಯಿಷಿಯ ಸಮಾಧಾನವನ್ನೂ ಶ್ರಾವಣ ತನಗೆ ತಾನೇ ಹೇಳಿಕೊಳ್ಳುವನು. ಈ ಬಾರಿ ಸಮಯವಾದಾಗ, ಅಪ್ಪನ ಮೂಡನ್ನು ನೋಡಿ ಎಲ್ಲವನ್ನೂ ವಿವರಿಸಿ ಹೇಳಬೇಕು. ಚಿಂತೆ ಮಾಡಬೇಡ ಎಂದೂ. ಈ ಮನೆಯನ್ನು ಖಾಲಿ ಮಾಡುವು ವಿಷಯ ಅವರಿಗೆ ಸಾಕಷ್ಟು ಸಮಾಧಾನವನ್ನು ತಂದೀತು. ಆದರೂ ಈಚೀಚೆಗೇಕೋ ಅಪ್ಪನೊಂದಿಗೆ ಸಂವಹನವೇ ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುತ್ತದೆ. ತಾನು ಹೇಳಿದ್ದನ್ನು ಅಪ್ಪ ಅನುಮಾನದ ದೃಷ್ಟಿಯಿಅಂದ ನೋಡುತ್ತಾರೆ ಎಂಬ ಅನುಮಾನವೇ ಶ್ರಾವಣನನ್ನು ಆವರಿಸಿಬಿಟ್ಟಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ; ಹಿಂದೆ ಅಪ್ಪ ಹೇಳಿದ ಒಂದು ಮಾತಿಗೂ ತಾನು ಸೀರಿಯಸ್ಸಾಗಿ ಕಿವಿಗೊಟ್ಟಿಲ್ಲ. ಈ ಮನೆಯನ್ನು ಕೊಡಿಸಿದ ಷಫೀಕ್ ಸಾಬರ ನೆರವಿನಿಂದಲೇ ಇದು ಮಾರಾಟವೂ ಆಗಿಬಿಟ್ಟಿರೆ - ಹೊಸ ಮನೆಯೊಂದನ್ನು ನಿರ್ಮಿಸಬಹುದೆಂದೆಲ್ಲಾ ಶ್ರಾವಣ ಕನಸು ಹೆಣೆಯುತ್ತಾನೆ. ಅಪ್ಪ ಈಚೀಚೆಗೆ ಯಾಕೋ ಜನರನ್ನು ಕಂಡರೆ ಅಂಜಿ ರೂಮಿಗೋಡುತ್ತಾರೆ. ಯಾಕೋ ಕ್ಲಾಸ್ಟ್ರೋಫೊಬಿಕ್ ಆಗುತ್ತಿದ್ದಾರೆ ಎನ್ನಿಸುವ ಅವರ ವರ್ತನೆ ತನಗರ್ಥವಾಗಿಲ್ಲ. ಬಹುಶಃ ಇದಕ್ಕೆಲ್ಲ ಹೊಸಮನೆಯೇ ಉತ್ತರ ಎಂದು ಕನಸುವ ಶ್ರಾವಣನಿಗೆ ತಾನು ನಲವತ್ತು ದಾಟಿದ ನಂತರವೂ ಇನ್ನೂ ಕನಸು ಕಟ್ಟುವ ಕೆಲಸವನ್ನು ಬಿಟ್ಟಿಲ್ಲವಲ್ಲ ಎಂದು ನೆನಪಾದಾಗ ನಗೆಯುಕ್ಕಿ ಅದು ತನ್ನ್ ಯೌವನ ಇನ್ನೂ ಬತ್ತಿಲ್ಲ ಎಂಬುದರ ಸಂಕೇತವಿರಬಹುದು ಅನ್ನಿಸಿ ಅತೀವ ಆನಂದವೂ ಆಗುವುದು.

ಆದರೆ ಇದೀಗ ಭಾಸ್ಕರರಾಯರ ಚಿಂತೆಯ ವಿಷಯ ಇಂತೆಂದು ಹೇಳುವುದು ಕಷ್ಟವಿತ್ತು. ಅವರಿಗೆ ಆಗಾಗ ಅನಿಸುತ್ತದೆ: ಹೀಗಾಗಬಾರದಿತ್ತು ಎಂದು. ಅಥವಾ ಅದು ಹೀಗೆಯೇ ಆಗುವುದಿತ್ತೇನೋ. ಎಲ್ಲವೂ ಹುಟ್ಟಿನಿಂದ ಪಡೆದು ಬಂದದ್ದೆಂಬ ವಿಧಿವಿಲಾಸವಾದವನ್ನು ಮೈಗೂಡಿಸಿಕೊಂಡು ನಿರ್ಲಿಪ್ತವಾಗಿದ್ದುಬಿಡುವುದೂ ಸರಳವಾಗಿರಲಿಲ್ಲ. ಈಚೀಚೆಗೆ ಬಿಡಿಸಿಕೊಳ್ಳಲು ಸಾಧ್ಯವೇ ಆಗದ ದುರಭ್ಯಾಸವೊಂತು ಅಂಟಿಕೊಂಡಿದೆ. ಹಿಂದೆ ಅಜ್ಜ ಬಂದು "ಏಳು ಮುದ್ದಿನ ಗಿಣಿಯೆ ಏಳು ಮಾತಿನ ಖಣಿಯೆ ಏಳೂ ಬೆಳಗಾಯಿತು" ಎಂದು ಎಬ್ಬಿಸುತ್ತಿದ್ದ ಬಾಲ್ಯದ ನೆನಪು ಈಗ ನೆನಪು ಮಾತ್ರ. ಈಗ ಹಾಗೆ ಮೊಮ್ಮಗನನ್ನು ಎಬ್ಬಿಸುವುದೂ ಸಾಧ್ಯವಿಲ್ಲ! ರಾತ್ರೆ ನಿದ್ರೆ ಬರುವುದೂ ತಡ.. ಅದೂ ಸರಿಯಾಗಿ ಬರುವುದಿಲ್ಲ. ಎಲ್ಲರೂ ದೂರದರ್ಶನ ನೋಡಿ ರಾತ್ರೆ ಹನ್ನೂಂದಕ್ಕೆ ಹಾಲು ಸುರಿವ ಹಾಲಿನವನೊಂದಿಗೆ ರಾಜಕೀಯ ಚರ್ಚಿಸಿ ನಂತರ ದೀಪ ನಂದಿಸಿ ಮಲಗುವವರೆಗೂ ಏನೂ ತೋಚುವುದಿಲ್ಲ. ರಾತ್ರೋ ರಾತ್ರಿ ಹಾಲು ಸುರಿಯುವುದೂ ಈ ಅಕಬರಬಾಗಿಗೇ ಪ್ರತ್ಯೇಕವೆನ್ನಿಸುತ್ತದೆ. ಅದನ್ನೇ ದೊನವೂ ಚಕಿತರಾಗಿ ಯೋಚಿಸುವ ರಾಯರಿಗೆ ಮಲಗಿದ ನಂತರವೂ ನಿದ್ರೆ ಸರಳವಾಗಿ ಬರುವುದೆಂದೇನೂ ಅಲ್ಲ! ಯಾವಾಗಲೋ ಸಮಯ ತಿಳಿಯದೆಯೇ ಕಣ್ಣಿಗೆ ರೆಪ್ಪೆ ಅಂಟುವುದು. ಆ ನಂತರ ಏಳುವುದು ಮುಂಜಾನೆ ಯಾವಾಗಲೋ.. ಎದ್ದ ಮೇಲೂ ಒಂದು ಥರದ ಮೌನ. ಮಾತಿಗೆ ಅವಕಾಶವೇ ಇಲ್ಲ. ಮುದುಕನ ಮಾತನ್ನು ಕೇಳುವ, ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ್ದು ಬೆಳಗಿಗಷ್ಟೇ ಸೀಮಿತವೂ ಅಲ್ಲ.

ಹಿಂದಿನ ಮನೆಯ ರಂಗಾರೆಡ್ಡಿ ಈಗ ಭಾಸ್ಕರರಾಯರ ಚಿಂತೆಗೆ ಕಾರಣರದ ಅನೇಕರಲ್ಲೊಬ್ಬನಿರಬಹುದು. ಅಥವಾ ಅದು ಪಕ್ಕದ ಮನೆಯ ಷಫೀಕ್ ಅಲಿ ಆಗಲೀ, ಅಡ್ವೊಕೇಟ್ ಸುಬ್ಬಾರಾವು ಆಗಲೀ, ಸ್ವತಃ ತಮ್ಮ ಮೊಮ್ಮಗನೇ ಆಗಲೀ ಇರಬಹುದು. ತಮ್ಮ ಮಗ ಶ್ರಾವಣನೇನೂ ಸುಮ್ಮನಿರುವ ಪೈಕಿ ಅಲ್ಲ. ಏನಾದರೊಂದು ಕಾರುಬಾರು ಮಾಡುತ್ತಲೇ ಇರುವ ಪಿಪೀಲಿಕ. ಹೀಗಾಗಿ ಭಾಸ್ಕರರಾಯರ ಮನಸ್ಸು ಸದಾ ಜಾಗೃತವಾಗಿರಲು ಅವನೊಂದಿದಿನ ವಾಸ್ತವ್ಯವೇ ಸಾಕಿತ್ತು.

ಈಚೆಗಷ್ಟೇ ಹಿಂದಿನ ಮನೆಯ ರಂಗಾರೆಡ್ಡಿ ನೇರವಾಗಿ ಶ್ರಾವಣನ ಕಾಂಪೌಂಡಿಗಂಟಿಕೊಂಡೇ ಒಂದು ಕಂಭ ಎಬ್ಬಿಸಿದ್ದು, ಪಕ್ಕದ ಮನೆಯ ಷಫೀಕ್ ಅಲಿ ಆಗಾಗ ಒಂದಿಷ್ಟು ಜನರನ್ನು ಕರೆತಂದು ಮನೆ ತೋರಿಸಿದ್ದು - ಹಾಗೂ ಈ ಎಲ್ಲ ನಡೆಯುತ್ತಿದ್ದ ಕಾಲದಲ್ಲೇ ಹೈದರಾಬಾದಿನಲ್ಲಿ ನಡೆದ ಭೀಕರ ಕೋಮು ಗಲಭೆ - ಈ ಎಲ್ಲವೂ ಏಕಕಾಲಕ್ಕೆ ರಾಯರನ್ನು ಆವರಿಸಿ ಹೈರಾಣು ಮಾಡಿಬಿಟ್ಟಿತ್ತು.

ಇದ್ದ ಹಳೇ ಮನೆಯನ್ನು ಸ್ವಲ್ಪ ದೊಡ್ಡದು ಮಾಡು, ಒಂದು ಪೋರ್ಷನ್ ಬಾಡಿಗೆಗೆ ಕೊಟ್ಟು ಇನ್ನಷ್ಟು ಹಣ ಸಂಪಾದಿಸುವುದು ರಂಗಾರೆಡ್ಡಿಯ ಉದ್ದೇಶವಿದ್ದಿರಬಹುದು. ಆದರೆ ಶ್ರಾವಣ ಸುಮ್ಮನಿರಲಾರದೇ ಅವನಲ್ಲಿಗೆ ಹೋಗಿ ಸಾಕಷ್ಟು ಕಿರಿಕಿರಿಯುಂಟು ಮಾಡಿದನಂತೆ. ಕಾರ್ಪೊರೇಷನ್ ರೂಲ್ಸು - ಬಿಡಲೇ ಬೇಕಾದ ಐದಡಿ ಸೆಟ್ ಆಫ್, ಇಲ್ಲೀಗಲ್ ಕನ್ಸ್ ಟ್ರಕ್ಷಣ್ ಇತ್ಯಾದಿ ಹೇಳಿ ರಂಗಾರೆಡ್ಡಿಯನ್ನು ಕೆರಳಿಸಿ ಬಂದಿದ್ದಾನೆ. ಯಾಕೆ ಬೇಕಿತ್ತು ಇವನಿಗೆ ಈ ಉಸಾಬರಿ? ಸುಮ್ಮನಿರಬಹುದಿತ್ತಪ್ಪ. ಅವನ ಕಾಂಪೌಂಡಿನಲ್ಲಿ ಅವನೇನಾದರೂ ನಡೆಸಲಿ.. ನಮ್ಮ ಜಾಗ ಒತ್ತುವರಿ ಮಾಡದಿದ್ದಷ್ಟು ದಿನ ನಮಗೆ ಯಾಕೆ ಚಿಂತೆಯಾಗಬೇಕು? ಉದ್ದ ಮೂಗಿದೆಯೆಂದು ಸಿಕ್ಕಸಿಕ್ಕಲ್ಲೆಲ್ಲಾ ತೂರಿಸುವುದೇ? ಹೀಗೆ ಆಲೋಚಿಸಿದ ಭಾಸ್ಕರರಾಯರು ಹೆಂಡತಿಯನ್ನೊಮ್ಮೆ ನೆನಪು ಮಾಡಿಕೊಂಡರು. ಶ್ರಾವಣ ಅವನ ಮೂಗನ್ನು ಅವಳಿಂದಲೇ ಬಳುವಳಿ ಪಡೆದಿದ್ದ. ರಂಗಾರೆಡ್ಡಿ ನಡೆಸಿದ್ದು ಸರಿಬರದಿದ್ದರೆ ಅವನನ್ನು ನೋಡಿಕೊಳ್ಳಲು ಕಾರ್ಪೊರೇಷನ್ನಿನವರು ಇರುವಾಗ ಇವನೆಗೇಕೆ ಈ ಲೋಕೋದ್ಧಾರದ ಕೆಲಸ? ಎಂಬ ಆಲೋಚನೆ ಹಂಡತಿಯ ನೆನಪನ್ನು ಹಿಂದಕ್ಕಟ್ಟಿತು.

ಆದರೂ ಶ್ರಾವಣನಿಗೆ ಹೇಳುವವರು ಯಾರು? ಭಾಸ್ಕರರಾಯರಂತೂ ಮೌನಿ. ಯಾವುದನ್ನೂ ಬಾಯಿಬಿಟ್ಟು ಹೇಳುವವರಲ್ಲ. ಹೀಗಾಗಿ ಒಳಗೊಳಗೇ ಕುದಿಯುತ್ತಾರೆ. ಪೋಲೀಸಿನವರೊಂದಿಗೆ ದ್ವೇಷ ಕಟ್ಟಿಕೊಳ್ಳುವುದು ಅವರ ಮನಸ್ತತ್ವಕ್ಕೆ ಒಗ್ಗಿದ್ದಲ್ಲ. ಎಂದಾದರೊ ಸಮಯವೆಂದರೆ ಸಹಾಯ ಮಾಡುವವನೇ ಪೋಲೀಸು ರಂಗಾರೆಡ್ಡಿ ಎಂಬ ನಂಬಿಕೆ ರಾಯರಿಗೆ. ಹೀಗಾಗಿ, ಮನೆಗೆ ಗಿರಾಕಿಗಳನ್ನು ಹಿಡಿದು ತರುವ ಷಫೀಕ್ ಅಲಿಯನ್ನು ಕಂಡರೆ ಅವನು ಮುಸ್ಲಿಮನೆಂಬ ಕಾರಣಕ್ಕೆ ಏನೋ ಅನುಮಾನ ರಾಯರಿಗೆ. ಹಾಗೆ ನೋಡಿದರೆ ತಮ್ಮ ಬಾಲ್ಯದ ಗೆಳೆಯರೇನೂ ಹಿಂದೂಗಳಲ್ಲ - ಹ್ಯಾರಿ ಜ್ಯೋತಿಕುಮಾರ, ಅಬ್ದುಲ್ಲಾ ಎಂಬ ಗೆಳೆಯರು ರಾಯರಿಗಿದ್ದರು. ಅದನ್ನು ನೆನಪು ಮಾಡಿಕೊಂಡಾಗ ಮೈಸೂರಿನ ಮುಸ್ಲಿಮರೇ ಬೇರೆ ಹೈದರಾಬಾದಿನ ಮುಸ್ಲಿಮರೇ ಬೇರೆ ಎಂದೂ ಅನ್ನಿಸಿರುವುದುಂಟು. ಈ ಅನುಮಾನ ಯಾಕೆಂದೂ ರಾಯರಿಗೆ ತಿಳಿಯದು. ಹಾಗೆ ನೋಡಿದರೆ ಕೆಲಮುಖಗಳನ್ನು ಸಂಭಾವಿತರ ಭೂಮಿಕೆಯಲ್ಲಿಟ್ಟು ನೋಡುವುದು ರಾಯರಿಗೆ ಸಾಧ್ಯವೇ ಆಗಿಲ್ಲ. ಅಂಥವರಲ್ಲಿ ಷಫೀಕ್ ಅಲಿಯೂ ಒಬ್ಬ.

*****

ಶ್ರಾವಣನಿಗೆ ರಂಗಾರೆಡ್ಡಿಯನ್ನು ಕಂಡಾಗಲೆಲ್ಲಾ ಮೈ ಉರಿಯುವುದು ಏಕೆಂದು ಅರ್ಥವಾಗಿಲ್ಲ. ಅದೇಕೋ ತೆಲಂಗಾಣಾದ ಜಹಗೀರುದಾರಿಯಿಅನ್ನು ತೋರಿಸುವ, ಗತ್ತಿನ ಈ ವ್ಯಕ್ತಿಯನ್ನು ಅರಗಿಸಿಕೊಳ್ಳಲು ಅವನಿಗೆ ಸಾಧ್ಯವೇ ಆಗಿಲ್ಲ. ಇದು ಸಾಲದ್ದಕ್ಕೆ ಸಹಜ ದರ್ಪದ ರಂಗಾರೆಡ್ಡಿ ಪೋಲೀಸು ಇಲಾಖೆಯಲ್ಲಿರುವುದರಿಂದ ಅವನಿಗಿನ್ನಷ್ಟು ಗತ್ತು ಬಂದಂತಿದೆ.

ಇದಕ್ಕೆ ಶ್ರಾವಣ ಅನೇಕ ಬಾರಿ ಕಾರಣ ಹುಡುಕಲು ಪ್ರಯತ್ನಿಸಿದ್ದಿದೆ. ಬಹುಶಃ ಅವನು ಮಾಡುವ ಕೆಲಸ, ಹಾಗೂ ತನ್ನ ಎಡಪಂಥೀಯ ವಿಚಾರಧಾರೆ ಯಾವುದೇ ದಬ್ಬಾಳಿಕೆಯನ್ನು ಸಹಿಸದಂತೆ ಪ್ರೇರೇಪಿಸಿರಬಹುದು. ಆದರೂ ಅದು |ತೆಲಂಗಾಣಾ ರೆಡ್ಡಿಗಳು| ಎಂದು ಇಡೀ ಜಾತಿಗೇ ವಿಸ್ತಾರಗೊಂಡಿರುವುದು ಅವನ ತರ್ಕಕ್ಕೇ ನಿಲುಕದ ವಿಷಯವಾಗಿದೆ. ಇಂದು ರಂಗಾರೆಡ್ಡಿ ತನ್ನ ಹಳ್ಳಿಯಲ್ಲೇ ಇದ್ದು, ಇಲ್ಲಿ ತೋರುವ ದರ್ಪ ತೋರಿದ್ದರೆ ಡಿಚ್-ಪಲ್ಲಿಯ ಪಿ.ಡಬ್ಲೂ.ಜಿ. ಅವರು ಅವನನ್ನು ಮುಗಿಸಿಬಿಡುತ್ತಿದ್ದರೆನ್ನಿಸುತ್ತದೆ. ಎಂದಾದರೂ ರಂಗಾರೆಡ್ಡಿಗೆ ನಿಜಾಮಾಬಾದ್ ಜಿಲ್ಲೆಗೋ, ಮೆದಕ್, ಕರೀಂನಗರಕ್ಕೋ ವರ್ಗವಾಗಬೇಕೆಂದು ಶ್ರಾವಣ ಒಳಗೊಳಗೇ ಬಯಸುವುದುಂಟು. ಅಲ್ಲಾದರೆ ತನ್ನ ಕಾಮ್ರೇಡುಗಳು ಈ ರೆಡ್ಡಿಯನ್ನೊಂದು ಕೈ ನೋಡಿಕೊಳ್ಳಬಹುದಾದ ರೀತಿಯ ಬಗ್ಗೆಯೂ ತಾನು ಕನಸುತ್ತಿದ್ದುದುಂಟು.

ಈಗಂತೂ ರಂಗಾರೆಡ್ಡಿಯ ಮೇಲೆ ಸಾರಿರುವ ಸಮರ ಶ್ರಾವಣನಿಗೆ ಬಹಳ ಸಾಂಕೇತಿಕ ಮಹತ್ವವುಳ್ಳದ್ದು ಎನ್ನಿಸಿತು. ಬೇರೆಯವರ ಆಸ್ತಿ ಒತ್ತುವರಿ ಮಾಡಿಕೊಳ್ಳಲೂ ಹೇಸದ ರಂಗಾರೆಡ್ಢಿ, ತನ್ನ ಸ್ವಂತ ಜಾಗದಲ್ಲಿ ನಡೆಸುತ್ತಿರುವ ಕಟ್ಟಡ ಕಾರ್ಯವನ್ನೇ ತಾನು ಪ್ರಶ್ನಿಸುತ್ತಿರುವುದು, ಅಕಬರಬಾಗಿನಲ್ಲೇ ಚರಿತ್ರೆ ಸೃಷ್ಟಿಸಬಹುದು. ಹಾಗೂ ಬೀಗುತ್ತಾ ಅಲೆದಾಡುವ ರಂಗಾರೆಡ್ಡಿಗೆ ಕಲಿಸಬೇಕಾದ ಪಾಠವನ್ನು ಯಾರಾದರೂ ಕಲಿಸಿದಂತಾಗುವುದು. ರಂಗಾರೆಡ್ಡಿ ಈಗಾಗಲೇ ಎಬ್ಬಿಸಿರುವ ಕಂಬವನ್ನು ಹೀಗೆ ಕೋರ್ಟಿನ ಆದೇಶದೊಂದಿಗೆ ಇಳಿಸುವ ಕನಸನ್ನು ಶ್ರಾವಣ ಕಟ್ಟುತ್ತಾನೆ. ತಾನೀಗ ರಂಗಾರೆಡ್ಡಿಯ ವಿಷಯದಲ್ಲಿ ನಡೆಸುತ್ತಿರುವ ಕಾರುಬಾರು ಅಪ್ಪನಿಗೆ ತಿಳಿದೇ ಇರಬೇಕು. ಅವರೂ ಈ ವಿಷಯದಲ್ಲಿ ಎಂದಾದರೂ ಏನಾದರೂ ಹೇಳಬಹುದೆಂದು ನಿರೀಶಕ್ಷಿಸಿದ್ದೂ ಉಂಟು. ಆದರೆ ಅವರು ಇನ್ನೂ ಏನೂ ಹೇಳಿಲ್ಲ. ಹೇಳಬಹುದೆಂಬ ಭೀತಿಯೇ, ಅವರು ವಾಸ್ತವದಲ್ಲಿ ಹೇಳಿದ್ದರೆ ಆಗುತ್ತಿದ್ದ ಪರಿಣಾಮಕ್ಕಿಂತ ಬೃಹದಾಕಾರವಾಗಿ ನಿಂತು ಆಗಾಗ ಶ್ರಾವಣನನ್ನು ಕಾಡುವುದುಂಟು. ಹೀಗೆ ತನ್ನೆಲ್ಲ ಕನಸಿನ ನಡುವೆ ಅಪ್ಪನನ್ನು ಒದ್ದಾಡಿಸುವುದಕ್ಕಿಂತ, ಅವರನ್ನು ಮೈಸೂರಿಗೆ ಕಳಿಸಿಬಿಡುವುದೇ ಲೇಸೆಂದು ಆಗಾಗ ಅನ್ನಿಸಿದರೂ, ಯಾಕೋ ಶ್ರಾವಣನಿಗೆ ಆ ಕೆಲಸ ಮಾಡಲು ಮನಸ್ಸೇ ಇಲ್ಲ. ಇದಕ್ಕೆ ಕಾರಣ - ಎಲ್ಲವೂ ಕಡೆಗೆ ತಿರುಮಲಗಿರಿಯಲ್ಲಿ ಪರ್ಯಾವಸನವಾಗುವುದೆಂಬ ಆಶಾವಾದ.

*****

ಭಾಸ್ಕರರಾಯರಿಗೆ, ಈ ಎಲ್ಲದರ ವಿಷಯದಲ್ಲಿ ಮಗನಿಗೊಂದೆರಡು ಉಪದೇಶದ ಮಾತುಗಳನ್ನು ಯಾವಾಗಲಾದರೂ ಹೇಳಬೇಕೆಂದು, ಸಮಾಧಾನವಾಗಿ ಮಾತನಾಡಿ ಮನಶ್ಶಾಂತಿಯ ಮಹತ್ವವನ್ನು ವಿವರಿಸಬೇಕೆಂದು ಆಗಾಗ ಅನ್ನಿಸುತ್ತದೆ. ಹಾಗೆ ತಾವೇನಾದರೂ ಹೇಳಲು ಹೋದರೆ, ಶ್ರಾವಣ ತಮ್ಮ ಮೇಲೆಯೇ ರೇಗಿ ಬೀಳಬಹುದು. ಸಾಲದೆಂಬಂತೆ ಇದನ್ನವನು "This is a protest against Police imperialism" ಎಂದು ಒಂದು ತಾತ್ವಿಕ ಆಯಾಮ ನೀಡಿ ಅವನ ಎಡಪಂಥೀಯ ರೆಟರಿಕ್ಕನ್ನು ಹೊರಹೊಮ್ಮಿಸುವುದನ್ನೂ ರಾಯರು ಊಹಿಸಬಲ್ಲರು. ಪಾಪ ಆ ರಂಗಾರೆಡ್ಡಿ ಪೋಲೀಸು ನೌಕರಿ ಮಾಡುವುದೇ ಒಂದು ಮಹಾಪರಾಧ ಎಂದು ಕಾಣುವಂತೆ ಮಾಡುವ ಚಾಣಾಕ್ಷತನ ಶ್ರಾವಣನಲ್ಲಿದೆ.

ಕಳೆದ ವಾರ ನಡೆದದ್ದೂ ಹಾಗೆಯೇ. ರಂಗಾರೆಡ್ಡಿ ಗೋಡೆಗಂಟಿಕೊಂಡು ಕಂಬವನ್ನೆಬ್ಬಿಸಿದ ದಿನ ಶ್ರಾವಣ ಅವನೊಂದಿಗೆ ಮಾತನಾಡಿದನಂತೆ. ಬಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡಿದ ರಂಗಾರೆಡ್ಡಿ ಕಟ್ಟಡದ ಕೆಲಸವನ್ನು ಕೂಡಲೇ ನಿಲ್ಲಿಸುವುದಾಗಿ ಮಾತುಕೊಟ್ಟನಂತೆ. ಶ್ರಾವಣನೂ ಲಾಯರು, ನೋಟೀಸು ಕೋರ್ಟು ಎಂದೆಲ್ಲಾ ಬೆದರಿಸಿ ಬರುವವನೇ. ಆದರೂ ಇಂಥ ಬೆದರಿಕೆಗೆ ಬಗ್ಗುವ ಕುಳ ಪೋಲೀಸು ರಂಗಾರೆಡ್ಡಿಯಲ್ಲ. ಈ ಮಾತುಕತೆ ನಡೆಯುತ್ತಿದ್ದಾಗ ಒಂದು ಭಾನುವಾರ ಮಧ್ಯಾಹ್ನ ಮಲಗಿದ್ದ ರಾಯರಿಗೆ ಎತ್ತರದ ಧ್ವನಿಯ ಮಾತುಕತೆ ಕೇಳಿ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಒಂದು ಥರದ ಮಂಪರಿನಲ್ಲಿಯೇ ಭಾಸ್ಕರರಾಯರು ನಡೆಯುತ್ತಿದ್ದ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರು. ಕಡೆಗೆ ಒಂದು ಸಂಧಾನವಾದಂತೆಯೂ ಅವರಿಗನ್ನಿಸಿತು. ಇದಾದ ಒಂದೈದಾರು ದಿನ ತಣ್ಣಗಾದ ರಂಗಾರೆಡ್ಡಿ ಒಂದು ಶುಭ ಶುಕ್ರವಾರದಂದು ರಾತ್ರೋರಾತ್ರಿ ಗೋಡೆ ಎಬ್ಬಿಸಿ, ಶನಿ ಭಾನುವಾರಗಳಂದು ಆರ್.ಸಿ.ಸಿ ಹಾಕಿಸಿಯೇ ಬಿಟ್ಟ. ನೇರ ಮಾತುಕತೆಯ ಸಂಧಾನವನ್ನು ಗೌರವಿಸದೇ ಹೀಗೆ ಮೋಸದಿಂದ ಪ್ರವರ್ತಿಸಿದ್ದನ್ನು ತಡೆಯಲಾಗದ ಶ್ರಾವಣ ರಂಗಾರೆಡ್ಡಿಯ ಮೇಲಿನ ಸಿಟ್ಟನ್ನು ಮನೆಯವರ ಮೇಲೆಲ್ಲಾ ತೀರಿಸಿಕೊಂಡರೂ ಸಮಾಧಾನವಾಗದೇ, ತನ್ನ ಗೆಳೆಯ ಸುಬ್ಬಾರಾವನ್ನು ನೋಡಿ, ಅವನ ಕೈಯಲ್ಲಿ ಒಂದು ನೋಟಿಸ್ ಕೊಡಿಸಿ, ಕೂಡಲೇ ಕೋರ್ಟಿನಲ್ಲಿ ಒಂದು ಕೇಸನ್ನು ದಾಖಲು ಮಾಡಿಸಿದ. ಆಗಾಗ ಬಿಳಿ ಮಾರುತೀ ವ್ಯಾನಿನಲ್ಲಿ ಬರುವ ಸುಬ್ಬಾರಾವನ್ನು ರಾಯರು ಚೆನ್ನಾಗಿ ಬಲ್ಲರು. ಅದಕ್ಕೆ ಕಾರಣ, ಬಂದಾಗೆಲೆಲ್ಲ ಅವನು ರಾಯರ ಕೋಣೆಗೆ ಬಂದು ತಮ್ಮನ್ನು ಪ್ರತ್ಯೇಕವಾಗಿ ವಿಚಾರಿಸಿಕೊಂಡು ಹೋಗುತ್ತಾನೆ. ಹೆಚ್ಚೂಕಮ್ಮಿ ಸುಬ್ಬಾರಾವು ಬಂದಾಗೆಲ್ಲಾ ಬರುವ ಷಫೀಕ್ ಅಲಿ ರಾಯರನ್ನು ತಲೆಯೆತ್ತಿಯೂ ನೋಡುವುದಿಲ್ಲ. ಬಹುಶಃ ಷಫೀಕನನ್ನು ಕಂಡರೆ ರಾಯರಿಗೆ ಅಸಮಾಧಾನವಿರುವುದಕ್ಕೆ ಇದೂ ಒಂದು ಕಾರಣವಿರಬಹುದು. ಮೂರೂ ಜನ ಕುಳಿತು ಚಹಾ ಹೀರುತ್ತಾ ರಿಜಿಸ್ಟ್ರೇಷನ್, ಟೆನೆಂಸಿ, ಇತ್ಯಾದಿಯಾಗಿ ಏನೇನೋ ಕಾನೂನಿನ, ಆಸ್ತಿಪಾಸ್ತಿಯ ಭಾಷೆಯನ್ನು ಮಾತನಾಡುತ್ತಾರೆ.

ಅಂದು ಸುಬ್ಬಾರಾವು - ಶ್ರಾವಣರ ಪಿತೂರಿಯ ಫಲವಾಗಿ ನೋಟೀಸು ತಲುಪಿದ ದಿನವೂ ರಂಗಾರೆಡ್ಡಿ ಇವರ ಮನೆಗೆ ಬಂದು ಮೆಲುದನಿಯಲ್ಲಿ ಅತಿವಿನಯ ಪ್ರದರ್ಶಿಸಿ ಹೋದದ್ದು ಭಾಸ್ಕರರಾಯರಿಗೆ ಮಸಕು ಮಸಕು ನೆನಪು.

ಈಗ ಈ ಎಲ್ಲ ತರಲೆಗಳ ನಡುವೆ ಈಗ ಭಾಸ್ಕರರಾಯರ ವೃದ್ಧಾಪ್ಯ ಕಳೆಯಬೇಕಿದೆ. ಅವರಂತೂ ಈ ಎಲ್ಲದ್ದರಿಂದ ಓಡಿ ಮೈಸೂರಿನಲ್ಲಿರುವ ಹಿರಿಮಗ ಮಹೇಶಚಂದ್ರನಲ್ಲಿಗೆ ಹೋಗಬೇಕೆಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ಆದರೂ ಅವರು ಮಾತ್ರ ಈ ವಿಷಯ ಬಾಯಿ ಬಿಟ್ಟಿಲ್ಲ. ಇಲ್ಲಿನ ಗೊಂದಲ ಒಂದು ಘಟ್ಟ ತಲುಪುವವರೆಗೂ ಇಲ್ಲಿಂದ ದೂರ ಹೋಗುವ ಮನಸ್ಸೂ ಅವರಿಗಿಲ್ಲ. ಯಾವಾಗಲಾದರೂ ಹೃದಯಬಿಚ್ಚಿ ಈ ಎಲ್ಲದರ ಬಗ್ಗೆ ಮಗನೊಂದಿಗೆ ಮಾತನಾಡಬೇಕು ಎಂದುಕೊಳ್ಳುತ್ತಲೇ ರಾಯರು ಪ್ರತಿದಿನವೂ ಸೂಟ್‍ಕೇಸ್ ಕಟ್ಟುತ್ತಾರೆ.

*****

ರಂಗಾರೆಡ್ಡಿಗೆ ನೋಟೀಸು ತಲುಪಿದ ಮಾರನೆಯ ಸಂಜೆಯೇ, ಶ್ರಾವಣ ತಿಂಡಿ ತಿನ್ನುತ್ತಾ ಕುಳಿತಿದ್ದಾಗ ಹೊರಗಿನಿಂದ ಯಾರೋ ಜೋರಾಗಿ ಕೂಗಿದ ಶಬ್ದ ಕೇಳಿಸಿದಂತಾಯಿತು - "ಸಾರ್ ಎಮ್ಮಲ್ಲೆ ಸಮೀರ್ ಕುಮಾರ್ ಬಂದಿದ್ದಾರೆ" ಹೀಗೂಬ್ಬ ಆಗಂತುಕನ ಆಗಮನವನ್ನು ಕೂಗಿ ಹೇಳಿದ ರೀತಿ ಶ್ರಾವಣನಿಗೆ ವಿಪರೀತ ಸಿಟ್ಟು ತರಿಸಿತು. "ಬಹು ಪರಾಕ್ ಬಹು ಪರಾಕ್... ಎಂ.ಎಲ್.ಎ ಸಾಹೇಬರನ್ನು ಕುಳಿತುಕೊಳ್ಳಲು ಹೇಳಿ. ತಿಂಡಿ ತಿಂದು ಬಂದು ಅವರನ್ನು ಕಾಣುತ್ತೇನೆ." ಎಂದು ಒಳಗಿನಿಂದಲೇ ಅರಚಿದ. ಇದು ರಂಗಾರೆಡ್ಡಿಯ ಪಿತೂರಿಯೇ ಇರಬೇಕೆಂಬ ಅವನ ಅನುಮಾನ, ಅವನು ಹೊರಬಂದಕೂಡಲೇ ನಿಜವಾಯಿತು. ಎಷ್ಟು ಬೇಗ ಒಂದು ಸಣ್ಣ ತಗಾದೆ ರಾಜಕೀಯ ಆಯಾಮ ಪಡೆದುಬಿಟ್ಟಿದೆ ಎಂದು ಯೋಚಿಸಿದಾಗ ಶ್ರಾವಣ ಚಕಿತಗೊಂಡ. ಆದರೂ ಈಗ ಸುಮ್ಮನೆ ಸಿಟ್ಟಾಗಿ ದನಿಯೇರಿಸುವುದರಲ್ಲಿ ಅರ್ಥವಿಲ್ಲ ಅನ್ನಿಸಿ ತನಗೆ ತಾನೇ ಸಮಾಧಾನವೂ ಮಾಡಿಕೊಂಡ. ಕೈಯಲ್ಲಿ ಲಾಯರ್ ನೋಟೀಸು ಹಿಡಿದ ರಂಗಾರೆಡ್ಡಿ ಹಾಗೂ ಸಮೀರ್ ಕುಮಾರ, ಶಾಂತಿಯ ಸಹಬಾಳ್ವೆಯ ಮಹತ್ವವನ್ನು - ಅದರಲ್ಲೂ ಒಂದೇ ಧರ್ಮದವರಾದ ಅವರಿಬ್ಬರೂ ಸ್ನೇಹ ಸೌಹಾರ್ದದಿಂದ ಇರಬೇಕಾದ ಅವಶ್ಯಕತೆಯನ್ನೂ ವಿವರಿಸಿದರು. ಈ ಎಲ್ಲವೂ ಷಫಿಕ್ ಸಾಬರನ್ನು ಮನಸ್ಸಿನಲ್ಲಿಟ್ಟು ಹೇಳುತ್ತಿರುವ ಮಾತುಗಳೆಂದು ಶ್ರಾವಣನಿಗೆ ಅರ್ಥವಾಯಿತು. ಏನೂ ಮಾತನಾಡದೇ, ಕಡೆಗೆ ಅವರಿಗೊಂದು ಲೋಟ ಚಹಾ ಕೂಡ ಕೊಡದೇ ಶ್ರಾವಣ ಅವರನ್ನು ಕಳುಹಿಸಿಬಿಟ್ಟ.

ಅವರು ಹೋದಮೇಲೆ, ಶ್ರಾವಣ ಕೂಡಲೇ ಅಪ್ಪನ ಕೋಣೆಗೆ ಹೋಗಿ ಅವರನ್ನು ನೋಡಿದ. ಅಪ್ಪ ಇನ್ನೂ ನಿದ್ರೆಯ ಮಂಪರಿನಲ್ಲಿ ಏಳುವುದೋ ಬೇಡವೋ ಎಂಬಂತೆ ಬಿದ್ದುಕೊಂಡಿದ್ದರು. ಸದ್ಯ - ಈ ಎಲ್ಲವೂ ನಡೆದಾಗ ಅಪ್ಪ ಮಲಗಿದ್ದರಲ್ಲಾ... ಅವರಿಗೇನಾದರೂ ಇಂದಿನ ಈ ಭೇಟಿಯ ಮಹತ್ವ ತಿಳಿದರೆ, ಇನ್ನೂ ಚಿಂತೆಗೊಳಗಾಗಿ ನರಳುವರು ಎನ್ನಿಸಿ, ತಿಳಿಯದಿರುವುದಕ್ಕೆ ನಿರಾಳ ನಿಟ್ಟುಸಿರುಬಿಟ್ಟ. ಹಾಗೆ ಯೋಚಿಸುತ್ತಲೇ - ತನ್ನ ಕನಸಿನ ತಿರುಮಲಗಿರಿಯ ಮನೆಯಾಗುವವರೆಗೂ ಅಪ್ಪನನ್ನು ಇಲ್ಲಿ ಕರೆಸಿಕೊಳ್ಳಬಾರದಿತ್ತು ಎನ್ನಿಸಿತು. ಜತೆಗೆ ಆಳುವ ಪಕ್ಷದ ಎಂ.ಎಲ್.ಎಯನ್ನು ತನ್ನ ಕಡೆಗೆಳೆದುಕೊಂಡು ಸೂಕ್ಷ್ಮವಾಗಿ ಹೆದರಿಸಬಂದ ರಂಗಾರೆಡ್ಡಿಯ ಚಾಣಾಕ್ಷತನಕ್ಕೆ ತಲೆದೂಗಿದ. ಅದಷ್ಟೇ ಅಲ್ಲ, ಅವನಿಗೆ ಒಂದಷ್ಟು ಕ್ಷಣ ನಿಜಕ್ಕೂ ಭಯವಾಯಿತು. ತಿರುಮಲಗಿರಿಯ ಮನೆ ಇತ್ಯದಿಗಳು ನಾಶವಾಗಲಿ, ಮೊದಲು ಇಲ್ಲಿಂದ ಜಾಗ ಖಾಲಿಮಾಡಿ, ಸೇತುವೆಯಾಚೆಯ ಬದಿಯಲ್ಲಿ ಒಂದು ಮನೆ ಬಾಡಿಗೆಗಾದರೂ ಹಿಡಿಯಬೇಕು ಅನ್ನಿಸಿತು. ಇದರಿಂದ ಅಪ್ಪನಿಗೂ ಶಾಂತಿ - ಕಾಲೇಜು, ಏಂಸೆಟ್ ಇತ್ಯಾದಿಗಳೆಂದು ಓಡಾಡುವ ಮಗನಿಗೂ ಅನುಕೂಲ ಎಂದೂ ಅನ್ನಿಸಿತು. ಒಂದೇ ಕ್ಷಣದ ಮಟ್ಟಿಗೆ, ಅಪ್ಪನನ್ನು ಮೈಸೂರಿಗೆ ವಾಪಸ್ಸು ಕಳಿಸಿಕೊಟ್ಟರೆ ಹೇಗೆಂಬ ಆಲೋಚನೆಯೂ ಬಂತು. ಆದರೆ ಮಹೇಶನ ಜತೆ ಜಗಳವಾಡಿ, ಕನಿಷ್ಟ ಮೂರು ತಿಂಗಳಿಗೆಂದು ಕರೆತಂದಿರುವ ಅಪ್ಪನನ್ನು ಒಂದೇ ತಿಂಗಳು ತೀರುವುದಕ್ಕೆ ಮೊದಲೇ ಕಳುಹಿಸಿಕೊಡುವುದು ಹೇಗೆಂದು ತಿಳಿಯದೇ ತನ್ನಾತ್ಮಸಾಕ್ಷಿಗೆ ಬಲಿಯಾದ. ಹಾಗೂ ಈ ಎಲ್ಲ ಗೊಂದಲದ ಆಶಾಕಿರಣವಾಗಿ ಮುಂದುವರೆದದ್ದೆಂದರೆ, ತಿರುಮಲಗಿರಿ ಮಾತ್ರ.


****

ಈ ಎಲ್ಲವೂ ನಡೆಯುತ್ತಿದೆ ಎನ್ನುವಾಗಲೇ ಇದು ಖರೆ ನಡೆಯುತ್ತಿದೆಯೇ ಎಂಬ ಅನುಮಾನವೂ ಭಾಸ್ಕರರಾಯರನ್ನು ಕಾಡುವುದುಂಟು. ಕಾರಣ: ಈ ಎಲ್ಲ ವಿಷಯಗಳ ಚರ್ಚೆ ಬಹಳ ನಿಗೂಢವಾಗಿ ನಡೆಯುತ್ತದೆ. ಹಾಗೂ ಈ ಚರ್ಚೆ ನಡೆಯವಾಗ ಭಾಸ್ಕರರಾಯರಿಗೆ ತಾವು ಸಂಪೂರ್ಣವಾಗಿ ಎಚ್ಚರವಿರುವಂತೆ ಅನ್ನಿಸುವುದೇ ಇಲ್ಲ. ಎಲ್ಲವೂ ಒಂದು ಥರದ ಮಂಪರಿನ ಸ್ಥತಿಯಲ್ಲೇ ನಡೆದುಹೋಗುತ್ತದೆ. ಶ್ರಾವಣ ಬಹುಶಃ ತನ್ನ ಮಗನಿಗೆ ಈ ವಿಷಯ ತಿಳಿಯದಿರಲೆಂದು ಹಾಗೆ ಮಾಡುತ್ತಾನೇನೋ..... ತಿಳಿದರೆ, ಅವನು ಹೆದರಿ ರಂಗಾರೆಡ್ಡಿಯ ಮಕ್ಕಳ ಜೊತೆ ಆಟ ಆಡುವುದನ್ನೂ ಬಿಟ್ಟುಬಿಟ್ಟಾನೆಂಬ ಭೀತಿಯಿದ್ದೀತು.

ಹಾಗೆ ನೋಡಿದರೆ, ತಮ್ಮ ಮೊಮ್ಮಗ ಪೋಲೀಸು ರಂಗಾರೆಡ್ಡಿಯ ಮಕ್ಕಳ ಜೊತೆಗಾಗಲೀ ಪಕ್ಕದ ಮನೆಯ ಷಫೀಕ್ ಅಲಿಯ ಮಕ್ಕಳ ಜತೆಗಾಗಲೀ, ಕ್ರಿಕೆಟ್ ಆಡುವುದು, ಗಾಳಿಪಟ ಹಾರಿಸುವುದೂ, ಭಾಸ್ಕರರಾಯರಿಗೆ ಟೆನ್ಷನ್ ಉಂಟುಮಾಡುವ ವಿಷಯವೇ. ಈಗಿನ ಅವರ ಚಿಂತೆಗೆ ಅದೂ ಒಂದು ಕಾರಣವಿದ್ದೀತು! ಅಕಸ್ಮಾತ್ ಶ್ರಾವಣನ ಮೇಲಿನ ಸಿಟ್ಟನ್ನು ಆ ರಂಗಾರೆಡ್ಡಿ ಈ ಹುಡುಗನ ಮೇಲೆ ತೀರಿಸಿಕೊಂಡುಬಿಟ್ಟರೆ?!

ರಾಯರು ತಮಗೆ ಅಂಟಿಕೊಂಡಿರುವ ರೋಗದ ಬಗ್ಗೆ ಯೋಚಿಸುತ್ತಾರೆ. ಈ ರೋಗ ಮುಂಜಾನೆ ಆರರಿಂದ ಏಳರ ನಡುವೆ ಅವರ ಮೇಲೆ ಧಾಳಿ ಮಾಡುತ್ತದೆ ಎನ್ನಿಸಿದರೂ ಅದರ ಖಚಿತತೆಯ ಬಗ್ಗೆ ಅವರಿಗೆ ಅನುಮಾನವಿದೆ. ಹಾಗೆ ನೋಡಿದರೆ ಅವರಿಗೆ ದಿನವಿಡೀ ಹಾಗೆಯೇ ಎಂದೂ ಹೇಳಬಹುದು. ಆದರೆ ಈ ರೋಗವಂತೂ ಭಾಸ್ಕರರಾಯರನ್ನು ಆವರಿಸಿಬಿಟ್ಟಿದೆ. ಅರ್ಥಾತ್: ಮುಂಜಾನೆ ಆರಕ್ಕೆ ಎಚ್ಚರಗೊಂಡಂತಾದ ಭಾಸ್ಕರರಾಯರು ಒಂದು ಥರದ ಮಂಪರಿನ ಸ್ಥಿತಿಯಲ್ಲಿರುತ್ತಾರೆ. ಅದು ಒಂದು ರೀತಿಯ ನಿದ್ದೆಯಲ್ಲದ ಎಚ್ಚರವಲ್ಲದ ಕನಸಲ್ಲದ ನನಸಲ್ಲದ ಎಲ್ಲಿಗೂ ಸಲ್ಲದ ಸ್ಥಿತಿ. ಈ ಅವಸ್ಥೆಯಲ್ಲಿ ಭಾಸ್ಕರರಾಯರಿಗೆ ಎನೇನೋ ಕಾಣಿಸುತ್ತದೆ. ಯಾವ ವಿಷಯಗಳೋ ಶಬ್ದಗಳೋ ಕೇಳಿಸುತ್ತವೆ, ಹಾಗೂ ಹಾಗೆಯೇ ಅವರು ಕ್ರಮೇಣ ನಿದ್ರೆಗೆ ಜಾರಿಬಿಡುತ್ತಾರೆ. ಮತ್ತೆ ಎದ್ದಾಗ ಎಲ್ಲವೂ ಸುಗಮ. ಯಾವಾಗಲಾದರೂ ಡಾಕ್ಟರಿಗೆ ತೋರಿಸಿಕೊಳ್ಳೋಣವೆಂದರೆ ರೋಗವೆಂದರೇನೆಂದು ತಿಳಿಯದಂತಹ ರೋಗ! ಆಲೋಚನೆಯ ಭ್ರೂಣಗಳು ಕ್ರಿಯಾರೂಪ ತಾಳುವಂತಹ ಪ್ರಕ್ರಿಯೆ.. ಈ ಸಮಯದಲ್ಲಿ ರಾಯರು ಕಾವ್ಯ ಕಟ್ಟುತ್ತಾರೆ. ಕನಸಿನ ಕದ ತಟ್ಟುತ್ತಾರೆ. ತಮಗರಿವಿಲ್ಲದಂತೆಯೇ ನಿದ್ರೆಯ ತೆಕ್ಕೆಗೂ ಸೇರಿಬಿಡುತ್ತಾರೆ. ದಿನಕ್ಕೆ ಈ ರೀತಿ ಹಲವು ಬಾರಿ ಎಚ್ಚರಗೊಳ್ಳುವುದು, ಹಲವುಬಾರಿ ನಿದ್ರೆಗೊಳಗಾಗುವುದು - ಈಚೆಗೆ ಅವರಿಗೆ ಬಿಡಿಸಿಕೊಳ್ಳಲಾಗದ ದುರಭ್ಯಾಸವಾಗಿಬಿಟ್ಟಿದೆ. ಈ ರೀತಿ ನನಸಿನೊಳಗಣ ಕನಸು ಕಾಣುವುದು ಅವರ ಪ್ರಕೃತಿಗೊಗ್ಗದ, ಪ್ರಕೃತಿ ಒಪ್ಪದ ಪರಿಪಾಠವಾಗಿದೆ.

ಹಿಂದಿನ ಮನೆಯ ರಂಗಾರೆಡ್ಡಿ ನಡೆಸಿದ ಈ ಎಲ್ಲ ಕಾರುಬಾರಿನ ವಿಷಯ ತಿಳಿದುಬಂದದ್ದೂ ಬಹುತೇಕ ಶ್ರಾವಣ ತನ್ನ ಹೆಂಡತಿಯೊಂದಿಗೆ ಈ ಸಮಸ್ಯೆ ಚರ್ಚಿಸುತ್ತಿದ್ದ ಸಮಯದಲ್ಲಿಯೇ.

ಆ ನಂತರ ಏನಾಯಿತೆಂದು ಭಾಸ್ಕರರಾಯರಿಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಹೀಗೆ ಕಂಡ ಈ ದೃಶ್ಯದ ಚಿಂತೆ ದಿನವಿಡೀ ಮರುಮರುಕಳಿಸಿ ಭಾಸ್ಕರರಾಯರನ್ನು ಸುಸ್ತಾಗಿಸಿಬಿಟ್ಟಿತ್ತು. ಆದರೂ ಈ ರಂಗಾರೆಡ್ಡಿಯ ಪುರಾಣ ನಿಜವಗರಲೇಬೇಕು. ಅಂದು ಮಧ್ಯಹ್ನ ಮಾತುಕತೆ ನಡೆದು ಸಂಧಾನವಾದಂತೆ ಅನ್ನಸಿದ ಮಾರನೆಯ ದಿನವೇ ರಂಗಾರೆಡ್ಡಿ - ಕ್ಯೂರಿಂಗಿಗೆ ಬಿಟ್ಟಿದ್ದ ತನ್ನ ಸೂರಿನ ಮೇಲೇರಿ "ನೀಯಮ್ಮ ಭಾಂಚೋದ್" "ಮಾಕೌಡೇ" ಎಂದೆಲ್ಲ ಶ್ರಾವಣನನ್ನು ಕೆಟ್ಟಕೆಟ್ಟದಾಗಿ ಬೈದದ್ದು ಭಾಸ್ಕರರಾಯರ ಕಿವಿಯನ್ನಿನ್ನೂ ಕೊರೆಯುತ್ತಿದೆ.

ಅಂದು ನಡೆದದ್ದಾದರೂ ಏನು? ಭಾಸ್ಕರರಾಯರು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹೌದು.... ಹಿಂದಿನ ದಿನವೇ, ಅದೂ ಮಧ್ಯಹ್ನದ ಈ ಗಲಾಟೆ, ಸಂಧಾನಕ್ಕೆ ಮೊದಲೇ ಸುಬ್ಬಾರಾವು ಬಂದು ಶ್ರಾವಣನ ಜೊತೆ ಗುಸುಗುಸು ಮಾಡಿಹೋದ.

ಅದರ ಫಲ:
ಶ್ರಾವಣ ಮಧ್ಯಾಹ್ನದ ನಂತರ ಎಲ್ಲ ಶಾಂತವಾಗಿದೆಯೆನ್ನುವಾಗ, ಯಾರೂ ಇಲ್ಲದ ಸಮಯ ನೋಡಿ, ರಂಗಾರೆಡ್ಡಿ ಈಗಾಗಲೇ ಎಬ್ಬಿಸಿರುವ ಗೋಡೆಯ ಚಿತ್ರ ತೆಗೆಯಲು ಕ್ಯಾಮರಾ ಹಿಡಿದು ಹೋದ.

ಉದ್ದೇಶ: ಈಗಾಗಲೇ ಎಬ್ಬಿಸಿರುವ ಗೋಡೆಗಳ ಚಿತ್ರಗಳನ್ನು ತೆಗೆದಿಟ್ಟುಕೊಳ್ಳುವುದು. ನಂತರ ಕೋರ್ಟಿಗೆ ಹೋಗಿ "ರಂಗಾರೆಡ್ಡಿ ಗೋಡೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾನೆ "ಸ್ಟೇ" ಕೊಡಿ" ಎಂದು ಅಪೀಲು ಮಾಡುವುದು.
ಮುಂದಾಲೋಚನೆ ಏನೆಂದರೆ: "ಸ್ಟೇ" ಕೊಟ್ಟ ನಂತರ ಗೋಡೆ ಎಬ್ಬಿಸಿದ್ದಾನೆಂದು ಕಾಂಟೆಂಪ್ಟ್ ಆಫ್ ಕೋರ್ಟ್ ಕೇಸು ಹಾಕುವುದು.

ಈ ಇಂಥ ವಿಚಿತ್ರ ಆಲೋಚನೆಗಳ ದರ್ಶನವಾದಾಗ ರಾಯರಿಗೆ ನಿಜಕ್ಕೂ ಅದು ಕನಸೋ, ವಾಸ್ತವವೋ ಎಂದು ಅನುಮಾನ ಬರುವುದಂತೂ ಖಂಡಿತ. ಖರೆಯಿರಲೇಬೇಕೆಂದು ನೆನಪುಮಾಡಿಕೊಳ್ಳಹೊರಟದ್ದೆಲ್ಲಾ ಹೀಗೆ ಅನುಮಾನದಲ್ಲೇ ಪರ್ಯಾವಸನವಾಗುವುದು ವಿಚಿತ್ರ ಚಡಪಡಿಕೆಗೆ ಕಾರಣವಾಗಿದೆ.

ಭಾಸ್ಕರರಾಯರಿಗೆ ಅನುಮಾನ ಬಂದಾಗಲೆಲ್ಲಾ - ಅನುಮಾನ ಎಂಬ ಪದ ನೆನಪಾದಾಗಲೆಲ್ಲ ಷಫೀಕ್ ಅಲಿಯ ಮುಖ ನೆನಪಾಗುವುದು. ಷಫೇಕನ ನೆನಪಾದಾಗಲೆಲ್ಲ ಶ್ರಾವಣ ತಿರುಮಲಗಿರಿಯಲ್ಲಿ ಸೈಟಿನ ನೆನಪಾಗುವುದು. ಈ ಮನೆಯನ್ನು ಮಾರಿ ದೂರದ ತಿರುಮಲಗಿರಿಗೆ ಹೋಗುವ ಆಲೋಚನೆಯನ್ನೂ ಈ ಷಫೀಕನೇ ಅವನ ತಲೆಯಲ್ಲಿ ಬಿತ್ತಿರಬಹುದೆಂಬ ಅನುಮಾನವೂ ಆವರಿಸಿದಾಗ ಒಂದಾದರೂ ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸಿರುವ ಷಫಾಕನ ಬಗ್ಗೆ ತುಸು ಅಂತಃಕರಣ ಮಿಡಿದರೂ, ಕಡೆಗುಳಿಯುವುದು ಅನುಮಾನವೇ. ತಿರುಮಲಗಿರಿಗೆ ಹೋಗುವ ಆಲೋಚನೆಯೂ ಒಳ್ಳೆಯದೇ. ಸುತ್ತಮುತ್ತೆಲ್ಲಾ ಕೊಳಕಾಗಿರುವ ಈ ಕೊಂಪೆಯಲ್ಲಿರುವುದಕ್ಕಿಂತ ಅಲ್ಲಿಗೆ ಹೋಗುವುದೇ ಲೇಸು... ಆದರೆ ಪಾಪದ ಶ್ರಾವಣನಿಗೆ ಈ ಅಕಬರಬಾಗಿನ ಮನೆಗೆ ಅವನು ನಿರೀಕ್ಷಿಸಿದಷ್ಟು ಬೆಲೆಯೇ ಸಿಗುತ್ತಿಲ್ಲ. ಸೇತುವೆ ದಾಟಿದ ಈ ಬದಿಯ ಏರಿಯಾ ಹಾಗೆಯೇ. ಕಡಿಮೆ ಬೆಲೆಯನ್ನು ಪಡೆಯುತ್ತದೆ. ಈ ಮನೆ ಹೇಗಾದರೂ ಮಾರಾಟವಾದರೆ ಅದರಲ್ಲಿ ಬಂದ ಹಣ ಹೂಡಿ ಒಂದು "ಆರ್ಕಿಟೆಕ್ಟ್ ಡಿಸೈನ್ಡ್ ಹೌಸ್" ಕಟ್ಟಬೇಕೆಂಬ ಕನಸು ಶ್ರಾವಣನಿಗುಂಟು. ಇದು ಮಾತ್ರ ಅವನ ಎಡಪಂಥೀಯ ರೆಟಾರಿಕ್ಕಿಗೊಳಗಾಗದೇ, ಮಧ್ಯತರಗತಿಯ ಬೂರ್ಜ್ವಾಗಳ ಶೈಲಿಯಲ್ಲಿ "ವೆಲ್ ವೆಂಟಿಲೇಟೆಡ್, ಸೆಲ್ಫ್ ಕಂಟೇನ್ಡ್ ಹೌಸ್" ಆಗಬೇಕೆಂದು ಅವನು ಕನಸು ಕಾಣುತ್ತಾನೆ. ಶ್ರಾವಣ ಕಟ್ಟಿರುವ ಈ ಕನಸುಗಳ ದರ್ಶನವೂ ರಾಯರಿಗೆ ತಮ್ಮ ರೋಗದ ಕಾಲದಲ್ಲೇ ಆಗಿದೇ. ಆದರೂ ಇದು ಖರೆಯಿರಲೇಬೇಕು. ದಿನದ ಯಾವುದೇ ಸಮಯದಲ್ಲಿ ಷಫೀಕ್ ಅಲಿ ಯಾರ್ಯಾರನ್ನೋ ಕರೆತಂದು ಮನೆಯನ್ನು ಪರೀಕ್ಷೆಗೊಳಪಡಿಸುವುದು ರಾಯರ ಪ್ರಜ್ಞೆಗೆ ಬಂದಿದೆ. ಮಧ್ಯಹ್ನ ನಿದ್ರೆಗೆಂದು ಮಲಗಿದಾಗ ಎಷ್ಟುಬಾರಿ ಸೊಸೆ ಬಂದು ತಮ್ಮನ್ನು ಎಬ್ಬಿಸಿಲ್ಲ! ಎದ್ದನಂತರ ಅವರಿಗೆ ಪ್ಲಿಂತ್ ಏರಿಯಾ, ಡೈಮೆಂಷನ್, ಸ್ಕ್ವೇರ್ ಯಾರ್ಡ್ ಇತ್ಯಾದಿಯಾಗಿ, ಸೈಟು ಮನೆಗಳಿಗೆ ಸಂಬಂಧಿಸಿದ ಅನೇಕ ವಿಷಯಗಳು ಕೇಳಿಸುತ್ತವೆ. ಭಾಸ್ಕರರಾಯರಿಗೆ ಇಲ್ಲಿ ಮನೆ ಕೊಂಡದ್ದೇ ತಪ್ಪು ಎನ್ನುಸುವಂಥ ಸಂದರ್ಭದಲ್ಲಿ ಈ ಮಾರಾಟದ ಮಾತು ಸಂತೋಷ ನೀಡಿದರೂ ಮತ್ತೆ ತಿರುಮಲಗಿರಿ ಇತ್ಯಾದಿಯಾಗಿ ಇಲ್ಲೇ ಸೆಟಲ್ ಆಗುವುದಕ್ಕಿಂತ ಮೈಸೂರಿಗೆ ಬಂದು ಒಂದು ಸೈಟು ಕೊಳ್ಳುವುದು ಉತ್ತಮವೆನ್ನಿಸುತ್ತದೆ. ಹುಣಸೂರು ರಸ್ತೆಯಲ್ಲಿ ಸಿಐಟಿಬಿಯವರ ಸೈಟುಗಳು ಮಾರಾಟಕ್ಕಿವೆಯಂತೆ. ಆದರೆ ಈ ಮಾತುಗಳನ್ನು ಹೇಳಲು ಪರಾವಲಂಬಿ ಭಾಸ್ಕರರಾಯರಿಗೆ ಬಾಯಿ ಬರುವುದಿಲ್ಲ. ಹೇಳಿದರೂ ಯಾರೂ ಕೇಳುವುದಿಲ್ಲ. ಈ ಇಂಥ ಆಲೋಚನೆಗಳು ಬಂದಾಗ, ಅವರು ಭಗವದ್ ಗೀತೆ ಹಿಡಿದು ಕುಳಿತುಬಿಡುತ್ತಾರೆ. ಅದನ್ನೆಂದೂ ಅವರು ಅಂತರ್ಗತ ಮಾಡಿಕೊಳ್ಳಲು ಪ್ರಯತ್ನಿಸಿಲ್ಲವಾದರೂ, ಈಗವರಿಗೆ ಅದೊಂದೇ ಕಾಲಹರಣ ಮಾಧ್ಯಮವಾಗಿದೆ.

ಮಾರಲು ನಿಶ್ಚಯಿಸಿರುವ ಈ ಮನೆಗಾಗಿ, ಸುಮ್ಮನೆ ರಂಗಾರೆಡ್ಡಿಯ ದ್ವೇಷ ಕಟ್ಟಿಕೊಳ್ಳುವುದು ಬೇಡವೆಂದು ಹೇಳಲೂ ಭಾಸ್ಕರರಾಯರ ಮನ ಹಾತೊರೆಯುವುದು. ಹೇಗಿದ್ದರೂ ಮಾರಾಟಮಾಡುವುದೇ ಆದಲ್ಲಿ ಮುಂಬರುವ ಮಾಲೀಕನಿಗೆ ಈ ಲಿಟಿಗೇಷನ್ನಿನ ಪರಂಪರೆಯನ್ನು ಏಕೆ ಬಳುವಳಿಯಾಗಿ ನೀಡಬೇಕು?

ಆದರೂ ಮಕ್ಕಳಿಗೆ ಇಪ್ಪತ್ತು ದಾಟಿದ ನಂತರ ಬುದ್ಧಿಮಾತು ಹೇಳುವುದು ಸರಿಯಲ್ಲ. ನಲವತ್ತು ದಾಟಿದ ನಂತರ ಅವರ ಬುದ್ಧಿಮಾತನ್ನೇ ಕೇಳುವ ಸ್ಥಿತಿ ಪ್ರಾಪ್ತವಾಗುತ್ತದೆ. ಶ್ರಾವಣನಿಗೆ ನಲವತ್ತರ ನಂತರ ಐದು ವರ್ಷಗಳಾಗಿವೆ.

******

ಶ್ರಾವಣನಿಗೂ ಈ ಕೋರ್ಟು ಇತ್ಯಾದಿಗಳು ತನ್ನ ಖಾಸಗೀ ಸಮಯವನ್ನು ಕಬಳಿಸುತ್ತಿರುವುದು ಚಡಪಡಿಕೆಯುಂಟು ಮಾಡಿದೆ. ಅವನಿಗೂ ಆಗಾಗ ಅನ್ನಿಸುತ್ತದೆ - ಮನೆ ಮಾರಲು ನಿಶ್ಚಯಿಸಿರುವಾಗ ಸುಮ್ಮಸುಮ್ಮನೆ ತಾನೇಕೆ ಹುಚ್ಚನಂತೆ ಕೂರ್ಟು ಕಛೇರಿಗಳೆಂದು ಅಲೆಯುತ್ತಿರುವುದು? ಆದರೂ ಹಿಡಿದ ಪಟ್ಟನ್ನು ಬಿಡಲು ಅವನ ಮನಸ್ಸೊಪ್ಪದು. ಜತೆಗೆ ಈಗ ಈ ಮನೆ ಮಾರಾಟವಾಗುವ ಖಾತ್ರಿಯಿದೆಯೇ? ಇದೂ ಸಾಲದೆಂಬಂತೆ, ರಂಗಾರೆಡ್ಡಿಯ ಮೇಲೆ ತಾನೀಗ ಹೂಡಿರುವ ಸಮರ ನೋಟೀಸುಗಳನ್ನು ಹಂಚುವ ಪೋಸ್ಟ್ ಮೆನ್ ನಿಂದಾಗಿ ಇಡೀ ಏರಿಯಾಕ್ಕೇ ತಿಳಿದಿರುವಾಗ, ಇದೊಂದು ಹಮ್ಮಿನ ಪ್ರಶ್ನೆಯೂ ಆಗಿಬಿಟ್ಟಿರುವುದು ಸಹಜ. ಸಮೀರ್ ಕುಮಾರ್ ಬಾಜಾ ಬಜಂತ್ರಿಗಳ ಸಮೇತ ತನ್ನ ಮನೆಗೆ ಬಂದದ್ದು, ಈ ಎಲ್ಲಕ್ಕೂ ಒಂದು ಹೊಸ ಆಯಾಮ ಸೇರಿಸಿ ಇನ್ನೂ ವಿಸ್ತ್ರುತ ರೂಪ ಕೊಟ್ಟುಬಿಟ್ಟಿದೆ. ಈಗ ಹಿಂಜರಿದರೆ ಮಾನ ಹರಾಜಾದಂತೆಯೇ ಲೆಕ್ಕ. ತಿರುಮಲಗಿರಿಯಲ್ಲೊಂದು ಮನೆ ಕಟ್ಟಿ ಅಲ್ಲಿಗೆ ಹೊರಟುಬಿಟ್ಟಿದ್ದರೆ, ಈ ಎಲ್ಲಕ್ಕೂ ಒಂದು ಮಂಗಳ ಹಾಡಿಬಿಡಬಹುದಿತ್ತು. ಆದರೂ ತಾನೀಗಿರುವ ವರ್ತುಲದಲ್ಲಿ ಮನೆ ಮಾರಾಟವಾದ ಹೊರತು ತಿರುಮಲಗಿರಿಯ ಮನೆ ಕಟ್ಟುವುದಕ್ಕಾಗುವುದಿಲ್ಲ - ಹುಚ್ಚು ಬಿಡುವವರೆಗೂ ಮದುವೆಯಾಗುವುದಿಲ್ಲ.

******

ಹೀಗೊಂದು ದಿನ ರಾತ್ರೆ ಎಲ್ಲರೂ ನಿದ್ರೆಯಲ್ಲಿದ್ದಾಗ ಭಾಸ್ಕರರಾಯರು ಇದ್ದಕ್ಕಿದ್ದಂತೆ ಧಿಗ್ಗನೆದ್ದು ಕುಳಿತರು. ಹಾಗೆ ಇದ್ದಕ್ಕಿದ್ದಂತೆ ಎಂದೂ ಅವರು ಬೆಚ್ಚಿಬಿದ್ದು ಎದ್ದವರಲ್ಲ. ಕಳೆದೆರಡು ದಿನಗಳಿಂದಲೂ ಹೈದರಾಬಾದು ಹತ್ತಿ ಉರಿಯುತ್ತಿತ್ತು. ಅರ್ಥಾತ್: ಹಿಂದೂಗಳಿಗೂ ಮುಸಲ್ಮಾನರಿಗೂ ಜೋರು ಕಾಳಗ ನಡೆಯುತ್ತಿತ್ತು. ಯಾವುದೋ ರಾಜಕೀಯ ಕಾರಣಕ್ಕೆ ಇದು ನಡೆಯುತ್ತಿದೆ, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟುವುದಿಲ್ಲ ಎಂಬ ಮಾತನ್ನು ರಾಯರು ನಂಬಲಿಲ್ಲ. ಅವರಿಡೀ ದೇಹವನ್ನು ಭಯವೇ ಆವರಿಸಿತ್ತು. ಬದುಕಿನಷ್ಟೇ ಅಸಂಗತವಾಗಿ ಕಂಡ ಈ ಘಟನಾವಳಿಯನ್ನು ನೋಡಿ, ಭಾಸ್ಕರರಾಯರು ಏನು ಮಾಡಲೂ ತೋಚದವರಾಗಿ ಚಿಂತೆಗೊಳಗಾದರು. ಯಾವುದೋ ಆಸ್ತಿಯ ವಿಷಯಕ್ಕೆ ನಡೆಯಿತೆನ್ನಲಾದ ಒಂದು ಸಣ್ಣ ಘಟನೆ ಹಿಂದೂ ಮುಸಲ್ಮನರ ನಡುವಿನ ಜಟಾಪಟಿಯಾಗಿ ಈ ವಿಸ್ತೃತ ವಿಕರಾಳ ರೂಪ ಪಡೆದಿತ್ತು. ಇಲ್ಲಿಯೂ, ಅಂದರೆ, ರಂಗಾರೆಡ್ಡಿಯ ವಿಷಯದಲ್ಲಿಯೂ ಆಸ್ತಿಗೆ ಸಂಬಂಧಿಸಿದ ಜಟಾಪಟಿಯೇ ನಡೆಯುತ್ತಿದೆ ಎಂಬುದಕ್ಕೆ ಭಾಸ್ಕರರಾಯರು ಅವಶ್ಯಕತೆಗಿಂತ ಹೆಚ್ಚಿನ ಅರ್ಥ ಕಲ್ಪಿಸಿದರೆನ್ನಿಸುತ್ತದೆ. ಅರ್ಥರಹಿತವಾಗಿ, ನಿಷ್ಕಾರಣವಾಗಿ ಪ್ರೀತಿಗೂ ಅಲ್ಲದೇ, ದ್ವೇಷಕ್ಕೂ ಅಲ್ಲದೆ ಜನರನ್ನು ಕೊಲ್ಲುವ ಈ ಪ್ರಕ್ರಿಯೆ ಭಾಸ್ಕರರಾಯರಿಗೆ ಆಘಾತ ಉಂಟುಮಾಡಿತ್ತು.

ಶ್ರಾವಣನಂತೂ, ರಂಗಾರೆಡ್ಡಿಯ ಕೂದಲನ್ನೂ ಕೊಂಕಿಸಲಾಗದ ತನ್ನ ಅಸಹಾಯಕತೆಯನ್ನು ಒಂದು ಹಠವಾಗಿಸಿಕೊಂಡು, ಮನೆಯವರ ಮೇಲೆಲ್ಲಾ ಕೆಂಡಕಾರುತ್ತಾ, ಕಟ್ಟಿರುವ ಕಟ್ಟಡವನ್ನು ಉರುಳಿಸುವ ಶಪಥಂಗೈದು ಓಡಾಡುತ್ತಿದ್ದ. ಇದನ್ನವನು ಒಂದು ತಾತ್ವಿಕ ಪ್ರಶ್ನೆಯನ್ನಾಗಿ ಮಾಡಿಕೊಂಡು ಹೋರಾಡಬೇಕೆಂಬ ಛಲ ಹಿಡಿದು ಮುಂದುವರೆದದ್ದು - ರಾಯರಿಗೆ - ಈಗ ಈ ಕೊಲೆಸುಲಿಗೆ ನಡೆಯುತ್ತಿರುವ ಇಂಥ ಸಮಯದಲ್ಲಿ ತತ್ವಕ್ಕಾಗಿ, ದಬ್ಬಾಳಿಕೆಯ ವಿರುದ್ಧ ಹೋರಾಡುತ್ತೇನೆಂಬ ಶ್ರಾವಣನ ಹಠದಷ್ಟೇ ಅರ್ಥರಹಿತವಾಗಿ ಜಾತಿಗನುಸಾರವಾಗಿ ಜನರನ್ನು ಕೊಲ್ಲುವುದೂ ಭಾಸ್ಕರರಾಯರಿಗೆ ಅರ್ಥಹೀನವಾಗಿ ಕಂಡಿತ್ತು. ಎರಡು ದಿನದ ಹಿಂದಿನಿಂದಲೂ, ಸುಪ್ತ ಜಾಗೃತ ಅವಸ್ಥೆಗಳ ಮಧ್ಯೆ ಓಲಾಡುತ್ತಾ, ಸಮಯದ ಪ್ರಜ್ಞೆಯೇ ಇಲ್ಲದೆ ಭಾಂಗ್ ಸೇವಿಸಿದವರ ರೀತಿಯಲ್ಲಿ ಭಾಸ್ಕರರಾಯರು ಬಿದ್ದುಕೊಂಡಿದ್ದರು.

ಸಣ್ಣಂದಿನಿಂದಲೂ ಶ್ರಾವಣ ಸ್ವಲ್ಪ ಹಠಮಾರಿಯೇ. ಅವನ ಹಠ ಎಷ್ಟರ ಮಟ್ಟಿಗೆಂದರೆ, ಮಕ್ಕಳು ಯಾವ ಬಟ್ಟೆ ತೊಡಬೇಕು ಎಂಬುದರಿಂದ ಹಿಡಿದು ಯಾವ ಸಮಯಕ್ಕೆ ಉಚ್ಚೆ ಹುಯ್ಯಬೇಕು ಎಂಬುದರವರೆಗೆ ನಿರ್ಧರಿಸಿ, ಕಾರ್ಯಗತವಾಗುವಂತೆ ನೋಡಿಕೊಳ್ಳುವವ ಮತ್ತು ಇದಕ್ಕೆ ಸರಿಯಾದ ಇಂಧನ ಒದಗಿಸುವವನು ಸುಬ್ಬಾರಾವು. ಇಬ್ಬರೂ ಸೇರಿ ರಂಗಾರೆಡ್ಡಿಯ ಹಮ್ಮಿನ ಸಂಕೇತವಾಗಿದ್ದ ಆ ಕಟ್ಟವನ್ನಿಳಿಸಲು, ಗಾಳಿ, ಬೆಳಕು ಸಾಕಾಗುವುದಿಲ್ಲ ಎಂಬ ಕಾರಣದಿಂದ ಹಿಡಿದು ಕಾರ್ಪೊರೇಷನ್ ರೂಲ್ಸಿನವರೆಗೆ ಎಲ್ಲವನ್ನೂ ಉಪಯೋಗಿಸ ಹೊರಟ ಹಠದ ಫಲವಾಗಿ ಮನೆಗೆ ಮ್ಯುನಿಸಿಪಾಲಿಟಿಯವರು, ಕೋರ್ಟಿನವರು, ಷಫೀಕನ ಎಂದಿನ ಗಿರಾಕಿಗಳು - ಹೀಗೆ ಕ್ಷಣಕ್ಕೊಮ್ಮೆ ಜನ ಬರುವ ಹಾಗಾಗಿತ್ತು.

ಹೀಗೆ ಬಂದವರೆಲ್ಲಾ ಶ್ರಾವಣನ ಮನೆಯ ಆತಿಥ್ಯ ಸ್ವೀಕರಿಸಿ, ಇಡೀಮನೆಯನ್ನು, ಹಿಂದಿನ ರಂಗಾರೆಡ್ಡಿಯ ಹೊಸ ಪೋರ್ಷನ್ನನ್ನೂ ಪರಿಶೀಲಿಸಿ ಹೊರಡುವವರೇ. ಹೀಗೆ ಬಂದವರನ್ನೆಲ್ಲಾ ರಂಗಾರೆಡ್ಡಿಯೂ ಯಾವ ತರಲೆಯಿಲ್ಲದೇ ಬರಮಾಡಿಕೊಂಡು ಪ್ರೀತಿಯಿಂದ ಸಹಕರಿಸಿದನಂತೆ!!

*****

ಶ್ರಾವಣನಿಗೆ ಈಗ ಈ ಎರಡು ದಿನದಿಂದ ದೂರದರ್ಶನವನ್ನು ಹಚ್ಚಲೂ ಭಯವಾಗುತ್ತಿದೆ. ಅದಕ್ಕೆ ಕಾರಣವಿಲ್ಲದಿಲ್ಲ. ಇನ್ನು ಅನವಶ್ಯಕವಾಗಿ ತನ್ನ ಮಗ ಕೋಮು ಸಂಬಂಧಿತ ಚರ್ಚೆ ಪ್ರಾರಂಭಿಸಿಬಿಡುತ್ತಾನೆ. ಮನೆಯಲ್ಲಿ - ಅದರಲ್ಲೂ ಸುತ್ತಮುತ್ತೆಲ್ಲಾ ಭಯವೇ ಆವರಿಸಿರುವಾಗ ಈ ವಿಷಯ ಚರ್ಚಿಸುವುದು ತನಗೆ ಹಿಡಿಸುವುದಿಲ್ಲ. ಇದರ ಜತೆಗೇ ಅಪ್ಪನ ಭಯವೂ ಉಂಟು. ಈಗ ನಡೆಯುತ್ತಿರುವ ಈ ಸಾವುನೋವುಗಳ ವಿಷಯ ಚರ್ಚೆಗೊಳಗಾದರೆ, ಅಪ್ಪ ತನಗೆ ಆಫೀಸಿಗೂ ಹೋಗಲು ಬಿಡದಂತೆ ವರಾತ ಹಚ್ಚುತ್ತಾರೆ. ಮೊದಲೇ ಮುಸಲ್ಮಾನರು ತುಂಬಿರುವ ಏರಿಯಾ ಎಂದು ಅಪ್ಪನಿಗೆ ಇಲ್ಲದ ಭಯವಿದೆ. ಈ ಎರಡು ದಿನಗಳಿಂದ ಪತ್ರಿಕೆಯವನೂ ಕೈಕೊಟ್ಟದ್ದು - ಈ ಕಾರಣದಿಂದಲೇ - ಶ್ರಾವಣನಿಗೊಂದು ನಿರಾಳ ಭಾವ ತಂದಿತ್ತು.

ಆದರೂ ಈ ಎಲ್ಲ ವಿಷಯಗಳೂ ಅಪ್ಪನಿಗೆ ತಿಳಿದೇ ಇಲ್ಲವೆಂದೇನೂ ಶ್ರಾವಣ ಭಾವಿಸಿಲ್ಲ. ಅವರಿಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಆದ್ದರಿಂದಲೇ ಆಗಾಗ ತಾನು ಅಪ್ಪನೊಂದಿಗೆ ಮಾತನಾಡಿ, ಇದೆಲ್ಲಾ ಹೈದರಾಬಾದಿನಲ್ಲಿ ಮಾಮೂಲಿ ವಿಷಯ ಎಂದೆಲ್ಲಾ ಹೇಳಿ ಸ್ವಲ್ಪ ಸಮಾಧಾನ ಮಾಡಬೇಕು ಎಂತಲೂ ಅನ್ನಿಸುವುದು. ಆದರೂ ಆ ಅನಿಸಿಕೆಯನ್ನು ಹತ್ತಿಕ್ಕಲು ಒಂದೇ ಒಂದು ಕಾರಣವಿದೆ. ಈ ವಿಷಯ ಚರ್ಚೆಯಾಗುತ್ತಿದ್ದಂತೆಯೇ ಅಪ್ಪ - ಎಲ್ಲರೂ ಮೈಸೂರಿಗೆ ಹೋಗೋಣವೆಂದು ಪ್ರಾರಂಭಿಸಿಬಿಡುತ್ತಾರೆ. ಈಗ ಈ ಎಲ್ಲ ಗೊಂದಲಗಳ ನಡುವೆ ಆ ವಿಷಯವನ್ನು ಚರ್ಚಿಸುವ ತಾಳ್ಮೆಯಂತೂ ತನ್ನಲ್ಲಿಲ್ಲ. ಸೇತುವಾಯಾಚೆ, ತಿರುಮಲಗಿರಿಯಲ್ಲಿ ಹೀಗಲ್ಲಾ ನಡೆಯುವುದಿಲ್ಲ ಎಂದು ಹೇಳಬಯಸಿದರೂ, ಅಪ್ಪನ ದೃಷ್ಟಿಯಲ್ಲಿ ಹೈದರಾಬಾದು ಹೈದರಾಬಾದಾಗಿಯೇ ಉಳಿಯುವುದರಿಂದಾಗಿ ಅವರಿಗೆ ಸಮಾಧಾನ ಹೇಳುವುದೂ ತನ್ನ ಮನಶ್ಶಾಂತಿಗೇ ಕುತ್ತು ಎಂದು ಹೆದರಿ ತನ್ನ ಪಾಡಿಗೆ ತಾನಿದ್ದುಬಿಟ್ಟಿದ್ದಾನೆ.

*****

ಇದೀಗ ರಾತ್ರೋರಾತ್ರಿ ಧಿಗ್ಗನೆದ್ದು ಕುಳಿತ ರಾಯರಿಗೆ ದಿನವೂ ಬಂದು ಹೋಗುತ್ತಿದ್ದ ಜನರ ನೆನಪು ಬಂದದ್ದೇಕೆಂದು ತಿಳಿಯಲಿಲ್ಲ. ಅಥವಾ ಇದು ತಮ್ಮ ಎಂದಿನ ಮಂಪರಿನ ಸ್ಥಿತಿ ಇರಬಹುದೇ ಎಂಬುದೂ ಅರ್ಥವಾಗದೇ ದಿಗ್ಭ್ರಾಂತರಾದರು. ಮೊನ್ನೆ ನಡೆದದ್ದೂ ಹೀಗೆಯೇ - ಮನೆ ಮಾರಾಟಕ್ಕೆಂದು ಮನೆ ನೋಡಲು ಷಫೀಕ್ ಕರೆತರುವ ಜನ, ರಂಗಾರೆಡ್ಡಿಯ ಕಟ್ಟಡದಿಂದ ಇನ್ಸ್ ಪೆಕ್ಷನ್‍ಗಾಗಿ ಬರುವ ಜನ.... ಹೀಗೆ ಜನಾರಣ್ಯದ ಅಭ್ಯಾಸವಾಗಿಬಿಟ್ಟಿದ್ದ ರಾಯರು ತಾವು ಮಧ್ಯಹ್ನ ಮಲಗಿದ್ದಾಗ ಲಯಬದ್ಧವಾಗಿ ಗೇಟ್ ತಟ್ಟಿದ ಶಬ್ದ ಕೇಳಿಸಿತ್ತು. ಅಂದೇಕೋ, ಯಾರೂ ಮನೆಯಲ್ಲಿ ಇರಲಿಲ್ಲ. ರಾಯರು ಬಾಗಿಲು ತೆರೆದು ಹೊರಬಂದು ನೋಡಿದರೆ, ಉರ್ದುವಿನಲ್ಲಿ ಮಾತಾಡುತ್ತಿದ್ದ ದೊಡ್ಡ ಗುಂಪೊಂದು ಹೊರಗೆ ನಿಂತಿತ್ತು. ರಾಯರು ಏನೂ ತೋಚದವರಾಗಿ ಬಯಲಿನಲ್ಲಿ ನಿಂತಿದ್ದರು. ನಂತರ ಕುತೂಹಲದಿಂದ ಗೇಟಿನ ಬಳಗ ಹೋಗಿ ಗೇಟನ್ನೂ ತೆರೆದರು. ಸಮೀಪ ಹೋದಕೂಡಲೇ, ಗುಂಪಿನ ಪ್ರತಿ ವ್ಯಕ್ತಿಯ ಕೈಯಲ್ಲೂ ಕತ್ತಿ, ಖಡ್ಗ, ಸೈಕಲ್ ಚೇನು ಇತ್ಯಾದಿಯಾಗಿ ಆಯುಧಗಳನ್ನು ಕಂಡ ರಾಯುರು ಏನೂ ತೋರದೇ ಕಂಬವಾದರು. ಆ ಗುಂಪಿನಲ್ಲಿ ಷಫೀಕ್ ಅಲಿಯೂ ಇದ್ದಹಾಗಿತ್ತು. .. ಅಥವಾ ಅದು ಕೇವಲ ರಾಯರ ಭ್ರಮೆಯಿದ್ದಿರಲೂ ಬಹುದು. ಗುಂಪಿಗೆ ಏನನ್ನಿಸಿತೋ.. ಯಾರೂ ಮುಂದುವರೆಯಲಿಲ್ಲ. ಭಾಸ್ಕರರಾಯರು ಷಫೀಕ್ ಅಲಿ ಎಂದು ಭಾವಿಸಿದ್ದ ವ್ಯಕ್ತಿ "ಬುಡ್ಡಾ ಛೋಡೋ ಮಿಯಾ.." ಎಂದಂತಾಗಿ, ಗುಂಪು ರಸ್ತೆಯಂಚಿಗೆ ಕರಗಿ ಹೋಯಿತು. ಮುದುಕನಾದದ್ದಕ್ಕೆ ರಾಯರಿಗೆ ಜೀವನದಲ್ಲಿ ಮೊದಲಬಾರಿಗೆ ನಿರಾಳವಾದಂತೆ ಅನ್ನಿಸಿದರೂ, ಏನೂ ತೋಚದೇ ಭಾರ ಹೃದಯದಿಂದ ಬಾಗಿಲು ಹಾಕಿ ಬಂದರು. ಸಂಜೆಗೆ ಶ್ರಾವಣ ಬಂದು ಬಾಗಿಲನ್ನು ಲಯಬದ್ಧವಾಗಿ ಬಡಿದಾಗ, ರಾಯರಿಗೆ ಬಾಗಿಲಬಳಿ ಹೋಗಲೂ ಭಯವಾಯಿತು. ಕಡೆಗೆ ಕನ್ನಡದಲ್ಲಿ ಮಗ ಸೊಸೆ ಮಾತಾಡಿದಾಗಲೇ ರಾಯರು ಬಾಗಿಲು ತೆರೆದದ್ದು.

ಪ್ರಸ್ತುತ ಹೀಗೆ ಧಿಗ್ಗನೆದ್ದು ಕುಳಿತುಕೊಳ್ಳುವುದಕ್ಕೆ ಕಾರಣ ಕನಸೋ ನನಸೋ ತಿಳಿಯದು. ಅಂದು ನಡೆದ ಈ ಘಟನೆಯನ್ನು ರಾಯರು ಯಾಕೋ, ರಾಯರು ಯಾರಿಗೂ ಹೇಳಲಿಲ್ಲ. ಹೇಳದಿರುವುದಕ್ಕೆ ಕಾರಣ ಅದು ನಿಜವಾಗಿ ನಡೆದದ್ದರ ಬಗ್ಗೆ ರಾಯರಿಗಿದ್ದ ಮೂಲಭೂತ ಅನುಮಾನವೇ ಇರಬಹುದು. ಸುತ್ತಲೂ ಮುಸಲರು ತುಂಬಿದ್ದ ಆ ಜಾಗದಲ್ಲಿ ರಾತ್ರೋರಾತ್ರಿ ಜೆಹಾದಿನ ಕರೆ ಬಂತಂತಾಗಿ ರಾಯರು ಬೆಚ್ಚಿದರು. ರಾಯರಿಗೆ ಮೊಮ್ಮಗನ ನೆನಪಾಯಿತು. ಸಮಯ ನೋಡಿದರೆ ಆಗಲೇ ಬೆಳಗಾಗಲಿಕ್ಕೆ ಬಂದಿತ್ತು. ಮುಂಜಾನೆ ಐದೂವರೆಗೇ ಮೊಮ್ಮಗ ಏಂಸೆಟ್ ಶಿಕ್ಷಣಕ್ಕೆಂದು ನಾಂಪಲ್ಲಿಗೆ ಹೋಗಬೇಕು. ಹೊರಗೆಲ್ಲಾ ಗಲಾಟೆ. ಎದ್ದು ನೋಡಿದರೆ ಹಾಸಿಗೆ ಬರಿದಾಗಿತ್ತು. ರಾಯರಿಗೆ ಮಂಪರಿನಲ್ಲಿ ಏನೂ ತೋಚದಾಗಿ ಒಂದು ಕ್ಷಣ ನಿಂತರು.

ಅವರ ಮೈಯಿಂದ ಬೆವರು ಧಾರಾಕಾರ ಹರಿಯಿತು. ಮೇಲೆ ಗಡಿಯಾರದ ಶಬ್ದ ಟಿಕ್ ಟಿಕ್ ಎಂದು ಕಿವಿಗಪ್ಪಳಿಸುವಂತೆ ಹೊಡೆದುಕೊಳ್ಳುತ್ತಿತ್ತು. ಅದರ ಲಯಬದ್ಧತೆಯಿಂದ ರಾಯರು ವಿಚಲಿತರಾದರು. ಕಳೆದೆರಡು ದಿನಗಳಿಂದಲೂ ಅಂದು ಗೇಟ್ ಬಡಿವ ಶಬ್ದ ಕೇಳಿದಂತೆನಿಸಿದಾಗಿನಿಂದಲೂ ರಾಯರಿಗೆ ಯಾವುದೇ ಲಯಬದ್ಧ ಶಬ್ದವನ್ನು ತಡೆದುಕೊಳ್ಳಲು ಕೈಲಾಗುತ್ತಿರಲಿಲ್ಲ. ರಾಯರು ಮೂತ್ರ ವಿಸರ್ಜಿಸಲೆಂದು ಬಾತ್-ರೂಮು ಹೊಕ್ಕರೆ - ಅಲ್ಲಿಯೂ ನಲ್ಲಿಯಿಂದ ತೊಟ್ಟಿಕ್ಕುತ್ತಿದ್ದ ನೀರಿನ ಶಬ್ದ ಕೇಳಿಸಿತು. ಇದನ್ನು ತಡೆಯಲಾಗದ ರಾಯರು ಮೂತ್ರ ವಿಸರ್ಜಿಸುವುದನ್ನೂ, ಮುಖ ತೊಳೆಯುವುದನ್ನೂ ಮರೆತು ನಲ್ಲಿಯನ್ನು ಗಟ್ಟಿಯಾಗಿ ತಿರುಗಿಸಿದರು. ಆದರೂ ಅದು ತೊಟ್ಟಿಕ್ಕುವುದು ನಿಲ್ಲಲಿಲ್ಲ. ಬೇಸರ ಬಂದಂತಾಗಿ ಅದಕ್ಕೊಂದು ಬಟ್ಟೆ ತುರುಕಿದರು. ತುರುಕಿದಾಗ ಆವರಿಸಿದ ಮೌನ ಅಸಹನೀಯವಾದರೂ, ಅದು ಶಬ್ದಕ್ಕಿಂತ ವಾಸಿ ಅನ್ನಿಸಿತು. ಹೊರಬಂದು ನಿರಾಳ ಉಸಿರುಬಿಡುವಷ್ಟರಲ್ಲಿ ಮತ್ತೆ ಶಬ್ದ ಪ್ರಾರಂಭವಾಯಿತು. ಈಗ ಕಟ್ಟಿದ್ದ ಬಟ್ಟೆಯನ್ನೂ ದಾಟಿ ನೀರು ತೊಟ್ಟಿಕ್ಕುತ್ತಿತ್ತು. ಈ ಬಾರಿ ಭಾಸ್ಕರರಾಯರು ತಮ್ಮೆಲ್ಲ ಬಲವನ್ನೂ ಪ್ರಯೋಗಿಸಿ ನಲ್ಲಿಯನ್ನು ಮತ್ತಷ್ಟು ಗಟ್ಟಿಯಾಗಿ ತಿರುಗಿಸಿದಾಗ ವಾಷರ್ ಕಿತ್ತುಬಂದು ನೀರು ಧಾರಾಕಾರವಾಗಿ ಹರಿಯತೊಡಗಿತು. ಶಬ್ದದ ಲಯಬದ್ಧತೆಯನ್ನು ಒಂದೆರಡು ಕ್ಷಣ ಅವರ ಮನಸ್ಸು ಮರೆತರೂ, ಈಗಿನ ಅಸಹಾಯಕ ಪರಿಸ್ಥಿತಿಗೆ ಅವರಿಗೆ ತಮ್ಮ ಮೇಲೆ ತೀವ್ರ ತಿರಸ್ಕಾರ ಉಂಟಾಗಿ, ಕಟ್ಟೆ ಕಟ್ಟಿದ್ದ ಕಣ್ಣೀರ ಮಹಾಪೂರ ಬಂದಂತಾಗಿ, ಹಣೆ ಚಚ್ಚಿಕೊಂಡು ಗೊಳೋ ಎಂದು ಅತ್ತರು. ಅಷ್ಟರಲ್ಲಿ ಶ್ರಾವಣ, ಅವನ ಹೆಂಡತಿ, ಇಬ್ಬರೂ ಎದ್ದರು. ಶ್ರಾವಣ ಅಪ್ಪನ ಮೇಲೆ ವಿಪರೀತ ರೇಗಾಡಿದ. ಮೊಮ್ಮಗನ ಶೋಧದಲ್ಲಿ ಬಂದಿದ್ದ ರಾಯರಿಗೆ, ಅವನು ಅವರಪ್ಪ ಅಮ್ಮನ ಹಾಸಿಗೆಯ ಮೇಲೆ ಮಲಗಿದ್ದಾನೆಂದು ತಿಳಿದಾಗ, ಯಾವುದು ಭ್ರಮೆ ಎಂದು ಅರ್ಥವಾಗದೆ, ಏನೊಂದನ್ನೂ ಕಿವಿಗೆ ಹಾಕಿಕೊಳ್ಳದೆಯೇ ತಮ್ಮ ಹಾಸಿಗೆಗೆ ಹೋಗಿ, ಮುಖದ ಮೇಲೆ ದಿಂಬನ್ನೆಳೆದು ಮಲಗಿಬಿಟ್ಟರು.

ಅವರು ದುಃಖಿಸಿ ದುಃಖಿಸಿ ಯಾವಾಗ ನಿದ್ರೆಗೊಳಗಾದರೋ ತಿಳಿಯದು.

****

ವಿಪರೀತ ಜನರಾಗಮನ, ಹಾಗೂ ಅದೂ ನಡೆಯುತ್ತಿರುವಾಗಲೇ ಎಂದಿಗಿಂತ ಭೀಕರವಾಗಿ ಘಟಿಸಿದ ಈ ಕೋಮುಗಲಭೆ - ನಿಜಕ್ಕೂ ಶ್ರಾವಣನನ್ನು ಹೈರಾಣಾಗಿಸಿಬಿಟ್ಟಿತು. ಒಂದೆಡೆ ಮಗನ ಓಡಾಟಕ್ಕೆ, ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವಂತಹ ಏರಿಯಾದಲ್ಲಿ ಮನೆಮಾಡಿದ ಚಡಪಡಿಕೆ, ಮತ್ತೊಂದೆಡೆ ಈ ಮನೆಯೇ ಮಾರಾಟವಾಗದಂತಹ ಚಡಪಡಿಕೆ ಮತ್ತು ಇವೆರಡನ್ನೂ ಮೀರಿ ನಿಂತದ್ದು - ರಂಗಾರೆಡ್ಡಿಯ ವಿಜಯಭಾವನೆಯ ಬೀಗುವಿಕೆಯಿಂದ ಉಂಟಾದ ಚಡಪಡಿಕೆ. ತಾನು ಮನೆ ಮಾರಲಿರುವ ವಿಚಾರ ತಿಳಿದ ರಂಗಾರೆಡ್ಡಿ , ಈಗ ಇಡೀ ಅಕಬರಬಾಗಿನಲ್ಲೇ ಬೀಗತೊಡಗಿದ್ದ - ಅವನಿಂದಾಗಿಯೇ ತಾನು ಮನೆ ಮಾರುತ್ತಿದ್ದೇನೆಂದು. ಅದೂ ಸಾಲದೆಂಬಂತೆ ಅವನೇ ಈ ಮನೆಯನ್ನು ಕೊಳ್ಳುತ್ತಿರುವುದಾಗಿಯೂ ವದಂತಿಗಳನ್ನು ಹಬ್ಬಿಸಿದ್ದ. ಈ ವದಂತಿಗಳೇ ಸಾಲದೆಂಬಂತೆ, ಕೋಮುಗಲಭೆಯ ಸಂದರ್ಭದಲ್ಲಿ ಎಂದಿನಂತೆ ವಿನಾಕಾರಣವಾಗಿ ಕಾಡ್ಗಚ್ಚಿನಂತೆ ಹಬ್ಬುತ್ತಿದ್ದ ಕೋಮು ಸಂಬಂಧಿ ವದಂತಿಗಳು. ಆ ವದಂತಿಗಳಲ್ಲಿ ಸೇರಿಹೋಗಿದ್ದ ಷಫೀಕ್ ಸಾಬರ ಹೆಸರು - ಒಟ್ಟಾರೆ ಆವರಿಸಿದ್ದ ಈ ಇಂಥ ವಾತಾವರಣದಲ್ಲಿ ಅಪ್ಪ ಕಿತ್ತ ನಲ್ಲಿಗೆ ಪ್ಲಂಬರನ್ನು ಎಲ್ಲಂದ ಹಿಡಿದುತರುವುದೆಂದು ತಿಳಿಯಲಿಲ್ಲ. ಮನೆಯಲ್ಲಿಲ್ಲದಾಗ ಮೂರನೆಯ ವ್ಯಕ್ತಿ ಮನೆ ಪ್ರವೇಶಿಸುವುದು - ಅದೂ ಈ ಸಂದರ್ಭದಲ್ಲಿ - ಶ್ರಾವಣನಿಗೆ ಸಮಾಧಾನ ನೀಡುವ ಭಾವನೆಯೇನೂ ಆಗಿರಲಿಲ್ಲ. ಕಡೆಗೂ, ಆ ಗಲಭೆಗಳು ನಿಂತು ಪರಿಸ್ಥಿತಿ ಶಾಂತವಾದಾಗ ಈ ಮನೆಗೆ ಬೀಗ ಜಡಿದಾದರೂ ಸರಿ, ಸೇತುವೆಯಾಚೆಗೆ ಹೋಗಲೇಬೇಕೆಂದು ಶ್ರಾವಣ ನಿರ್ಧರಿಸಿದ. ಒಮ್ಮೊಮ್ಮೆ ಅಪ್ಪ ಹೇಳಿದ್ದೂ ಸರಿಯೆನ್ನಿಸುವುದುಂಟು - ಶಾಂತವಾಗಿ ಮೈಸೂರಿಗೆ ಹೋಗಿ ನೆಲೆಸುವ ಬದಲು ಸುಮ್ಮನೆ ಹೀಗೆ ಮಾನಸಿಕ ಆಯಾಸ ಮಾಡಿಕೊಂಡು ಈ ಹೈದರಾಬಾದಿನಲ್ಲೇ ಮುಂದುವರೆಯುವಂಥದ್ದು ಏನಿದೆ

ಆದರೆ ಇಷ್ಟೆಲ್ಲಾ ಆಲೋಚನೆ ಮಾಡಿದಾಗ್ಯೂ, ಕಡೆಗೆ ಈ ಊರು ಬಿಡುವುದಕ್ಕೆ ಅಂತಃಕರಣ ಒಪ್ಪುವುದೇ ಇಲ್ಲ. ಮತ್ತು ಅಂತಃಕರಣ ಒಪ್ಪದಿರುವ ಈ ಪೂರ್ವ ನಿರ್ಧಾರಕ್ಕೆ ತರ್ಕವೂ ದಕ್ಕುತ್ತದೆ - ಅಕಸ್ಮಾತ್ ತಿರುಮಲಗಿರಿಯಲ್ಲಿ ಇದ್ದಿದ್ದರೆ - ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳೇ ಇರುತ್ತಿರಲಿಲ್ಲವಲ್ಲಾ ಎಂದು.

ಈ ಕಾರ್ಪಣ್ಯಗಳ ನಡುವೆ ಅಪ್ಪನನ್ನು ಒದ್ದಾಡಲು ಬಿಟ್ಟಿರುವ ಬಗ್ಗೆಯೂ ಶ್ರಾವಣನಿಗೆ ತೀವ್ರ ಪಾಪಭಾವನೆ ಕಾಡುವುದು. ಪರಿಸ್ಥಿತಿ ಶಾಂತವಾದೊಡನೆ ಅವರನ್ನು ಮೈಸೂರಿಗೆ ಕಳಿಸಿಬಿಡಬೇಕು ಎನ್ನಿಸಿದರೂ, ಮತ್ತೆ ತರ್ಕವೇ ವಿಜಯ ಸಾಧಿಸುವುದು - ಶಾಂತಪರಿಸ್ಥಿತಿಯಲ್ಲಿ ಅಪ್ಪ ಇಲ್ಲಿದ್ದರೇನು - ಮೈಸೂರಿನಲ್ಲಿದ್ದರೇನು?

****

ರಂಗಾರೆಡ್ಡಿಯ ವಿಷಯಕ್ಕೆ ಬಂದಾಗಲೆಲ್ಲಾ ಭಾಸ್ಕರರಾಯರಿಗೆ ಹೊಸ ಗೊಂದಲಗಳು ಉದ್ಭವವಾಗುತ್ತವೆ. ಉದಾಹರಣೆಗೆ ಶ್ರಾವಣ ಮನೆ ಮಾರಲಿರುವ ವಿಷಯ ಅವನಿಗೆ ತಿಳಿದು ಬಂದಂದಿನಿಂದಲೂ, ವಿಶೇಷ ಪ್ರೀತಿ ವಿನಯಗಳನ್ನು ಅವನು ತೋರುತ್ತಿದ್ದಾನೆ. ಇದೆಲ್ಲಾ ಕಂಡಾಗ ಭಾಸ್ಕರರಾಯರಿಗೆ ಈ ಆಧುನಿಕ ಯುಗವೇ ಆಗುವುದಿಲ್ಲ ಅನ್ನಿಸುತ್ತದೆ. ಹಿಂದೆಲ್ಲಾ ಪ್ರೀತಿಯೆಂದರೆ, ಪ್ರೀತಿ - ಮಾತು ಕೃತಿ, ಚಿತ್ತ, ಮನಸ್ಸು, ಆತ್ಮಗಳಲ್ಲಿ ಪ್ರೀತಿ. ದ್ವೇಷವೆಂದರೆ ಮಾತೇ ಆಡಲಾರದಷ್ಟು ದ್ವೇಷ. ಅವರು ಶಾಲೆಯಲ್ಲಿದ್ದಾಗಿನಿಂದಲೂ ಹೀಗೇ. ಎಂದೂ ಲವ್-ಹೇಟ್ ರಿಲೇಷನ್ ಎಂದರೇನೆಂದೇ ಅರ್ಥವಾಗಿರಲಿಲ್ಲ. ಈಗ ಈ ಶ್ರಾವಣನನ್ನು ರಂಗಾರೆಡ್ಡಿ ಎಷ್ಟು ನಯದಿಂದ ಮಾತನಾಡಿಸುತ್ತಾನೆಂದರೆ, ಯಾವುದು ಸತ್ಯ ಯಾವುದು ಮಿಥ್ಯೆ ಎಂಬಂತಹ ಜೀವನದರ್ಶನದ ಪ್ರಶ್ನೆಗಳು ಉದ್ಭವವಾಗಿ ನಿಲ್ಲುತ್ತವೆ. "ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು" ಎಂದು ಜಯಂತ ಕಾಯ್ಕಿಣಿ ಹೇಳಿದ್ದು ಭಾಸ್ಕರರಾಯರಿಗೆ ನೆನಪಾಗುವುದು. ಈಗೀಗ ಪ್ರೀತಿಗೂ ದ್ವೇಷಕ್ಕೂ ಕಾರಣಗಳೇ ಕಾಣುತ್ತಿಲ್ಲ. ರಂಗಾರೆಡ್ಡಿಯೊಂದಿಗಿನ ಒಡನಾಟವೂ ಅಂಥದ್ದೇ ಎಂದು ರಾಯರಿಗನ್ನಿಸುವುದು. ಮಕ್ಕಳು ಪಕ್ಕದ ಕಾಂಪೌಂಡಿಗೆ ಗೋಡೆ ಹಾರಿ ಜಿಗಿದಾಗ ಎಂದೂ ಶ್ರಾವಣ ಬೈದದ್ದಿಲ್ಲ. ಹಾಗೆ ನೋಡಿದರೆ ಈ ರಂಗಾರೆಡ್ಡಿಯ ವೃತ್ತಾಂತ ಮಗನ ಮೇಲೆ ಯಾವುದೇ ಪ್ರಭಾವ ಬೀರದಂತೆ ನೋಡಿಕೊಂಡಿದ್ದಾನೆ. ಈಗ ಮಧ್ಯೆ ಎಬ್ಬಿಸಿರುವ ಗೋಡೆ ಮಕ್ಕಳ ಆಟಕ್ಕೆ ಅಡ್ಡಿಯಾಗುವುದರಿಂದಲೇ ಶ್ರಾವಣ ಇಷ್ಟೆಲ್ಲಾ ರಂಪ ಮಾಡುತ್ತಿರಬಹುದೆಂದು ಒಮ್ಮೊಮ್ಮೆ ಭಾಸ್ಕರರಾಯರಿಗೆ ಅನ್ನಿಸುವುದುಂಟು.

ಈ ನಡುವೆ, ಈಚೆಗೆ ನಡೆದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ರಂಗಾರೆಡ್ಡಿ ಮಾತುಕತೆಗಾಗಿ ಬಂದ. ಹೇಗಿದ್ದರೂ ಮನೆ ಮಾರುವ ಯೋಚನೆಯಲ್ಲಿದ್ದೀರಿ - ಮಾರುವವರೇ ಆದರೆ, ಸುಮ್ಮನೆ ಯಾಕೆ ಈ ಕೋರ್ಟು ಕಛೇರಿಗಳ ಧಂಧೆಗೆ ಹೋಗುತ್ತೀರಿ ಎಂಬುದು ಒಂದು ಸ್ಥರದ ವಾದವಾದರೆ - ಮತ್ತೊಂದು ಸ್ಥರದಲ್ಲಿ, ಮನೆ ಮಾರುವುದೆಂದು ನಿಶ್ಚಯಿಸಿದ್ದರೆ, ದಯವಿಟ್ಟು ಮುಸಲ್ಮಾನರಿಗೆ ಮಾರಬೇಡಿ ಎಂಬ ಕೋರಿಕೆ ಬೇರೆ. ತನ್ನವರಿಗೇ ಯಾರಿಗಾದರೂ ಮಾರಬಹುದಲ್ಲಾ ಎನ್ನುವ ಸಲಹೆಯನ್ನೂ ರಂಗಾರೆಡ್ಡಿ ಅಟ್ಟಿದ. ಬೇಕಿದ್ದರೆ, ನಿಜಾಮಾಬಾದ್ ಕಡೆಯ ಯಾವುದಾದರೂ ರೆಡ್ಡಿಯನ್ನು ಕರೆತಂದು ಒಳ್ಳೆಯ ಬೆಲೆ ಕೊಡಿಸುವುದಾಗಿಯೂ ಹೇಳಿದ. ಮತಕ್ಷೋಭೆಯಿಂದ ಪೀಡಿತವಾದ ಈ ಅಕಬರಬಾಗಿನ ಮನೆಗೆ ಮುಸಲ್ಮಾನರು ಬಂದರೆ ಸಾಮಾನ್ಯರು ಹೆದರಬೇಕಾದ್ದು ಸಹಜವೆನ್ನಿಸಿದರೂ ಪೋಲೀಸು ನೌಕರಿಯಲ್ಲಿರುವ ರಂಗಾರೆಡ್ಡಿ ಹೆದರುವುದು ಏಕೆಂದು ಭಾಸ್ಕರರಾಯರಿಗೆ ಅರ್ಥವಾಗಲಿಲ್ಲ. ಅಥವಾ ಆಯಿತೋ?

ರಂಗಾರೆಡ್ಡಿ ತಾನೀಗಾಗಲೇ ಎಬ್ಬಿಸಿರು ಗೋಡೆಯನ್ನು ಉಳಿಸಿಕೊಳ್ಳಲೂ ಇದೇ ವಾದವನ್ನು ಬಳಸಿದ. "ಮೊನ್ನೆ ನೋಡಿ ಏನಾಯಿತೆಂದು ನಿಮಗೆ ಗೊತ್ತೇ ಇದೆ. ಈ ಮುಸಲ್ಮಾನರೆಲ್ಲಾ ಬಂದು ನಮ್ಮನ್ನು ಮುಗಿಸಿಬಿಡುವುದರಲ್ಲಿದ್ದರು. ಈಗ ನಾವು ಹಿಂದೂಗಳೆಲ್ಲಾ ಸೇರಿ, ಹೆದರಿ ಮನೆ ಮಾರಿಕೊಂಡು ಹೋಗುವುದು ಸರಿಯಾದ ಮಾತಲ್ಲ. ಹಾಗೆಂದು ನಾವು ನಮ್ಮಲ್ಲೇ ಕಾದಾಡುತ್ತಾ ಇಲ್ಲಿ ಮುಂದುವರೆಯುವುದೂ ಸರಿಯಲ್ಲ. ನಾನೀಗ ಕಟ್ಟಿಸಿರುವ ಔಟ್‍ಹೌಸಿನಲ್ಲಿ ಕಟ್ಟುಮಸ್ತಾದ ಹಿಂದೂ ಕಿರಾಯಿದಾರರನ್ನೇ ಇಟ್ಟುಕೊಳ್ಳುತ್ತೇನೆ. ಅವರುಗಳು ಧೈರ್ಯಸ್ಥರು... ಏನಾದರೂ ಅಪಾಯವಾದಲ್ಲಿ ಪ್ರಾಣ ಕೊಡುವುದಕ್ಕೂ ತೆಗೆಯುವುದಕ್ಕೂ ಹೇಸುವವರಲ್ಲ..."

ಹೀಗೆ ಗೂಂಡಾಗಳ ಮರೆಯಲ್ಲಿ ಅಡಗುವ, ಕೇರಿಯನ್ನೇ ರಣಭೂಮಿ ಮಾಡಹೊರಟ ಪೋಲೀಸು ರಂಗಾರೆಡ್ಡಿಗೆ ಸೊಪ್ಪು ಹಾಕದ ಶ್ರಾವಣನನ್ನು ಕಂಡು ಹೆಮ್ಮೆಯಾದಂತೆನ್ನಿಸಿದರೂ, ಭಾಸ್ಕರರಾಯರ ಚಿಂತೆಯೇನೂ ಕಡಿಮೆಯಾಗಲಿಲ್ಲ. ಒಂದು ಕ್ಷಣ ಈ ಮಾತುಗಳು ರಂಗಾರೆಡ್ಡಿ ಕೊಡುತ್ತಿರುವ ಆಮಿಷವೋ ಬೆದರಿಕೆಯೋ ಅದೂ ತಿಳಿಯಲಿಲ್ಲ. ಕಡೆಗೆ ಮುದುಕನೆಂದು ತಮ್ಮನ್ನು ಬಿಟ್ಟ ಆ ಮುಸಲ್ಮಾನರ ಗುಂಪು ಸಂಭಾವಿತರೋ, ಸಾಮಾನ್ಯ ಜನರೋ, ರೌಡಿಗಳೋ, ಅಥವಾ ಮಫ್ತಿಯಲ್ಲಿದ್ದ ಪೋಲೀಸರ ಗುಂಪೋ ಎಂದೂ ಅನುಮಾನ ಬಂತು. ಏನೇ ಆದರೂ ಭಾಸ್ಕರರಾಯರ ಕನಸಿನ ರಾಜ್ಯದಲ್ಲಂತೂ ಪೋಲೀಸರವನು ಈ ರೀತಿಯ ವಿಚಾರಗಳನ್ನು ವ್ಯಕ್ತಪಡಿಸುವುದಿಲ್ಲ. ರಂಗಾರೆಡ್ಡಿ ತನ್ನ ಜೆಲ್ಲೆಯಾದ ನಿಜಾಮಾಬಾದಿಗೇ ವಾಪಸ್ಸಾಗಬಾರದೇಕೆ ಎಂದೂ ಒಂದು ಕ್ಷಣ ರಾಯರಿಗೆ ಅನ್ನಿಸಿತು. ಅದರ ಜತೆಗೇ ನಕ್ಸಲೀಯರ ಕೋಪಕ್ಕೆ ಕಾರಣವಿಲ್ಲದಿಲ್ಲ ಎಂದೂ ಅನ್ನಿಸಿತು.

ಈ ಎಲ್ಲ ಗಲಭೆಯನಂತರ ಶ್ರಾವಣ ಈ ಮನೆಯನ್ನು ಬೇರಾರಿಗಾದರೂ ಬಾಡಿಗೆಗೆ ಕೊಟ್ಟು, ಅಶೋಕನಗರಕ್ಕೆ ಹೋಗಬೇಕೆಂದು ಶ್ರಾವಣನ ಮನಸ್ಸು ಆಲೋಚಿಸುತ್ತದೆ ಎಂಬುದೂ ರಾಯರ ಪ್ರಜ್ಞೆಗೆ ಬಂತು. ಆದರೂ ಈ ಎಲ್ಲ ಗೊಂದಲಕ್ಕೂ ರಾಯರ ಬಳಿ ಸರಳವಾದ ಉಪಾಯವಿತ್ತು - ಅದೆಂದರೆ ಎಲ್ಲರೂ ಮೈಸೂರಿಗೆ ಹೊರಟುನಿಲ್ಲುವುದು. ಆದರೆ ಅವರು ಏನನ್ನೂ ಹೇಳಲಾರರು. ತಾವಾದರೂ ಈ ಚಿತ್ರಹಿಂಸೆಯಿಂದ ಪಾರಾಗಬೇಕೆಂದು ಪ್ರತಿದಿನ ಸೂಟ್‍ಕೇಸ್ ಕಟ್ಟಿದರೂ ಅದು ಕನಸಾಗಿಯೇ ಉಳಿದು, ಭಾಸ್ಕರರಾಯರು ಭ್ರಮೆಯಲ್ಲೇ ಕಾಲಹಾಕಬೇಕಾಯಿತು.

******

ಪರಿಸ್ಥಿತಿ ಸ್ವಲ್ಪ ಶಾಂತವಾಗುತ್ತಿದೆ ಎನ್ನವಾಗಲೇ, ಸರಕಾರದಿಂದ ಬಂದ ಹಳೇ ನಗರದ ಪ್ರಾಂತದ ಆಸ್ತಿ ಪಾಸ್ತಿ ಸಂಬಂಧಿತ ಯಾವುದೇ ವ್ಯವಹಾರವನ್ನು ರಿಜಿಸ್ತ್ರಿ ಮಾಡಬಾರದೆಂಬ ಸರಕಾರೀ ಸುಗ್ರೀವಾಜ್ಞೆ ಶ್ರಾವಣನನ್ನು ಕಲಕಿಬಿಟ್ಟಿತು. ಈ ನಡುವೆ ಕೋಮುಗಲಭೆ ನಡೆಯುವುದಕ್ಕೆ ಮುನ್ನವೇ ಬಂದು - ಒಂದೇ ಧರ್ಮಕ್ಕೆ ಸೇರಿದ ತಾನು, ರಂಗಾರೆಡ್ಡಿ ಶಾಂತಿಯಿಂದ ಸಹಬಾಳ್ವೆ ನಡೆಸಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದ್ದ ಸಮೀರ್ ಕುಮಾರನ ಮಾತುಗಳಿಗೆ ಈ ಹಿನ್ನೋಟದಿಂದ ವಿಶೇಷ ಮಹತ್ವ ಬಂದಂತಾಗಿ, ಅದರ ಆಯಾಮಗಳನ್ನು ಊಹಿಸಿಕೊಳ್ಳಲಾಗದೇ ಶ್ರಾವಣ ನಡುಗಿದ.

ಷಫಾಕ್ ಸಾಬರಂತೂ ತನಗೆ ಸಹಾಯ ಮಾಡಲೋ ಎಂಬಂತೆ, ಈ ಮನೆ ಸದ್ಯಕ್ಕೆ ಮಾರಾಟವಾಗುವುದಿಲ್ಲವಾದ್ದರಿಂದ, ತಾನು ಸೇತುವೆ ದಾಟಿ ಅಶೊಕನಗರದಲ್ಲಿ ಮನೆ ಬಾಡಿಗೆಗೆ ಹಿಡಿಯುವುದಾದರೆ, ಅವರು ಈ ಮನೆಗೆ ಯಾವುದಾದರೂ ಮುಸ್ಲಿಂ ಬಾಡಿಗೆದಾರರನ್ನು ಹಿಡಿದುಕೊಡುವುದಾಗಿ ಹೇಳಿದರು. ತಮಗೆ ಗೊತ್ತಿರುವ ನಂಬುಗಸ್ಥ ಮುಸ್ಲಿಂ ಒಬ್ಬನಿದ್ದಾನೆಂದು ಷಫೀಕ್ ಹೇಳಿದಾಗ ಗಲಭೆಯ ಸಮಯದಲ್ಲಿ ಹಬ್ಬಿದ್ದ ವದಂತಿಗಳಲ್ಲಿ ಸಿಲುಕಿಬಿಟ್ಟಿದ್ದ ಅವರ ಹೆಸರು ಮತ್ತೆ ಮರುಕಳಿಸಿದಂತಾಗಿ, ಶ್ರಾವಣ ಅವರನ್ನು ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿ - ನಂಬಿದ್ದೇ ಆದರೆ ಅವರ ಋಣ ಹೇಗೆ ತೀರಿಸುವುದೆಂಬ ಗೋಜಲಿನಲ್ಲಿ ಯಾವೊಂದು ನಿರ್ಧಾರವೂ ಮಾಡಲು ಕೈಲಾಗದವನಾಗಿ, ಇದ್ದಂತಿದ್ದುಬಿಡುವುದೆಂದು ಸುಮ್ಮನಾದ. ಜೊತೆಗೇ ನುಣ್ಣಗಿದ್ದ ದೂರದ ತಿರುಮಲಗಿರಿಯ ಕನಸು ಕಾಣುತ್ತಾ - ಬಂದದ್ದೆಲ್ಲಾ ಬರಲೆಂಬ ವಿಧಿವಿಲಾಸವಾದಿಯಾಗಿ ಕೂತುಬಿಟ್ಟ.

******

ಪಕ್ಕದ ಮನೆಯ ಷಫೀಕ್ ಸಾಬರು ಬಂದಾಗ ಭಾಸ್ಕರರಾಯರು ಹೆದರಲಿಲ್ಲ. ಎಂದೂ ಇಲ್ಲದವನು ಇಂದು ಮಾತ್ರ ಬಂದು ರಾಯರನ್ನು ಮೃದುವಾಗಿ ಮಾತನಾಡಿಸಿದಾಗ ಸ್ವಲ್ಪ ಸಂತೋಷವೇ ಆಯಿತು. ಷಫೀಕರು ಅನೇಕ ಸಂದರ್ಭಗಳಲ್ಲಿ ತನಗೆ ಸಹಾಯ ಮಾಡಿದ್ದಾನೆಂದು ಹಿಂದೆ ಶ್ರಾವಣ ಹೇಳಿದ್ದ ಮಾತನ್ನು ನಂಬಬೇಕು ಎಂದು ರಾಯರಿಗೇಕೋ ಅನ್ನಿಸಿತು.

ಅಂದು ಬಂದಿದ್ದ ಗುಂಪಿನಲ್ಲಿ ಷಫೀಕ್ ಸಾಬರು ಇದ್ದೇ ಇದ್ದರೆಂಬ ಹಾಗೂ "ಬುಡ್ಡಾ ಉನೇ ಕ್ಯಾಕರ್ತೇ ಛೋಡೋ ಮಿಯಾ" ಎಂದು ಹೇಳಿ ತಮ್ಮನ್ನು ರಕ್ಷಿಸಲೆಂದೇ ಬಂದಿದ್ದರು ಎಂಬ ಆಲೋಚನೆ ಗಟ್ಟಿರೂಪ ಪಡೆಯುತ್ತಾ ಹೋಯಿತು. ಇದ್ದಕ್ಕಿದ್ದ ಹಾಗೆ ಹೀಗೆ ಷಫೀಕ ಸಾಬರ ಮೇಲೆ ಹುಟ್ಟಿದ ಅಕಾರಣ ನಂಬಿಕೆ, ಹಾಗೂ ಪ್ರೀತಿ ಪಡೆದ ರೂಪವೇ ಬೇರಾಯಿತು. ಈ ಮನೆ ಬಿಟ್ಟರೆ, ಮೈಸೂರಿಗೆ ಮಾತ್ರ ಹೋಗಬೇಕು, ಇನ್ನೆಲ್ಲಿಗೂ ಅಲ್ಲವೆಂಬ ಭಾವನೆಯನ್ನು ತಮ್ಮೊಳಗೇ ಇರಿಸಿಕೊಂಡು ರಾಯರು ತಮ್ಮ ಮೌನ ಮುಂದುವರೆಸಿದರು.

ಶ್ರಾವಣ ಎಂದಾದರೊಂದು ದಿನ ಮೈಸೂರಿನ ಮಹತ್ವ ಅರಿಯಲಾರನೇ ಮತ್ತು ಅದಕ್ಕೂ ಮೊದಲು ತಮ್ಮನ್ನು ಕಳುಹಿಸಿಕೊಡಲಾರನೇ ಎಂಬ ದೂರದ ಭ್ರಮೆ ರಾಯರನ್ನು ಕಾಡದೇ ಇರಲಿಲ್ಲ. ಹೀಗಾಗಿ ಆ ಭ್ರಮೆ ವರ್ತಮಾನಕ್ಕೂ ಆವರಿಸಿ, ಎಂದಿನ ಅಭ್ಯಾಸದಂತೆ ಇಂದೂ ಬಟ್ಟೆ ಮಡಚಿ ಪೆಟ್ಟಿಗೆಯಲ್ಲಿಟ್ಟು ಸೂಟ್‍ಕೇಸ್ ಮುಚ್ಚಿದರು.

ಇದೇ ಮೊದಲಬಾರಿಗೆ ಈ ಪ್ಯಾಕಿಂಗ್ ಕ್ರಿಯೆಯನ್ನು ಕಂಡ ಶ್ರಾವಣ ತಾವೀಗ ಎಲ್ಲೂ ಹೋಗುವುದಿಲ್ಲವೆಂದೂ, ಇಲ್ಲೇ ಇರುವ ನಿರ್ಧಾರ ಮಾಡಿರುವುದಾಗಿಯೂ ತಿಳಿಸಿದ. ಷಫೀಕ್ ಸಾಬರು ಅಕಬರಬಾಗಿಗೊಂದು ಶಾಂತಿ ಸಮಿತಿ ಏರ್ಪಾಡು ಮಾಡುವ ಸನ್ನಹದಲ್ಲಿದ್ದಾರೆಂದೂ ಭಾಸ್ಕರರಾಯರಿಗೆ ಕೇಳಿಬಂತು.

ಹೀಗೆ ಶ್ರಾವಣ ಬಂದು ತಮ್ಮೊಂದಿಗೆ ಮಾತನಾಡಿದಾಗ, ಭಾಸ್ಕರರಾಯರು ಬಾಯಿಂದ ಏನೂ ಹೊರಡಿಸದೇ ನಕ್ಕು ಬಿಟ್ಟರು. ಕಳೆದ ಹದಿನೈದು ದಿನಗಳಿಂದ ಅವರು ಒಂದಕ್ಷರವನ್ನೂ ಮಾತನಾಡಿರಲಿಲ್ಲವೆಂಬುದನ್ನು ಯಾರೂ ಗಮನಿಸಿಯೇ ಇರಲಿಲ್ಲ. ಭಾಸ್ಕರರಾಯರು ಮಲಗಬೇಕೆನ್ನುವಾಗಲೇ ರಂಗಾರೆಡ್ಡಿಯ ಮನೆಯ ಸೂರಿಗೆ ಸುರಕಿ ಹಾಕುವ ತಯಾರಿಯಲ್ಲಿ ಧಮ್ಮಸ್ಸು ಮಾಡುವ ಲಯಬದ್ಧ ಶಬ್ದ ಕೇಳಿಸಿತು. ಆ ಶಬ್ದದೊಂದಿಗೇ ಗೇಟು ಬಡಿದ, ಕೈಯಲ್ಲಿ ಕತ್ತಿ ಹಿಡಿದ ಷಫೀಕನ ಚಿತ್ರ. ರಾಯರ ಹೃದಯಬಡಿತ ಜೋರಾಗಿ ಅದೂ ಅವರ ಕಿವಿಯನ್ನು ಲಯಬದ್ಧವಾಗಿ ಅಪ್ಪಳಿಸಿತು. ಸೂರು ನೋಡುತ್ತಾ ಕಣ್ತೆರೆದೇ ಮಲಗಿದ್ದ ರಾಯರಿಗೆ ತಮ್ಮ ಅಸ್ತಿತ್ವವೇ ಕನಸೋ ನನಸೋ ತಿಳಿಯಂದಂತಾಗಿ ----

ಭಾಸ್ಕರರಾಯರು ಚಿಂತಿತರಾದರು.
ಅದೇನೂ ಹೊಸ ವಿಷಯವಾಗಿರಲಿಲ್ಲ. ಮೈಸೂರು ಬೆಂಗಳೂರುಗಳ ನಡುವೆ ಎಡತಾಕುವಾಗಲೂ, ಹಾಗೂ ಈಗಲೂ ಮಕ್ಕಳ ನಡುವೆ ಹಂಚಿಹೋದ ಭಾಸ್ಕರರಾಯರು ಈಗೀಗ ಎಲ್ಲಕ್ಕೂ ಮೂಕ ಪ್ರೇಕ್ಷಕರು. ಸದಾನಿರಂತರ ಚಿಂತಿತರು. ಎಪ್ಪತ್ತೈದರ ವಯಸ್ಸು ಸಾಮಾನ್ಯದ್ದೇನೂ ಅಲ್ಲ. ಅದು ಚಿಂತಿಸುವ ಚಿಂತೆಯುಂಟುಮಾಡುವ ವಯಸ್ಸು............


ಜೂನ್ ೧೯೯೧




No comments:

Post a Comment