ಬೆಳಿಗ್ಗೆ ಎಂಟು ಘಂಟೆಗೆ ಸರಕಾರಿ ಪ್ರಾಥಮಿಕ ಶಾಲೆಯ ಬಾಗಿಲು ತೆರೆಯಲು ಬಂದ ರೆಡ್ಡಪ್ಪ ಮಾಸ್ತರಿಗೆ ಆಶ್ಚರ್ಯವಾಗಲಿತ್ತು. ಅಷ್ಟು ಹೊತ್ತಿನಲ್ಲಿ, ಅದೂ ಈ ಛಳಿಗಾಲದಲ್ಲಿ ಆಗಂತುಕನೊಬ್ಬ ಬಂದು ನಮಸ್ಕಾರ ಮಾಡಿದ್ದು - ಅವರ ಜೀವನದಲ್ಲಿ ಮೊದಲಬಾರಿ ಇದ್ದಿರಬೇಕು. ಹೌದು... ಇಲ್ಲವಾದರೆ ಈ ಹಳ್ಳಿಯವರನ್ನು ಬಿಟ್ಟು ಯಾರು ತಾನೇ ಪ್ರಾಥಮಿಕ ಶಾಲೆಯ ಮಾಸ್ತರಿಗೆ ನಮಸ್ಕಾರ ಮಾಡುತ್ತಾರೆ?
ರೆಡ್ಡಪ್ಪ ಮಾಸ್ತರು - ಎದುರಿಗೆ ನಿಂತಿದ್ದ ವ್ಯಕ್ತಿಯನ್ನು ತಲೆಯಿಂದ ಕಾಲಿನವರೆಗೆ ದಿಟ್ಟಿಸಿದರು. ಮೊಣಕಾಲಿಗೂ ಮೇಲೆ ಹೋಗಿದ್ದ - ಹಳದಿ ಕಂದು ಬಣ್ಣಕ್ಕೆ ತಿರುಗುತ್ತಿದ್ದ ಹರಕಲು ಪಂಚೆ. ಒಡೆದ ಪಾದ, ಕೊಳಕು ಉಗುರುಗಳು, ಕಾಲೀಡೀ ದುರ್ಮಾಂಸದ ಸಣ್ಣ ಸಣ್ಣ ಗಡ್ಡೆಗಳು - ಎದೆಯ ಮೇಲೆ ಖಾಕಿ ಅಂಗಿ, ಭುಜದ ಮೇಲೆ ಆಗಷ್ಟೇ ಮೈಕೈ ಮುಖ ಒರೆಸಿ ಹಸಿಯಾಗಿದ್ದ ನಸುಗೆಂಪು ವಸ್ತ್ರ... ನೀಟಾಗಿ ದಾಡಿ, ಮೀಸೆ ಹೆರೆದುಕೊಂಡಿದ್ದ ಕಪ್ಪನೆ ಮುಖ - ಮತ್ತು ಹಿಂದಕ್ಕೆ ಬಾಚಿದ್ದ ಉದ್ದನೆಯ ಕೂದಲು. ನೋಡಿದರೆ, ರಾತ್ರೆಯೆಲ್ಲಾ ನಾಟಕ ಮಾಡಿ, ಆಗಷ್ಟೇ ಮೇಕಪ್ ತೆಗೆದು ಬಂದಂತಿತ್ತು. ಏನೋ... ಏಕೋ - ಆ ಮುಖದಲ್ಲಿ ರೆಡ್ಡಪ್ಪ ಮಾಸ್ತರಿಗೆ ಒಂದು ಥರದ ದೈವತ್ವ ಕಂಡಿತು. ನೀಟಾಗಿ ವೀಭೂತಿ - ಅಥವಾ ಕುಂಕುಮ ಇಟ್ಟವರೆಂದರೆ - ಮಾಸ್ತರಿಗೆ ಯಾವಾಗಲೂ ಏನೋ ಅರಿಯದ ಭಕ್ತಿ, ಗೌರವ.
ಬಂದ ವ್ಯಕ್ತಿ ರೆಡ್ಡಪ್ಪ ಮಾಸ್ತರಿಗೆ ನಮಸ್ಕಾರ ಮಾಡಿ ಕಣ್ಣಂಚಿನಲ್ಲಿ ನೀರು ತರಿಸಿಕೊಂಡ. ಶಾಲೆ ಪ್ರಾರಂಭವಾಗಲು ಇನ್ನೂ ಹದಿನೈದಿಪ್ಪತ್ತು ನಿಮಿಷ ಸಮಯವಿತ್ತು. ಏಕ ಶಿಕ್ಷಕ ಶಾಲೆಯಾದ ಆ ಸರಕಾರಿ ಝೋಪಡಿಯಲ್ಲಿ, ರೆಡ್ಡಪ್ಪ ಮಾಸ್ತರು ಪ್ರಿನ್ಸಿಪಾಲನಿಂದ ಹಿಡಿದು ಚಪ್ರಾಸಿಯವರೆಗೂ ಎಲ್ಲ ಕೆಲಸಗಳನ್ನೂ ತಾವೇ ಮಾಡಬೇಕು. ರೆಡ್ಡಪ್ಪ ಮಾಸ್ತರಿಗೆ ಮುಖ್ಯವಾಗಿ ಅಲ್ಲಿನ ಶುಭ್ರತೆಯ ಬಗ್ಗೆ ಕಾಳಜಿಯಿತ್ತಾದ್ದರಿಂದ - ಒಂದರ್ಧ ಘಂಟೆ ಮೊದಲೇ ಬಂದು - ಒಂದಿಷ್ಟು ಹುಡುಗರನ್ನು ಕಲೆ ಹಾಕಿ, ಶಾಲೆಯ ಸುತ್ತಲ ಜಾಗವನ್ನು ಸ್ವಛ್ಛಮಾಡಿಸಿ, ನೀರು ಚಿಮುಕಿಸಿ, ರಂಗೋಲೆ ಇಡಿಸುತ್ತಿದ್ದರು. ಸಮಯಕ್ಕೆ ತಕ್ಕಂತೆ ಪ್ರಾರ್ಥನೆ ಮಾಡಿಸಿ ಶಾಲೆಯನ್ನು ಆರಂಭಿಸುತ್ತಿದ್ದರು.
ಶಾಲೆಯ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿದರೆ ಸಾಕು - ರೆಡ್ಡಪ್ಪ ಮಾಸ್ತರ ಕಾಳಜಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಾಲೆಯ ಮುಂದಿನ ಧ್ವಜಸ್ಥಂಬ ಹೊಸ ಬಣ್ಣ ಹೊತ್ತು ಲಕಲಕಿಸುತ್ತಿತ್ತು. ಗೋಡೆಯ ಮೇಲೆ ಹಳ್ಳಿಯ ಚಿತ್ರಕಾರನಿಂದ ಗಾಂಧಿ, ನೆಹರೂ, ಪಟೇಲ್, ಬೋಸರ ಚಿತ್ರಗಳನ್ನು ಬರೆಸಿ - ಸಾಲಾಗಿ ಒಂದರ ಪಕ್ಕದಲ್ಲೊಂದು ಎಂಬಂತೆ - ಸೂಕ್ತಿಗಳನ್ನು ಪೇಂಟ್ ಮಾಡಿಸಿದ್ದರು. ಶಾಲೆಯ ಬಗ್ಗೆ ಒಂದು ರೀತಿಯ ಖಾತ್ರಿಯಿದ್ದದ್ದರಿಂದಲೇ - ಹಳ್ಳಿಗೆ ಯಾರಾದರೂ - ಹೊರಗಿನ ಅಧಿಕಾರಿಗಳು ಬಂದರೆ - ಅವರಿಗೆ ತಂಗಲು ಶಾಲೆಯ ಆವರಣವನ್ನೇ ಬಿಟ್ಟುಕೊಡಬೇಕೆಂದು ಪಂಚಾಯ್ತಿ, ಸಹಕಾರ ಸಂಘಗಳವರು ಆದೇಶ ನೀಡುತ್ತಿದ್ದರು. ಪಕ್ಕದಲ್ಲೇ ಇದ್ದ ಸಾರ್ವಜನಿಕ ಹ್ಯಾಂಡ್ ಪಂಪನ್ನೂ ಶುಭ್ರವಾಗಿ ಇರಿಸುವುದರಲ್ಲಿ ರೆಡ್ಡಪ್ಪ ಮಾಸ್ತರ ಪಾತ್ರ ಹಿರಿದಾಗಿತ್ತು.
ಹೀಗೆ ಆವರಣವನ್ನು ಶುಭ್ರವಾಗಿರಿಸಲೆಂದೇ ಅರ್ಧಘಂಟೆ ಮೊದಲೇ ಶಾಲೆಗೆ ಹಾಜರಾಗುತ್ತಿದ್ದ ರೆಡ್ಡಪ್ಪ ಮಾಸ್ತರಿಗೆ, ತಾವು ಬರುವ ವೇಳೆಗಾಗಲೇ ಶಾಲೆಯ ಸ್ನಾನ ಸಂಧ್ಯಾವಂದನಾದಿಗಳು ಆಗಿಬಿಟ್ಟಿರುವುದು ಕಂಡು ಆಶ್ಚರ್ಯವಾಯಿತು. ಅವರು ಏನೂ ತಿಳಿಯದವರಾಗಿ - ಹೊಸ ಅತಿಥಿಯತ್ತ ನೋಡಿದರು:
"ನಾನು ಮೋಹನ ಪ್ರಭುದಾಸ ಅಂತ - ಬಹಳ ದೂರದ ಹಳ್ಳಿಯಿಂದ ಬಂದವನು. ದೂರದ ಹಳ್ಳಿಯೆಂದಾಕ್ಷಣಕ್ಕೆ - ನಾನು ಆ ಹಳ್ಳಿಯವನೆಂದು ನೀವು ತಪ್ಪು ತಿಳಿಯಬಾರದು. ಏಕೆಂದರೆ - ಸಾಧುಸಂತರಿಗೆ, ಭಕ್ತರಿಗೆ, ದೇವರಿರುವ ಸ್ಥಳವೇ ಮನೆ. ಈಗಿತ್ತಲಾಗಿ, ಕೆಲದಿನಗಳ ಹಿಂದೆ ದೇವಸ್ಥಾನವೊಂದರ ಜೀರ್ಣೋದ್ಧಾರ ಮಾಡಬೇಕೆಂದು ನನ್ನ ಕನಸಿನಲ್ಲಿ ಪ್ರಭುವಿನ ಆಜ್ಞೆಯಾಗಿದೆ. ಹೀಗಾಗಿ ಪ್ರಭುವು ತೋರಿದ ದಾರಿಯಲ್ಲಿ ಹೊರಟುಬಂದು - ನಿನ್ನೆ ಸಂಜೆ ಈ ಊರು ತಲುಪಿದೆ. ಬಂದ ಕೂಡಲೇ ಇತ್ತ - ಶಾಲೆಯತ್ತ ಬರಲು ಪ್ರಭುವಿನ ಆದೇಶವಾಯಿತು. ಇಲ್ಲಿ ಬಂದು ನೋಡಿದರೆ - ಜೀರ್ಣವಾಗಿರುವ ಶಿವಾಲಯವು ಕಂಡಿತು. ಹೀಗಾಗಿ ನಾನು - ಇದೇ ಪ್ರಶಸ್ಥ ಸ್ಥಳವೆಂದು ರಾತ್ರೆ ಇಲ್ಲೇ ಜಗಲಿಯ ಮೇಲೆ ತಂಗಿದೆ. ಮುಂಜಾನೆ ಎದ್ದು - ಹ್ಯಾಂಡ್ ಪಂಪಿನಲ್ಲಿ ಮಿಂದು, ಸ್ಥಳ ಶುಭ್ರಮಾಡಿದೆ. ನಿಮ್ಮ ಅನುಮತಿ ಸಿಗುವುದಾದರೆ ಇಲ್ಲಿಯೇ ತಂಗಿ ಪ್ರಭುವಿನ ಕಾರ್ಯವನ್ನು ಪೂರ್ಣಗೊಳಿಸುವ ಇರಾದೆಯಿದೆ."
ಮೋಹನ ಪ್ರಭುದಾಸ - ಮಾತನಾಡುವ ಭಾಷೆಯಲ್ಲೂ, ರೀತಿಯಲ್ಲೂ ಅಭಿನಯ ತುಂಬಿಸುತ್ತಿದ್ದನಾದ್ದರಿಂದ - ಅವನೆದುರಿಗೆ ನಿಂತು ಈ ಎಲ್ಲವನ್ನೂ ಕೇಳಿದ ರೆಡ್ಡಪ್ಪ ಮಾಸ್ತರರಿಗೆ ಕೂಚಿಪುಡಿ ನೃತ್ಯ ನೋಡಿದಂತಾಯಿತು. ದೇಹದ ಅಂಗಾಂಗಗಳನ್ನೆಲ್ಲ ಅಲ್ಲಾಡಿಸುತ್ತಾ ತಮ್ಮೆದುರು ಪ್ರಭುದಾಸ ಇಟ್ಟ ಈ ವಿಚಿತ್ರ ಕೋರಿಕೆಗೆ ಪ್ರತಿಕ್ರಿಯಿಸುವುದು ಹೇಗೆಂದು ಮಾಸ್ತರರಿಗೆ ತಿಳಿಯಲಿಲ್ಲ. ಕಡೆಗೂ ಏನೋ ಮನಸ್ಸಿಗೆ ಬಂದಂತಾಗಿ ರೆಡ್ಡಪ್ಪ ಮಾಸ್ತರು ಹೇಳಿದರು:
"ಇದು ಸ್ಕೂಲು. ಸರಕಾರಕ್ಕೆ ಸೇರಿದ್ದು. ನಾನೇನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಕ್ಲಾಸುಗಳು ಶುರುವಾಗೋ ಹೊತ್ತು. ಮಧ್ಯಾಹ್ನ - ಸ್ಕೂಲು ಮುಚ್ಚಿದ ಮೇಲೆ ಮಾತಾಡೋಣ. ಜತೆಗೆ ಈ ವಿಷಯಕ್ಕೆ ಸರಪಂಚರ ಅಭಿಪ್ರಾಯ ಕೇಳೋದೂ ಒಳ್ಳೆಯದು."
"ಇದು ದೇವರ ಕಾರ್ಯ. ಇದಕ್ಕಾಗಿ ನಾನು ಯಾರನ್ನು ಕೇಳಲೂ ಹಿಂಜರಿಯುವವನಲ್ಲ. ಹೆದರುವವನೂ ಅಲ್ಲ. ಹಾಗೆಂದು ನಮ್ಮ ಕೆಲಸಕ್ಕೆ ಅಡ್ಡಿಯಾಗಬಹುದಾದ ಯಾರನ್ನೂ ನಾನು ಲೆಕ್ಕಕ್ಕೆ ತೆಗೆದುಕೊಳ್ಳುವವನಲ್ಲ. ನಿಮ್ಮ ಸರಪಂಚರೂ ಅಷ್ಟೇ. ಹೀಗಾಗಿ, ನೀವು ಹೇಳಿದಂತೆ ಮಧ್ಯಾಹ್ನದವರೆಗೂ - ಮಧ್ಯಾಹ್ನವೇನು - ಸಂಜೆಯವರೆಗೂ ನಾನು ಕಾಯಲು ಸಿದ್ಧ." ಪ್ರಭುದಾಸ ತನ್ನ ಮಾತುಗಳನ್ನು ಹೇಳು ಅಲ್ಲಿಂದ ಮುಂದಕ್ಕೆ ಹೋದ.
ತಕ್ಷಣಕ್ಕೆ ರೆಡ್ಡಪ್ಪ ಮಾಸ್ತರಿಗೆ ಏನೂ ತೋಚಲಿಲ್ಲ. ಏನೂ ತಿಳಿಯದವರಾಗಿ ಸುತ್ತಲಿನ ಗೋಡೆ ನೋಡಿದರು - "ಮನುಷ್ಯನ ಉದ್ದೇಶ - ಆಲೋಚನೆಗಳಿಗೆ ತಕ್ಕಂತೆ ಫಲ ಸಿಗುವುದು." ರಾಮಕೃಷ್ಣ ಪರಮಹಂಸರ ಸೂಕ್ತಿ ಕಾಣಿಸಿತು. ಮಾಸ್ತರು ತಮ್ಮಲ್ಲೇ ತಲೆ ಆಡಿಸಿಕೊಂಡರು. ಏನೂ ತೋಚದಿದ್ದಾಗ ರೆಡ್ಡಪ್ಪ ಮಾಸ್ತರು ಮಾರ್ಗದರ್ಶನಕ್ಕಾಗಿ ಗೋಡೆಯ ಮೇಲಿನ ಸೂಕ್ತಿಗಳ ಮೊರೆ ಹೋಗುವರು. ಸಮಯಕ್ಕೆ ಸರಿಯಾಗಿ, ಅವರೇ ಬರೆಸಿದ ಯಾವುದಾದರೂ ಸೂಕ್ತಿ ಕಣ್ಣಿಗೆ ಬೀಳುತ್ತಿತ್ತು.
ಅಂದು ಪ್ರಾರ್ಥನೆಯ ನಂತರ ಕ್ಲಾಸುಗಳನ್ನು ಪ್ರಾರಂಭಿಸಿದರೂ ಯಾಕೋ ಗಮನ ಪ್ರಭುದಾಸನತ್ತೇ ಇತ್ತಾದ್ದರಿಂದ - ಏನು ಮಾಡಲೂ ತೋರದೇ ಮಾಸ್ತರು ಮಕ್ಕಳಿಗೆ ರಜಾ ಘೋಷಿಸಿಬಿಟ್ಟರು. ಎಷ್ಟೇ ಪ್ರಯತ್ನಪಟ್ಟು ಬೇರೆ ಯೋಚನೆ ಮಾಡುಲು ಪ್ರಯತ್ನಪಟ್ಟರೂ ಪ್ರಭುದಾಸ, ಮತ್ತು ಜೀರ್ಣ ಶಿವಾಲಯ ರೆಡ್ಡಪ್ಪ ಮಾಸ್ತರ ಮನಸ್ಸನ್ನು ಕ್ರಮಕ್ರಮೇಣ ಆಕ್ರಮಿಸಿಕೊಳ್ಳತೊಡಗಿತ್ತು.
ರೆಡ್ಡಪ್ಪ ಮಾಸ್ತರು ಸರಪಂಚರನ್ನು ಕಾಣಲು ಹೊರಡುವುದಕ್ಕೆ ಮೊದಲು ಮತ್ತೊಮ್ಮೆ ಪ್ರಭುದಾಸನನ್ನು ಕಂಡರು:
"ಮನುಷ್ಯ ಜನ್ಮ ಬರುವುದು ಒಂದ ಲಕ್ಷ ಎಂಭತ್ತನಾಲ್ಕುಸಾವಿರ ಜನ್ಮಗಳಲ್ಲಿ ಒಂದು ಬಾರಿ, ಹಾಗೂ ಮನುಷ್ಯನಿಗೆ ಒಳ್ಳೆಯ ಕ್ರಿಯಾಕರ್ಮಗಳನ್ನು ಮಾಡುವ ಅವಕಾಶ ಸಿಗುವುದು ಈ ಒಂದು ಜನ್ಮದಲ್ಲಿ ಮಾತ್ರ. ಓದಿ-ಬರೆದು ಮಾಡಿರುವ, ಪಾಠ ಕಲಿಸುವ ಶಾಲಾ ಮಾಸ್ತರಿಗೆ ನಾನು ಇದನ್ನು ಹೇಳುವ ಅವಶ್ಯಕತೆಯಿಲ್ಲ. ಈಗ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಪ್ರಭುವಿನಿಂದ ಅಪ್ಪಣೆ ಬಂದಿರುವುದು. ಹೀಗಾಗಿ ನಾನು ಇಲ್ಲಿಗೆ ಬಂದಿರುವೆ. ಹಾಗೂ ಜೀರ್ಣೋದ್ಧಾರದ ಕೆಲಸ ಮುಗಿಯುವವರೆಗೂ ಇಲ್ಲಿಯೇ ಇರುವವನು ಎಂದು ಈಗಲೇ ಹೇಳಿಬಿಡುವೆ. ನಿಮ್ಮ ಹಳ್ಳಿಯ ಚಿಲ್ಲರೆ ಜನರು ನನ್ನ ಪೂರ್ವೋತ್ತರಗಳನ್ನು ಕೇಳುವರೆಂದು ನಾನು ಅರಿತಿರುವೆ. ಹೀಗಾಗಿ ನನ್ನ ಬಗ್ಗೆ ನನಗೆ ತಿಳಿದಿರುವುದನ್ನು ಮೊದಲೇ ನಿಮಗೆ ಹೇಳಲು ಇಷ್ಟಪಡುವವನು ನಾನು. ನನ್ನ ಪೂರ್ತಿ ಹೆಸರು: ಮೋಹನ ಪ್ರಭುದಾಸ ಭಜಂತ್ರಿ ಎಂದು. ನಾನು ಹಜಾಮರ ಜಾತಿಗೆ ಸೇರಿದವನು. ಆದರೆ ಬಹಳ ವರ್ಷಗಳ ಹಿಂದೆಯೇ ನನ್ನ ಅಪ್ಪ ಹಜಾಮತಿ ಬಿಟ್ಟು ಅಡುಗೆ ಕೆಲಸಕ್ಕೆ ಇಳಿದಿದ್ದ. ನಾನೂ ಅದೇ ಕೆಲಸ ಮಾಡುತ್ತಾ, ಊರೂರು ಅಲೆಯುತ್ತಾ, ಚಹಾದಂಗಡಿ ನಡೆಸುತ್ತಾ ಜೀವನ ಮಾಡಿದವನು. ಅದೇ ಸಮಯಕ್ಕೆ ದೇವರ ಬಗ್ಗೆ ಭಕ್ತಿ ಶ್ರದ್ಧೆ ಉಳ್ಳವನಾಗಿ, ಬ್ರಾಹ್ಮಣರ ಸಂಗದಲ್ಲಿದ್ದು ಒಂದಿಷ್ಟು ಶ್ಲೋಕ, ಮಂತ್ರ ಕಲಿತವನು. ಈಗ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆಂದು ಎರಡು ವರುಷ ಸಮಯ ತೆಗೆದಿಟ್ಟಿರುವೆ. ಎರಡು ವರುಷಗಳ ನಂತರ ನೀವು ಇರು ಎಂದು ಕೇಳಿಕೊಂಡರೂ ಇಲ್ಲಿ ಉಳಿಯುವವನಲ್ಲ. ಆ ನಂತರ ಪ್ರಭುವು ಆದೇಶ ಕೊಟ್ಟ ದಿಕ್ಕಿನಲ್ಲಿ ಹೊರಟುಬಿಡುವೆ. ಈಗ ನೀವು ಸರಪಂಚರನ್ನು ಕೇಳುತ್ತೀರೋ, ಸರಕಾರವನ್ನು ಕೇಳುತ್ತೀರೋ ನನಗೆ ತಿಳಿಯದು. ಇಲ್ಲಿ ಉಳಿಯಲು ಅಪ್ಪಣೆ ಕೊಟ್ಚಿರೋ ಸರಿ. ಇಲ್ಲವಾದರೆ ಇಡೀ ಊರಿಗೇ ಶಾಪ ಹಾಕಿ ಹೊರಟುಬಿಡುವೆ. ಅಷ್ಟೇ."
ಈ ಅಸ್ಖಲಿತ ಭಾಷಣ ಕೇಳಿ ಏನು ಮಾಡಬೇಕೋ - ರೆಡ್ಡಪ್ಪ ಮಾಸ್ತರಿಗೆ ತೋಚದಾಯಿತು. ಹಿಂದೆ ನಿರ್ಧಾರ ಮಾಡಿದಂತೆ - ಊರ ಹಿರಿಯರನ್ನೊಮ್ಮೆ ಕೇಳುವುದು ಒಳ್ಳೆಯದೆನ್ನಿಸಿತು. ಸರಪಂಚರ ಬಳಿ ಹೋಗುವುದಕ್ಕೆ ಮುಂಚೆ ಗೋಡೆಯತ್ತ ಮಾಸ್ತರು ನೋಡಿದರು:
"ನೆನಪಿಡು, ಅವಕಾಶಗಳು ಎಂದೆಂದೂ ನಿನ್ನ ಬಾಗಿಲನ್ನು ಎರಡೆರಡು ಬಾರಿ ತಟ್ಟುವುದಿಲ್ಲ." ಎಂಬ ಸೂಕ್ತಿ ಕಾಣಿಸಿತು. ಸರಪಂಚರ ಮನೆಯತ್ತ ನಡೆಯುತ್ತಿದ್ದಂತೆ ಮಿಕ್ಕೆಲ್ಲ ತರ್ಕವೂ ಅದ್ಭುತವಾಗಿ ಆಲೋಚನಾಲಹರಿಗೆ ಸೇರಿಕೊಂಡಿತು.
ಬಹಳ ದಿನಗಳಿಂದಲೂ ಅನಾಥವಾಗಿ ಶಾಲಾ ಆವರಣದಲ್ಲಿದ್ದ ಆ ಶಿವಲಿಂಗಕ್ಕೊಂದು ನೆರಳಿನ ಅವಶ್ಯಕತೆಯಿತ್ತು. ಹಾಗೂ ಈ ಮನುಷ್ಯ ಹೇಳುತ್ತಿದ್ದದ್ದು ಎಷ್ಟಾದರೂ ಒಳ್ಳೆಯ ಕಾರ್ಯದ ಬಗ್ಗೆ - ದೇವರ ಕೆಲಸದ ಬಗ್ಗೆ - ಮೂರು ವರ್ಷಗಳಿಂದ ಬರಪೀಡಿತವಾಗಿರುವ ಈ ಹಳ್ಳಿಗೆ ಇದೊಂದು ಮುಕ್ತಿಮಾರ್ಗವಿದ್ದರೂ ಇರಬಹುದು. ಊರಿಗೆ ಒಳ್ಳೆಯದಾಗುವ ಕೇಲಸ ಮಾಡುತ್ತೇನೆಂದರೆ ಯಾರು ತಾನೇ ಬೇಡವೆನ್ನುವರು? ಮೇಲಾಗಿ, ಸಂಜೆಯ ವೇಳೆಗೆ ಖಾಲಿಯಾಗಿಯೇ ಉಳಿಯುವ ಶಾಲೆಯ ಆವರಣದಲ್ಲೊಬ್ಬ ವ್ಯಕ್ತಿ ಇರುವುದೂ ಒಳ್ಳೆಯದೇ ಎಂದೆಲ್ಲಾ ಯೋಚಿಸುತ್ತಾ ರೆಡ್ಡಪ್ಪ ಮಾಸ್ತರು ಸರಪಂಚರ ಮನೆಯತ್ತ ಹೆಜ್ಜೆ ಹಾಕಿದರು.
ರೆಡ್ಡಪ್ಪ ಮಾಸ್ತರು ಸರಪಂಚರಾದ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯ ಮನೆಗೆ ಬಂದಾಗ - ಸರಪಂಚರು - ಬರಲಿರುವ ಪಂಚಾಯತ್ ಚುನಾವಣೆಯ ಸ್ಟ್ರಾಟಜಿಯ ಬಗ್ಗೆ ಊರಿನ ಶ್ರೀಮಂತರಾದ ಶ್ರೀಪ್ರಕಾಶಚಂದ್ ಶ್ರೀಮಲ್ ಜೊತೆಗೆ ಗುಫ್ತಗೂ ನಡೆಸುತ್ತಿದ್ದರು. ಮೋಹನ ಪ್ರಭುದಾಸ ಭಜಂತ್ರಿಯ ಸಕಲ ಪೂರ್ವೋತ್ತರಗಳನ್ನೂ ಕೇಳಿದ ಸರಪಂಚರು - ಪ್ರಸನ್ನಚಿತ್ತರಾಗಿ "ಹೌದು - ಇದರಿಂದ ಒಂದು ಥರದ ಫಾಯಿದೆಯಿದೆ" ಎಂದು ಯೋಚಿಸಿದರು.
"ಮಾಸ್ತರೇ ಶಾಲೆಯ ಆವರಣದಲ್ಲಿ ಯಾರಿರಬೇಕು, ಇರಬಾರದು ಅಂತ ಹೇಳೋಕ್ಕೆ ನಾನು ಯಾರು? ಈ ಶಾಲೆಯನ್ನ ತುಂಬಾ ವರ್ಷಗಳಿಂದ ನೀವು ನಡೆಸಿಕೊಂಡು ಬರುತ್ತಿದ್ದೀರಿ. ಜನರ ಚುನಾಯಿತ ಪ್ರತಿನಿಧಿಯಾಗಿ, ನಿಮಗೆ ಬೇಕಾದ ಹೆಲ್ಪು ಮಾಡೋದಷ್ಟೇ ನನ್ನ ಕೆಲಸ. ಈಗ ಈ ವಿಷಯದಲ್ಲಿ ನಾನು ಡಿಸೈಡ್ ಮಾಡುವುದು ಏನೂ ಇಲ್ಲ. ನೀವು ಕಲಿತವರು. ತಿಳಿದವರು. ಮಕ್ಕಳಿಗೆ ಬುದ್ಧಿ ಹೇಳುವ ಹಿರಿಯರು. ನಿಮಗೆ ಸರಿ ಅನಿಸಿದ್ದನ್ನು ಮಾಡಿ."
"ನಿಜ ದೊರೆ. ಈ ಪ್ರಭುದಾಸ ಅಡುಗೆ ಇತ್ಯದಿ ಮಾಡುವುದನ್ನು ಕಲಿತಿದ್ದಾನೆಂದು ಹೇಳಿದ. ನಿಮಗೆ ಗೊತ್ತಿರೋ ಹಾಗೆ ಊರಲ್ಲಿ ಯಾರೆ ಅಧಿಕಾರಿಗಳು ಉಳಿದುಕೊಳ್ಳಬೇಕಾದರೂ - ಸ್ಕೂಲಿಗೇ ಬರುತ್ತಾರೆ. ಹೀಗಾಗಿ - ಇಂಥ ಏರ್ಪಾಟಿನಿಂದ ಉಪಯೋಗವೇ ಹೆಚ್ಚೂಂತ ಅನ್ನಿಸುತ್ತದೆ. ಪ್ರಭುದಾಸನಿಗೆ ಆಶ್ರಯ ಕೊಟ್ಟರೆ ಸ್ಕೂಲಿಗೂ ಒಂದು ದಿಕ್ಕೂಂತ ಆಗುತ್ತೆ. ಜತೆಗೆ ದೇವರ ಕೆಲಸಕ್ಕೆ ಅಡ್ಡಯಾಗೋದಕ್ಕೆ ನಾವ್ಯಾರು? ಏನಂತೀರಿ?"
"ಸರಿ ಮಾಸ್ತರೇ.... ಹಾಗಾದರೆ ಇರಲಿ ಬಿಡಿ. ನೀವು ಡಿಸೈಡ್ ಮಾಡಿದಮೇಲೆ ಬೇರೆ ಮಾತು ಯಾಕೆ."
ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯವರು ಇಷ್ಟರ ಮಟ್ಟಿಗೆ ತಲೆಯಾಡಿಸಿದ್ದೇ ಸಾಕೆನ್ನುವಂತೆ ರೆಡ್ಡಪ್ಪ ಮಾಸ್ತರು ಅಲ್ಲಿಂದ ಅದೃಶ್ಯರಾಗಿಬಿಟ್ಟರು.
ರೆಡ್ಡಪ್ಪ ಮಾಸ್ತರು ಅತ್ತ ಹೋದದ್ದೇ - ಆ ವರೆಗೆ ಎಲ್ಲವನ್ನೂ ನೋಡಿ ಮೌನವಾಗಿದ್ದ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಅಪ್ಪಲರೆಡ್ಡಿಯನ್ನು ನೋಡಿ ಅನುಮಾನದಿಂದ ಗೊಣಗಿದರು:
"ಸರಪಂಚರು ಬಹಳ ಧಾರಾಳಿ... ಆ ಮನುಷ್ಯನ ಪೂರ್ವೋತ್ತರ ತಿಳಿದುಕೊಳ್ಳದೆಯೇ ಊರಲ್ಲಿ ಇರಲು ಪರ್ಮಿಟ್ ಮಾಡಿಬಿಟ್ಟಿರಲ್ಲಾ... ಆ ಮುಖವನ್ನು ಒಂದು ಸಾರೆ ನೋಡಿ ಆಮೇಲಾದರೂ ಡಿಸೈಡ್ ಮಾಡಬಹುದಿತ್ತು ಅಂತ ಈ ಬಡವನ ಅಭಿಪ್ರಾಯ. ಯಾಕೆಂದರೆ, ಈ ಮಧ್ಯ ಸುತ್ತಮುತ್ತ ವಿಪರೀತವಾಗಿ ನಕ್ಸಲ್ ಗಳ ಹಾವಳಿಯಿರೋದು ನಿಮಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ - ಈತ ಬಂದು ಇನ್ನ ಶಾಲಾಮಕ್ಕಳ ತಲೆಯನ್ನೂ, ಊರಿಗೆ ಹಿರಿಯರಾದ ನಮ್ಮಗಳ ನಿದ್ದೆಯನ್ನೂ ಹಾಳುಮಾಡಿದರೆ ಏನು ಗತಿ?"
ಈ ಮಾತುಗಳನ್ನು ಕೇಳಿ ಸರಪಂಚರು ತಲೆಯಾಡಿಸಿದರು:
"ಬಹುಶಃ ನೀವು ಹೇಳೋದು ನಿಜ ಇರಬಹುದು. ಆದರೆ ನಕ್ಸಲ್ ಗಳೂ ದೇವಸ್ಥಾನದ ಅಜೆಂಡಾ ಹಿಡಿದು ಹಳ್ಳಿಗಳಿಗೆ ಪ್ರವೇಶ ಮಾಡಿದರೆ - ಆ ದೇಶಕ್ಕೆ 'ಹೋಪ್' ಇಲ್ಲದ ಹಾಗಾಗುತ್ತದೆ. ಜತೆಗೆ ದಿವಂಗತ ಮಾವೋ ಈ ಬಗ್ಗೆ ಏನೆಂದಾನು? ನಕ್ಸಲ್ ಗಳು ನಾಸ್ತಿಕರಲ್ಲದಿದ್ದರೂ - ನಾಸ್ತಿಕವಾದಿಗಳಲ್ಲವೇ? ಒಂದಿಷ್ಟು ದಿನ ಪ್ರಭುದಾಸನನ್ನು ಗಮನಿಸಿ ನೋಡೋಣ. ಹೇಗೂ ಮುಖ ನೋಡಿ ಅವನು ನಕ್ಸಲ್ ವಾದಿಯೇ ಅಂತ ಡಿಸೈಡ್ ಮಾಡುವುದು ಸಾಧ್ಯವಿತ್ತಿಲ್ಲ ಅಲ್ಲವೇ?"
"ಕರೆಕ್ಟೇ... ನೀವು ಅಂದಹಾಗೆ ಆ ವ್ಯಕ್ತಿಯಮೇಲೆ ಒಂದಿಷ್ಟು ಕಣ್ಣಿಟ್ಟಿರೋದು ಒಳ್ಳೇದು. ಒಂದು ಮಾತ್ರ ಇದರಲ್ಲಿ ಫಾಯಿದೆಯ ವಿಷಯವಿದೆ: ಅವನು ತಂದಿರೋ ಈ ಶಿವಾಲಯದ ಅಜೆಂಡಾ ಕೈಗೆತ್ತಿಕೊಳ್ಳುವುದೇ ಆದರೆ - ನಿಮ್ಮ ಎಲೆಕ್ಷನ್ನಿಗೂ ಸಹಕಾರಿಯಾದೀತು. ಬರೆ ಪಂಚಾಯ್ತಿಯೇನು - ಈ ಖ್ಯಾತಿ ನಿಮ್ಮನ್ನು ಜೆಡ್.ಪಿ, ಅಸೆಂಬ್ಲಿಯವರೆಗೂ ಕರಕೊಂಡು ಹೋಗಬಹುದು... ಅಂತ ಈ ಬಡವನ ಅಭಿಪ್ರಾಯ."
ಶ್ರೀಪ್ರಕಾಶಚಂದ್ ಶ್ರೀಮಲ್ ಗೆ ಮೋಹನ ಪ್ರಭುದಾಸನ ಸುದ್ದಿ ಹೇಗೆ ಸ್ವೀಕರಿಸಬೇಕೋ ತಿಳಿಯದಾಯಿತು. ಈಗಿತ್ತಲಾಗಿ ಅನೇಕ ವಿಧಗಳಲ್ಲಿ ಶ್ರೀಮಲ್ ನ ಧಂಧೆ ಏಟು ತಿಂದಿತ್ತು. ಒಂದುಕಡೆ - ಅಪ್ಪಲರೆಡ್ಡಿಯ ಅದ್ಭುತ ನೇತೃತ್ವದಲ್ಲಿ ಊರಿನ ಸಹಕಾರ ಸಂಘ ಚೆನ್ನಾಗಿ ನಡೆಯುತ್ತಿದ್ದಾದ್ದರಿಂದ ಶ್ರೀಮಲ್ ಬಳಿ ಸಾಲ ಕೇಳಲು ಬರುವ ಜನ ಸಂಖ್ಯೆಯಲ್ಲಿ ಬಹಳವೇ ಕಡಿಮೆಯಾಗಿದ್ದರು. ಅದೂ ಸಾಲದೆಂಬಂತೆ ಶ್ರೀಮಲ್ ಗೆ ಧಾರಾಳವಾಗಿ ಸಾಲ ಕೊಡುವ ಧೈರ್ಯವೂ ಇರಲಿಲ್ಲ. ಅದಕ್ಕೆ ಕಾರಣ: ಈಗಿತ್ತಲಾಗಿ ಈ ಪ್ರಾಂತದಲ್ಲಿ ನಕ್ಸಲ್ ಗಳ ಹಾವಳಿ ವಿಪರೀತವಾಗಿತ್ತು. ಅವರುಗಳು ಊರ 'ಷಾವುಕಾರು'ವನ್ನು ತಮ್ಮ ಮೊದಲ ಗುರಿ ಮಾಡಿಕೊಂಡು - ಸಾಲ ಪತ್ರ ನಾಶ ಮಾಡುವುದು ಲೂಟಿ ಮಾಡುವುದು.. ಇತ್ಯಾದಿ ಮಾಡುತ್ತಿದ್ದರು. ಹೆಚ್ಚು ಸಾಲಕೊಟ್ಟು ಹೈ ಪ್ರೊಫೈಲ್ ಆದರೆ ಅವರ ಗಮನವನ್ನು ಸೆಳೆಯುವುದರಲ್ಲಿ ಅನುಮಾನವೇ ಇರಲಿಲ್ಲ. ಅದರ ಫಲವಾಗಿ ಕೊಟ್ಟ ಹಣ ಕಳೆದುಕೊಳ್ಳುವುದೇ ಅಲ್ಲದೇ ಜೀವಕ್ಕೂ ಅಪಾಯವಿತ್ತು! ಈ ಭಯದಿಂದಾಗಿಯೇ ಈಗಿತ್ತಲಾಗಿ ಶ್ರೀಮಲ್ ಎರಡು ಮೂರು ವರ್ಷಗಳಲ್ಲಿ ಇದ್ದ ಹೆಚ್ಚುವರಿ ಹಣವನ್ನೆಲ್ಲ ಷೇರು ಧಂಧೆಯಲ್ಲಿ ಹಾಕಿದ್ದ. ಆದರೆ ಅಲ್ಲೂ ಸ್ಕ್ಯಾಮ್ ಸಮಯದ ಲೆಕ್ಕಾಚಾರ ಸರಿಹೋಗದೇ - ವಿಪರೀತ ಹಣ ಕೈಕಚ್ಚಿತ್ತು. ಮತ್ತೇನಾದರೂ ಮಾಡೋಣವೆಂದರೆ ತನ್ನ ಹಣವನ್ನು ಕಬಳಿಸಿದ್ದ ದರಿದ್ರದ ಷೇರು ಬಜಾರು ಆ ನಂತರ ಸರಿಯಾಗಿ ಮೇಲೇಳಲೇ ಇಲ್ಲು.
ಪೈಪೈಗೂ ಲೆಕ್ಕ ಇಡುವ ಬಡ್ಡಿ ಲೆಕ್ಕ ಹಾಕುವ ಶ್ರೀಮಲ್ ಗೆ ಹೀಗೆ ಡಬಲ್ ದುಃಖ ಆಗುವುದು ಸಹಜವೇ ಇತ್ತು. ಒಂದು ಕಡೆ ಹೂಡಿದ ಹಣ ದುಡಿಯದೇ ನಷ್ಟವಾಗುತ್ತಿದೆ ಎಂಬ ದುಃಖವಾದರೆ - ಮತ್ತೊಂದು ಕಡೆಯಿಂದ ಇದೇ ಹಣವನ್ನು ಬೇರೆಲ್ಲಾದರೂ ಹಾಕಿದ್ದಿದ್ದರೆ ಬರಬಹುದಾಗಿದ್ದ ಊಹಾಪೋಹದ ಲಾಭದ ಲೆಕ್ಕಾಚಾರ ಹಾಕಿ ದುಃಖಿಯಾಗಿದ್ದ ಶ್ರೀಮಲ್. ಇಷ್ಟಾದರೂ ತನ್ನ ಧಂಧೆಯ ಕಚ್ಚಾಮಾಲೇ ಹಣವಾದ ಶ್ರೀಮಲ್ ಹಣದ ವ್ಯಾಪಾರ ಬಿಟ್ಟು ಬೇರೆಲ್ಲಿಗೆ ಹೋಗಲು ತಯಾರಿರಲಿಲ್ಲ.
ಪ್ರಧಾನ ಮಂತ್ರಿ ಕೆಮ್ಮಿದರೆ ಷೇರು ಬಜಾರು ಏರುಪೇರಾಗುವಂತೆ - ಹಣದ ಧಂಧೆ ಮಾಡುವ ಶ್ರೀಮಲ್ ಗೆ ಹೊರಗೆ ಏನೇ ಆದರೂ... ಅದರ ಪ್ರಭಾವ ತನ್ನ ಧಂಧೆಯ ಮೇಲೆ ಹೇಗಾದೀತು ಎಂದು ನೋಡುವ ತವಕ. ಈಗ ಬಹುಶಃ ತನ್ನ ಧಂಧೆ ಪಿಕಪ್ ಆಗುವುದಕ್ಕೆ ಒಳ್ಳೆಯ ಸಮಯವಿರಬಹುದು. ಪಂಚಾಯ್ತಿ ಚುನಾವಣೆ ಹತ್ತಿರದಲ್ಲೇ ಇರೋದರಿಂದ ಸಹಕಾರ ಸಂಘದ ಸಾಲ ವಾಪಸ್ ಮಾಡೀಂತ ಅಪ್ಪಲರೆಡ್ಡಿ ರೈತರನ್ನ ಬಲವಂತ ಮಾಡುವುದಿಲ್ಲ. ಎರಡು ವರುಷಗಳ ಹಿಂದಷ್ಟೇ ನಡೆದ ಸಾಲಮನ್ನಾ ಕಾರ್ಯಕ್ರಮದಿಂದಾಗಿ ರೈತರೂ ಆ ಬಗ್ಗೆ ಉತ್ಸಾಹ ತೋರಿಸುವುದಿಲ್ಲ. ಈ ಎಲ್ಲದರ ನಡುವೆ, ಹಳ್ಳಿಗೆ ಬಂದಿಳಿದಿರುವ ಮೋಹನ ಪ್ರಭುದಾಸನಿಂದ ತನ್ನ ಧಂಧೆಗೆ ಯಾವರೀತಿಯ ಪ್ರಭಾವ ಆಗಬಹುದು? ಅಕಸ್ಮಾತ್ ಅಪ್ಪಲರೆಡ್ಡಿ ದೇವಸ್ಥಾನದ ಅಜೆಂಡಾ ಹಿಡಿದರೆ, ಸಹಕಾರ ಸಂಘದ ಸಾಲದ ಬಗ್ಗೆ ಏನು ನಿಲುವು ತೆಗೆದುಕೊಳ್ಳಬಹುದು? ಹಾಗೂ ಹಳ್ಳಿಗೆ ಹೊಸದಾಗಿ ಬಂದಿರುವ ಈ ಹೊಸ ವ್ಯಕ್ತಿ ಎಷ್ಟು ಪವರ್ ಫುಲ್ ಆಗುವ ಸಾಧ್ಯತೆ ಇದೆ?
ಶ್ರೀಪ್ರಕಾಶ್ ಚಂದ್ ಶ್ರೀಮಲ್ ಈ ಎಲ್ಲ ವಿಷಯಗಳನ್ನು ಯೋಚಿಸುವುದರ ಬದಿಬದಿಗೇ ದೇವರ ಬಗೆಗೂ ಯೋಚಿಸಿದ: ಏನೇ ಇರಲಿ, ಈ ಪ್ರಭುದಾಸ ದೇವರ ಕೆಲಸಕ್ಕೆಂದು ಬಂದಿದ್ದಾನೆ. ದೇವರ ಕೆಲಸಕ್ಕ ಯಾರೂ ಅಡ್ಡಯಾಗಬಾರದು... ಸಾಧ್ಯವಾದರೆ ಒಂದಿಷ್ಟು ಸಹಾಯವನ್ನೂ ಮಾಡಬೇಕು.
ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯೋನೋ ಪ್ರಭುದಾಸನನ್ನು ತನ್ನ ಹಳ್ಳಿಯೊಳಕ್ಕೆ ಸುಲಭವಾಗಿ ಸೇರಿಸಿಕೊಂಡುಬಿಟ್ಟ. ಸೇರಿಸಿಕೊಂಡಮೇಲೆ ಅಪ್ಪಲರೆಡ್ಡಿಗೆ ಎಲ್ಲ ರೀತಿಯ ಭಯಗಳೂ ಶುರುವಾಯಿತು. ಶ್ರೀಮಲ್ ಹೇಳಿದಂತೆ, ಒಮ್ಮೆ ಅವನ ಮುಖವನ್ನಾದರೂ ನೋಡಬೇಕಿತ್ತು ಅನ್ನಿಸಿತು. ಹೊರಗಿನಿಂದ ಹೀಗೆ ಏಕಾಏಕಿ ಬರುವವರು ಹಳ್ಳಿಯ ಬ್ಯಾಲೆನ್ಸನ್ನು ಹಾಳು ಮಾಡಿ, ಶಾಂತಿಗೆ ಭಂಗ ತರುವ ಸಾಧ್ಯತೆಯಿದೆ. ಅದರಲ್ಲೂ ಇದು ಎಲೆಕ್ಷನ್ ವರ್ಷ....
ಅಪ್ಪಲರೆಡ್ಡಿಗೆ ಎಲ್ಲಕ್ಕಿಂತ ಹೆಚ್ಚು ಭಯ ಹುಟ್ಟಿಸಿದ ಸಂಗತಿಯೆಂದರೆ ಕೋಮು ಸೌಹಾರ್ದದ್ದು. ಆರುನೂರು ಮನೆಗಳಿರುವ ಈ ಹಳ್ಳಿಯಲ್ಲಿ ಸುಮಾರು ಒಂದುನೂರು ಮನೆಗಳು ಮುಸಲ್ಮಾನರದ್ದಾಗಿತ್ತು. ಈಗ ಇದ್ದಕ್ಕಿದ್ದಂತೆ ಹೊರಗಿನವನೊಬ್ಬ ಬಂದು ಆಲಯವನ್ನು ಹಳ್ಳಿಯ ಮುಖ್ಯ ಅಜೆಂಡಾ ಮಾಡಿದರೆ - ಅವರುಗಳೆಲ್ಲ ತಲ್ಲಣಗೊಳ್ಳಬಹುದೇ? ಬಹಳವೇ ವರ್ಷದಿಂದ ಸಿದ್ಧಾಂತದ ರಾಜಕೀಯ ಮಾಡಿಕೊಂಡು ಬಂದ ಅಪ್ಪಲರೆಡ್ಡಿಗೆ ಈ ಆಲಯದ ರಾಜಕೀಯ ಹಿಡಿಸಲಿಲ್ಲ. ಇದರಿಂದಾಗಿ ತಾನು ಎಲ್ಲೂ ಸಲ್ಲದವನಾಗಿಬಿಡಬಹುದಾದ್ದು ಸುಲಭ! ಒಂದು ಕ್ಷಣದ ಮಟ್ಟಿಗೆ - ಗ್ರಾಮ ಪಂಚಾಯ್ತಿಯಾಚೆಗೆ ತಾನು ಸಫಲನಾಗದ್ದಕ್ಕೆ ಇಂಥ ಅವಕಾಶಗಳನ್ನು ಉಪಯೋಗಿಸಿಕೊಳ್ಳದಿದ್ದದ್ದೇ ಕಾರಣ ಅಂತ ಅನ್ನಿಸಿದರೂ - ಲೋಹಿಯಾ, ಜಾರ್ಜ್ ಎಂದು ಅವರ ಹಿಂದೆಯೇ ಒಡಾಡಿದ್ದ ರೆಡ್ಡಿ ಈಗ ಸಿದ್ಧಾಂತವೋ, ಸಫಲತೆಯೋ ಎಂದು ತುಲನೆ ಮಾಡುವ ಸ್ಥಿತಿಗೆ ಬಂದುಬಿಟ್ಟ. ಹೀಗಾಗಿ ಈ ಆಲಯದ ಅಜೆಂಡಾದ ಬಗ್ಗೆ ತನ್ನ ನಿಲುವೇನೆಂದು ನಿರ್ಧರಿಸಲಾಗದೇ ತಬ್ಬಿಬ್ಬಾದ.
ನಮ್ಮ ಊರು, ನಮ್ಮ ಜನ, ನಮ್ಮ ಜೀವನ, ನಮ್ಮ ಆಲಯ - ಇದರಲ್ಲಿ ಈ ಹೊರಗಿನ ಪ್ರಭುದಾಸನ ಮೂಗು ತೂರುವುದೇನು? ಎಂಬ ಪ್ರಶ್ನೆಯೂ ಅವನನ್ನು ಆವರಿಸಿತು. ಜತೆಜತೆಗೆ ಇದ್ದಕ್ಕಿದ್ದಹಾಗೆ ಹೊರಗಿನ ವ್ಯಕ್ತಿಯೊಬ್ಬ ಬೃಹದಾಕಾರವಾಗಿ ನಿಂತು ತನ್ನ ನಾಯಕತ್ವಕ್ಕೇ ಸವಾಲು ಹಾಕುತ್ತಿದ್ದಂತಿತ್ತು. ಸಹಜನಾಯಕನಾಗಿ ಇಷ್ಟು ವರ್ಷ ಮೆರೆದು - ಈಗ ಇದ್ದಕ್ಕಿದ್ದಂತೆ ಅದಕ್ಕಾಗಿ ಹೋರಾಡಬೇಕಾದ ಸ್ಥಿತಿ ಸಂತೋಷಜನಕವಾದದ್ದೇನೂ ಆಗಿರಲಿಲ್ಲ.
ಇಷ್ಟಾದರೂ ಈ ಮಂದಿರದ ಬಗ್ಗೆ ತಾನು ತೆಳೆಯಬೇಕಾದ ನಿಲುವು ಏನೆಂದು ನಿರ್ಧರಿಸಲಾಗದೇ ರೆಡ್ಡಿ ಕೈಚೆಲ್ಲಿದ. ಈಗ ಹೀಗೆ ಧುತ್ತೆಂದು ಎದ್ದುನಿಂತ ಧೃವತಾರೆ - ಮೋಹನ ಪ್ರಭುದಾಸನ ಪೂರ್ವೋತ್ತರಗಳನ್ನಾದರೂ ಅರಿತು ಅವನು ತ್ರಿವಿಕ್ರಮಾವತಾರ ತಾಳದಂತೆ ನೋಡಿಕೊಳ್ಳಬೇಕು - ಎಂದು ರೆಡ್ಡಿಗನ್ನಿಸಿದ ಕೂಡಲೇ ಮನೆಕೆಲಸದ ಪೆಂಟಯ್ಯನನ್ನು ಕರೆದ:
"ಸ್ಕೂಲಿನ ಹತ್ತಿರ ಪ್ರಭುದಾಸ ಅಂತ ಒಬ್ಬ ಹೊಸಬ ಬಂದಿದ್ದಾನೆ. ಅವನಿಗೆ ನನ್ನನ್ನ ಬಂದು ನೋಡಲು ಹೇಳು."
*
*
*
*
ಕೆಲವೇ ದಿನಗಳಲ್ಲಿ ಮೋಹನ ಪ್ರಭುದಾಸ ಭಜಂತ್ರಿ.. ಪ್ರಭುದಾಸನೆಂಬ ಹೆಸರು ಬಿಟ್ಟುಕೊಟ್ಟು ಹಳ್ಳಿಯ ಪ್ರಿಯ ಮೋಹನ ಕಾಕಾ ಆಗಿಬಿಟ್ಟ. ಕಾಕಾ ಪ್ರತಿನಿತ್ಯ ಮುಂಜಾನೆ ಅಷ್ಟು ಹೊತ್ತಿಗೇ ಎದ್ದು ಜೋರಾಗಿ ಮಂತ್ರಗೊಣಗುತ್ತಾ ಶಾಲೆಯ ಆವರಣದಲ್ಲಿದ್ದ ಎಲ್ಲ ತರಗೆಲೆಗಳನ್ನೂ ಕೈಯಾರೆ ಆಯ್ದು ನೆಲ ಗುಡಿಸುವನು. ನಂತರ ಪಕ್ಕದ ಹ್ಯಾಂಡ್ ಪಂಪನಲ್ಲಿ ಮಿಂದು ಜೀರ್ಣವಾದ ದೇವಾಲಯದ ಶಿವಲಿಂಗದೆದುರು ನಿಂತು ಪ್ರಾರ್ಥನೆ, ಪೂಜೆ ಮಾಡುವನು. ಹಾಗೂ ಬಂದು ಹೋದ ಎಲ್ಲ ಜನರೊಂದಿಗೂ ಪ್ರಭುವು ತನಗೆ ಕೊಟ್ಟಿರುವ ಆಲಯದ ಜೀರ್ಣೋದ್ಧಾರದ ಕೆಲಸದ ಬಗ್ಗೆ ಮಾತನಾಡುವನು. ಮಕ್ಕಳ ಆಟದ ಸಮಯದಲ್ಲಿ ಅವರನ್ನು ಕೂಡ್ರಿಸಿಕೊಂಡು ತನ್ನ ಪ್ರತಾಪದ ಬಗ್ಗೆ ಕಟ್ಟು ಕಥೆಗಳನ್ನು ಹೇಳುವನು. ಮಂತ್ರಮುಗ್ಧರಾದ ಕೆಲ ಮಕ್ಕಳನ್ನು ಸಣ್ಣ ಪುಟ್ಟ ಕೆಲಸಗಳಿಗೆ ಹಚ್ಚುವನು - ಹೂವು ಬಿಲ್ವಪತ್ರೆ ಆಯುವುದು, ಶಿವಲಿಂಗದ ಜಳಕಕ್ಕೆ ಹ್ಯಂಡ್ ಪಂಪಿನಿಂದ ನೀರು ತರುವುದು.. ಹೀಗೆಲ್ಲಾ ಆ ಬರಪೀಡಿತ ಪ್ರದೇಶದಲ್ಲಿ ಅಕಸ್ಮಾತ್ ಎಂದಾದರೂ ಮಳೆಬಂದರೆ ಖುಷಿಯಿಂದ ಕುಣಿದಾಡುವನು. ತರಗತಿಯ ಒಂದು ಮೂಲೆಗೆ ತನ್ನ ಅಗ್ಗಿಷ್ಟಿಕೆ ಇಟ್ಟುಕೊಂಡಿದ್ದು - ಶಾಲೆ ಪ್ರಾರಂಭವಾಗುವುದಕ್ಕೆ ಮೊದಲೇ ಅಡುಗೆ ಮಾಡಿಕೊಳ್ಳುವುದು - ಶಾಲೆ ಮುಗಿದ ನಂತರ ನಿದ್ರೆಮಾಡುವುದು ಇಂಥ ದಿನಚರಿಯನ್ನು ಕಾಕಾ ಪಾಲಿಸುವನು.
ಕಾಕಾ ಬಂದದ್ದೇ ಬಂದದ್ದು - ಜಗತ್ತಿನ ಒಂದು ಮೂಲೆಯಲ್ಲಿ ಮಲಗಿ ಕೂತಿದ್ದ ಹಳ್ಳಿಗೆ ಇದ್ದಕ್ಕಿದ್ದಂತೆ ಜೀವ ಬಂದಂತಾಯಿತು. ಸುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಕಾಕಾನ ಅವತಾರದ ಚರ್ಚೆಯಾಗಿ, ಅವರೆಲ್ಲಾ ಹಳ್ಳಿಯ ಜೀರ್ಣ ಆಲಯವನ್ನು ಕಂಡುಹೋಗಲು ಬರುತ್ತಿದ್ದರು. ಬಂದವರು - ಅಲ್ಲಿನ ಆಲಯದಷ್ಟೇ ಜೀರ್ಣವಾಗಿದ್ದ ಹುಂಡಿಗೆ ಚಿಲ್ಲರೆಕಾಸು ತೂರಿಸಿ ಹೋಗುತ್ತಿದ್ದರು. ಮಲಗಿ ನಿದ್ರಿಸುತ್ತದ್ದ ಶಾಲೆಯ ಆವರಣಕ್ಕೆ ಹೀಗೆ ಇದ್ದಕ್ಕಿದ್ದಂತೆ ಸಂಭ್ರಮದ ವಾತಾವರಣ ಬಂದುಬಿಟ್ಟಿತ್ತು.
ಕಾಕಾನನ್ನು ಮೊದಲ ಬಾರಿಗೆ ನೋಡಿದಾಗಲೇ ಅಪ್ಪಲರೆಡ್ಡಿಗೆ ಒಂದು ವಿಷಯ ಖಾತ್ರಿಯಾಯಿತು. ಈ ವ್ಯಕ್ತಿಯಿಂದ ತನ್ನ ನಾಯಕತ್ವಕ್ಕೆ ನೇರವಾದ ತೊಂದರೆ ಆಗುವುದು ಸಾಧ್ಯವಿರಲಿಲ್ಲ. ಕಾಕಾನಿಂದ ನಾಯಕತ್ವಕ್ಕೆ ಸವಾಲ್ ಬರದಿದ್ದರೂ, ಕಾಕಾ ತಂದ ಅಜೆಂಡಾದಿಂದ ತೊಂದರೆ ಉಂಟಾಗುವ ಸಾಧ್ಯತೆಯಿತ್ತು. ಹೀಗಾಗಿ, ಒಂದು ಥರದಲ್ಲಿ 'ಕಾಕಾ' ರಾಜಕೀಯವಾಗಿ ಮುಖ್ಯವಾಗದೆಯೇ, ಒಂದು ಮುಖ್ಯ ಸವಾಲಾಗಿ ಅವತರಿಸಿಬಿಟ್ಟ. ಸೈದ್ಧಾಂತಿಕವಾಗಿ ಅಪ್ಪಲರೆಡ್ಡಿಗೆ ಇದರಲ್ಲೆಲ್ಲಾ ತನ್ನ ಮೂಗು ತೂರಿಸುವ ಇಷ್ಟವಿರಲಿಲ್ಲ. ಬಹುಶಃ ಚುನಾವಣೆಯ ಸಮಯಕ್ಕೆ ಇದರ ಬಗ್ಗೆ ಜನರ ಗಮನವನ್ನ ಸಳೆದರೆ ಅತ್ತ ಸಹಕಾರ ಸಂಘದ ಸಾಲ ವಸೂಲಿಗೆ ಕರಣಂ ವಿಶ್ವನಾಥಂನನ್ನು ಛೂ ಬಿಟ್ಟು 'ಸಾಲಮನ್ನಾ' ಒಂದು ಅಜೆಂಡಾ ಆಗದಂತೆ ನೋಡಿಕೊಳ್ಳಬಹುದು - ಎಂದು ಕೆಲಕ್ಷಣಗಳ ಮಟ್ಟಿಗೆ ಅನ್ನಿಸಿತು.
ಶ್ರೀಪ್ರಕಾಶ್ ಚಂದ್ ಶ್ರೀಮಲ್ ಕಾಕಾನನ್ನು ನೋಡಿದಾಕ್ಷಣಕ್ಕೆ ಖುಷಿಗೊಂಡ. ಅವನಿಗಂತೂ ಈ ದೇವಸ್ಥಾನದ ಅಜೆಂಡಾ ಒಂದು ಸುವರ್ಣಾವಕಾಶವೆಂಬಂತೆ ಕಂಡಿತು. ಈ ವಿಷಯ ಕೈಗೆತ್ತಕೊಂಡರೆ ಎರಡು ರೀತಿಯಿಂದ ಉಪಯೋಗವಾಗಲಿತ್ತು: ಒಂದು - ಜನರಿಗೆ ಪವಿತ್ರವೆನ್ನಿಸುವ ಈ ಕೆಲಸದ ನಾಯಕತ್ವವನ್ನು ಕೈಗೆತ್ತಿಕೊಳ್ಳುವುದರಿಂದ ಜನರ ನಡುವೆ ಅವನ ಪ್ರತಿಷ್ಠೆ, ಸ್ವೀಕಾರ ಹೆಚ್ಚಲಿತ್ತು. ಎರಡು - ನಾಲ್ಕಾರು ವರುಷಗಳಿಂದ ಇಲ್ಲದ್ದ ದೇವರ ಕೃಪೆ ಈ ಪುಣ್ಯಕಾರ್ಯದಿಂದಾದರೂ ದಕ್ಕಬಹುದಿತ್ತು. ಒಟ್ಟಾರೆ - ಆಲಯವನ್ನು ಕಟ್ಟುವ ಹುಮ್ಮಸ್ಸಿನಲ್ಲಿ ಜನ ಸಹಕಾರ ಸಂಘದ ಸಾಲದ ಬಗ್ಗೆ ಸ್ವಲ್ಪ ಸಡಿಲಾದರೆ ತನ್ನ ವ್ಯಾಪಾರವೂ ಕುದುರುವುದು ಎಂದಲ್ಲಾ ಶ್ರೀಮಲ್ ದೂರಾಲೋಚನೆ ಮಾಡಿದ. ಒಂದು ಹಂತದಲ್ಲಿ ಬೆಳೆ ಬರುವ ವೇಳೆಗೆ ಸರಿಯಾಗಿ ಮಂದಿರ ನಿರ್ಮಾಣದ ಕಾರ್ಯಕ್ರಮವನ್ನು ಜೋರಾಗಿ ಕೈಗೊಂಡರೆ - ಸಾಲದ ಹಣವನ್ನು ಚಂದಾವನ್ನಾಗಿ ಪರಿವರ್ತಿಸಬಹುದು ಎಂಬ ಆಲೋಚನೆಯೂ ಅವನ ಮನಸ್ಸನ್ನು ಹಾಯ್ದು ಹೋಯಿತು. ಈ ಎಲ್ಲ ಯೋಚಿಸುತ್ತರುವಾಗಲೇ ಅವನ ಬಡ್ಡೀ ಮನಸ್ಸು ಖರ್ಚಿಲ್ಲದೆಯೇ ಪುಣ್ಯವಂತನೂ, ಒಳ್ಳೆಯವನೂ ಆಗುವ ತನ್ನ ಡಬಲ್ ಫಾಯಿದೆಯನ್ನು ಚಕ್ರ ಬಡ್ಢಿ ಸಮೇತ ಲೆಕ್ಕಹಾಕುತ್ತಿತ್ತು.
ಕಾಕಾ ಬಂದು ಇಪ್ಪತ್ತು ದಿನಗಳಾಗುವ ವೇಳೆಗೆ ಹಳ್ಳಿಯಲ್ಲೆಲ್ಲಾ ಶಿವಾಲಯದ ಮಾತು ಮನೆಮಾತಾಗಿತ್ತು. ಜನರ ಗಮನವೆಲ್ಲಾ ಕಾಕಾನ ಅಜೆಂಡಾದತ್ತ ಕೇಂದ್ರೀಕೃತವಾದಾಗ, ತಾನು ಸುಮ್ಮನಿರುವುದು ಸರಿಕಾಣುವುದಿಲ್ಲ ಎಂದು ಅಪ್ಪಲರೆಡ್ಡಿಗೆ ಅನ್ನಿಸಿತು. ಇದಕ್ಕೆ ಒಳ್ಳೆಯ ಉಪಾಯವೆಂದರೆ ಒಂದು ಆಲಯ ಪುನರ್ನಿರಮಾಣ ಸಮಿತಿಯನ್ನು ಏರ್ಪಾಟು ಮಾಡುವುದಾಗಿತ್ತು. ಈ ಎಲ್ಲವೂ ಹೇಗೆ ಮುಂದುವರೆಯಬೇಕು ಎಂಬುದರ ಬಗೆಗೆ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಗೆ ಒಂದು ಹಂತದಲ್ಲಿ ಆಸಕ್ತಿಯಿತ್ತು. ಜತೆಗೆ ಈ ಎಲ್ಲದರ ಮೇಲೂ ತನ್ನ ಉಸ್ತುವಾರಿಕೆ ಇರಲೇಬೇಕಿತ್ತು. ಅದೇ ಸಮಯಕ್ಕೆ ಈ ಸಮಿತಿಯಲ್ಲಿ ಸ್ವತಃ ತಾನಿರುವುದು ಅಪ್ಪಲರೆಡ್ಡಿಗೆ ಇಷ್ಟವಿರಲಿಲ್ಲ. ಮೇಲಾಗಿ ಈ ಸಮಿತಿಗೆ ರಾಜಕೀಯ ಬಣ್ಣ ಕೊಟ್ಟರೆ ಆಗುವ ಪ್ರಯೋಜನಕ್ಕಿಂತ ನಷ್ಟವೇ ಹಚ್ಚೆಂದು ಅಪ್ಪಲರೆಡ್ಡಿಗೆ ಖಾತ್ರಿಯಿತ್ತು. ಪುನರ್ನಿರ್ಮಾಣ ಸಮಿತಿಯಲ್ಲಿ ತಾನಿರದೆಯೇ, ಅದು ತನ್ನ ಕಂಟ್ರೋಲಿನಂದಾಚೆ ಹೋಗದಂತಹ ದಾರಿಯನ್ನು ಅಪ್ಪಲರೆಡ್ಡಿ ಹುಡುಕುತ್ತಿದ್ದ. ಒಂದು ಸರಳ ಉಪಾಯವೆಂದರೆ ಶ್ರೀಪ್ರಕಾಶ್ ಚಂದ್ ಶ್ರೀಮಲ್ ನನ್ನು ಸಮಿತಿಯ ಅಧ್ಯಕ್ಷನನ್ನಾಗಿ ಮಾಡುವುದು. ಶ್ರೀಮಲ್ ಜೊತೆ ಇದನ್ನು ಚರ್ಚಿಸಿದಾಗ ಅವನೂ ಇದನ್ನು ಇಷ್ಟದಿಂದ ಒಪ್ಪಿಕೊಂಡಂತಾಯಿತು. ರೆಡ್ಡಪ್ಪ ಮಾಸ್ತರನ್ನೂ ಸಮಿತಿಗೆ ಸೇರಿಸಿಕೊಳ್ಳುವುದೆಂದು ಇಬ್ಬರೂ ನಿರ್ಧರಿಸಿದರು. ಜೊತೆಜೊತೆಗೆ ಹಳ್ಳಿಯ ಇತರ ಪ್ರಮುಖರ ಹೆಸರೂ ಸೇರಿಕೊಂಡಿತು. ಒಟ್ಟಾರೆ ಸಮಿತಿ ಕೈ ತಪ್ಪಿಹೋಗದಿರಲೆಂದು ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಸಮಿತಿಯ ಮುಂದೆ ಒಂದು ಆಸೆಯನ್ನು ನೇತುಬಿಟ್ಟ - "ಆಲಯಕ್ಕೆ ಜವಾಹರ್ ರೋಜ್ ಗಾರ್ ಯೋಜನಾದಿಂದ ಒಂದಿಷ್ಟು ಹಣವನ್ನು ಪಂಚಾಯ್ತಿಯ ವತಿಯಿಂದ ಮಂಜೂರು ಮಾಡಿಸುವುದು ಸಾಧ್ಯವೇನೋ..."
ಸಮಿತಿ ಏರ್ಪಾಟು ಮಾಡಿದಾಗಲೇ ರೆಡ್ಡಪ್ಪ ಮಾಸ್ತರು ಸ್ವಲ್ಪ ಬೇಸರದಿಂದ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯವರ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು:
"ನೋಡಿ ದೊರೆ, ಸಮಿತಿಯೇನೋ ಮಾಡಿದ್ದೀರಿ... ಆದರೆ ಈ ಎಲ್ಲ ಯೋಚನೆಗಳಿಗೂ ಮೂಲ ಕಾರಣ ಕಾಕಾ... ದಿನ ನಿತ್ಯ ಆ ಜಾಗವನ್ನು ಕ್ಲೀನಾಗಿರಿಸಿ, ಪೂಜೆ ಮಾಡುತ್ತಿರುವವನೂ ಕಾಕಾನೇ. ಈಗ ಸಮಿತಿಯಲ್ಲಿ ಕಾಕಾ ಇಲ್ಲದಿರೋದು ವಿಚಿತ್ರ ಅಲ್ಲವೇ?"
"ಹೌದು ಮಾಸ್ತರೇ ಈ ವಿಷಯ ನಾವು ಬಹಳ ಯೋಚಿಸಿದೆವು. ಆದರೆ ಕಾಕಾನಂಥವರು ಸಮಿತಿಯಲ್ಲಿರೋದರಿಂದ ಫಾಯಿದೆಯೇನೂ ಇಲ್ಲ. ನಿಮಗೇ ಗೊತ್ತಿರೋ ಹಾಗೆ ಆ ಭಗವಂತನನ್ನು ಮುಟ್ಟುವುದಕ್ಕೆ ಎರಡು ಮಾರ್ಗಗಳಿವೆ - ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ. ಕಾಕಾ ಭಕ್ತಿಮಾರ್ಗಕ್ಕೆ ಸೇರಿದವನು. ಅವನು ಯೋಚಿಸಲಾರ. ಅವನನ್ನು ಕೆಲಸ ಸಾಧಿಸುವ ಉಸ್ತುವಾರಿಕೆಗೆ ಉಪಯೋಗಿಸಿಕೊಳ್ಳೋಣ. ಸಮಿತಿಯಲ್ಲಿ ಇರುವವರೆಲ್ಲಾ ಜ್ಞಾನಮಾರ್ಗಕ್ಕೆ ಸೇರಿದವರು. ಒಟ್ಟಾರೆ ಹೇಗಾದರೂ ಆಲಯ ನಿರ್ಮಾಣ ಆಗಬೇಕಾದ ರೀತಿಯ ಬಗ್ಗೆ ಆಲೋಚನೆ ಮಾಡುವವರು." ಅಪ್ಪಲರೆಡ್ಡಿಯವರು ಹೀಗೆಲ್ಲಾ ಮಾತನಾಡಿ, ರೆಡ್ಡಪ್ಪ ಮಾಸ್ತರರ ಬಾಯಿ ಮುಚ್ಚಿಸಿದ್ದರು.
ಸಮಿತಿಯ ರಚನೆಯ ಬಗ್ಗೆ ಕೇಳಿದ ಕಾಕಾ ಮಾತ್ರ ವಿಚಿತ್ರ "ಕರ್ಮಣ್ಯೇವಾಧಿಕಾರಸ್ತೇ" ಮೂಡಿನಲ್ಲಿದ್ದ. "ಸಮಿತಿ ಮಾಡಿ, ಸರಕಾರದ ಹಣ ತನ್ನಿ, ಚಂದಾ ಎತ್ತಿ, ಇಟ್ಟಿಗೆ ಕೊಡಿ, ಏನಾದರೂ ಮಾಡಿ... ಒಟ್ಟಾರೆ ಎರಡು ವರ್ಷಗಳಲ್ಲಿ ಆಲಯ ನಿರ್ಮಾಣ ಮುಗಿಯಬೇಕು. ಅಷ್ಟೇ."
ಈ ಚರ್ಚೆ ಮುಗಿಸಿಕೊಂಡು ಶಾಲೆಗೆ ಬಂದ ರೆಡ್ಡಪ್ಪ ಮಾಸ್ತರಿಗೆ ಯಾಕೋ ಸಮಾಧಾನವಾದಂತಿರಲಿಲ್ಲ. ಏನೂ ತೋರದೇ ಅವರು ಗೋಡೆಯತ್ತ ನೋಡಿದರು:"ಜೀವನ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವಿನ ನಿರಂತರ ಹೋರಾಟ" ಎಂಬ ಜರತುಷ್ಟ್ರನ ಸೂಕ್ತಿ ಕಣ್ಣಿಗೆ ಬಿತ್ತು.
ಸಮಿತಿಯ ರಚನೆಯಾದ ಕೆಲದಿನಗಳಲ್ಲೇ ಹಳ್ಳಿಯಲ್ಲಿ ಸಂಭ್ರಮದಿಂದ ಚಟುವಟಿಕೆ ಪ್ರಾರಂಭವಾಯಿತು. ಶ್ರೀಪ್ರಕಾಶ್ ಚಂದ್ ಶ್ರೀಮಲ ಮೊದಲ ಕಾಣಿಕೆ ನೀಡಿ ಒಂದು ಗಾಡಿ ಇಟ್ಟಿಗೆ ತರಿಸಿದರು. ರೆಡ್ಡಪ್ಪ ಮಾಸ್ತರು - ಮೋಹನ ಕಾಕಾರ ಉಸ್ತುವಾರಿಕೆಯಲ್ಲಿ ಶಾಲಾ ಆವರಣ 'ಸಾಫು' ಕಾರ್ಯಕ್ರಮದಲ್ಲಿ ಆಲಯವೂ ಸೇರಿಕೊಂಡಿತು. ಶಾಲಾ ಮಕ್ಕಳು ಸಂಭ್ರಮದಿಂದ ಆಲಯದತ್ತಲೂ ಕಣ್ಣು ಹಾಯಿಸಿದರು. ಪ್ರತಿನಿತ್ಯದ ಶಾಲಾ ಪ್ರಾರ್ಥನೆ ಕೂಡಾ ಬದಲಾಯಿತು. ದಿನವೂ ಧ್ವಜಸ್ಥಂಬದೆದುರು ನಿಸತು ಹಾಡುತ್ತಿದ್ದ ದೇಶಭಕ್ತಿಗೀತೆಯನ್ನು ಕೈಬಿಟ್ಟು ಮಕ್ಕಳೆಲ್ಲಾ 'ಬಾಯೇ ಮೋಡ್' ಮಾಡಿ ಎಡಬದಿಗೆ ತಿರುಗಿದರು. ದೇವಾಲಯದ ಎದುರಿಗೆ ನಿಂತು - "ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ" ಹಾಡಲು ಪ್ರಾರಂಭಿಸಿದರು.
ರೆಡ್ಡಪ್ಪ ಮಾಸ್ತರು ಈ ಎಲ್ಲ ಬದಲಾವಣೆಗಳನ್ನೂ ಸಂಭ್ರಮದಿಂದ ಕೈಗೊಂಡರು. ದೇವರ ಕೆಲಸ ಯಾವತ್ತಿದ್ದರೂ ಪುಣ್ಯದ ಕೆಲಸ, ಇದಕ್ಕೆ ಅಡ್ಡಬರಲು ನಾವು ತಾನೇ ಯಾರು??
ಆದರೆ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಈ ಕೆಲಸದಲ್ಲಿ ಎಂದಿಗಿಂತ ಹೆಚ್ಚಿನ ಮುತುವರ್ಜಿ ವಹಿಸಿದ್ದು ಸುಮಾರಷ್ಟು ಜನಕ್ಕೆ ಆಶ್ಯರ್ಯದ, ಕುತೂಹಲದ ವಿಷಯವಾಗಿತ್ತು. ಶ್ರೀಮಲ್ ಮನಸ್ಸಿನಲ್ಲಿ ಏನಿತ್ತು ಎಂದು ಊಹಿಸುವುದು ಎಲ್ಲರಿಗೂ ಕಷ್ಟದ ಕೆಲಸವಾಗಿತ್ತು. ಏಕೆಂದರೆ ಶ್ರೀಮಲ್ ಎಂದಿಗೂ ರಾಜಕೀಯ ಉದ್ದೇಶಗಳನ್ನು ವ್ಯಕ್ತಪಡಿಸಿಯೇ ಇರಲಿಲ್ಲ. ಎಂದೂ ಯಾರ ಪಕ್ಷವಾಗಿಯೂ ನಿಂತವನಲ್ಲ. ಯಾರೇ ಪಂಚಾಯ್ತಿಯಲ್ಲಿದ್ದರೂ - ಶ್ರೀಮಲ್ ರ ಅಭಯ ಹಸ್ತ ಅವರತ್ತ ಇರುತ್ತಿತ್ತು. ಮಹಾಜುಗ್ಗನೆಂದು ಪ್ರಸಿದ್ಧಿ ಹೊಂದಿದ್ದ ಶ್ರೀಮಲ್ ವ್ಯಕ್ತಿತ್ವದಲ್ಲಿ ಇಷ್ಟೊಂದು ಬದಲಾವಣೆಯಾದದ್ದು ಜನರಿಗೆ ಆಶ್ಚರ್ಯದ ವಿಷಯವಾಗಿತ್ತು. ದೇವರ ವಿಷಯಕ್ಕೆ ಬಂದಾಗ ಯಾರು ಹೇಗೆ ವರ್ತಿಸುವರೆಂದು ದೇವರೇ ಬಲ್ಲ!
ಶ್ರೀಮಲ್ ಕೊಟ್ಟ ಮೊದಲ ಚಂದಾ, ಅದರ ಜೊತೆಗೆ ಹಳ್ಳಿಯ ಮಿಕ್ಕ ಪ್ರಮುಖರು ಕೊಟ್ಟ ಸಣ್ಣ ಪುಟ್ಟ ಚಂದಾ ಹಣದಿಂದ ಆಲಯದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಮೊದಲಿಗೆ ಶಿವಲಿಂಗದ ಸುತ್ತಲೂ ಗೋಡೆ ಎಬ್ಬಿಸಿದರು. ಗೋಡೆ ಹಾಕುವುದಕ್ಕೆ ಬೇಕಾಗಿದ್ದ ಕೂಲಿಯವರ ಕೂಲಿಯನ್ನು 'ಜವಾಹರ್ ರೋಜ್ ಗಾರ್ ಯೋಜನಾ'ದಡಿ ಮಂಜೂರು ಮಾಡಬೇಕೆಂದು ಆಲಯ ನಿರ್ಮಾಣ ಸಮಿತಿ ಪಂಚಾಯ್ತಿಯನ್ನು ಕೇಳಿಕೊಂಡಿತು. ಈ ವಿಷಯದ ಬಗ್ಗೆ ಪಂಚಾಯ್ತಿ ಬಹಳವೇ ಅಳೆದೂ ಸುರಿದೂ - ಕಡೆಗೆ ಒಪ್ಪಿಕೊಂಡಿತು. ಒಪ್ಪಿಕೊಳ್ಳಲು ಕಾರಣ: ಹೇಗೂ ಯೋಜನಾದ ಹಣ ಬೇರೆಲ್ಲೂ ಉಪಯೋಗವಾಗುವುದಿಲ್ಲ - ಎಂದು. "ಸಮುದಾಯ ಭವನ" ನಿರ್ಮಾಣಕ್ಕೆಂದು ಹಣ ತೆಗೆದಂತೆ ಠರಾವು ಪಾಸುಮಾಡಿದ್ದೂ ಆಯಿತು. ಗೋಡೆ ಎದ್ದಕೂಡಲೇ ಮೋಹನಕಾಕಾ - ಸೂರಿಗೆ ಆರ್.ಸಿ.ಸಿ ಆಗಲೇ ಬೇಕೆಂದ. ಆದರೆ ಮಳೆಗಾಲದ ಸೂಚನೆಯೂ ಇದ್ದು, ಹಣವೂ ಮುಗಿದದ್ದರಿಂದ - ಸದ್ಯಕ್ಕೆ ತಡಿಕೆಗಳನ್ನು ಹಾಕಿ ಸೂರು ಮುಚ್ಚುವುದು - ಹಾಗೂ ಮುಂದಿನ ಘಟ್ಟದಲ್ಲಿ ಸೂರು, ಸ್ಥೂಪ, ಪ್ರಹರಿಗಳ ವಿಷಯ ಯೋಚಿಸುವುದು ಎಂದು ಆಲಯ ಸಮಿತಿ ನಿರ್ಧರಿಸಿತು.
ಮೋಹನ ಕಾಕಾ ಎಂದಿನಂತೆ ತನ್ನ ಪೂಜೆಗಳನ್ನು ಮಾಡಿಕೊಳ್ಳುತ್ತಾ ಸಿಕ್ಕ ಜನರ ಬಳಿಯೆಲ್ಲಾ ಆಲಯ ನಿರ್ಮಾಣದ ಕನಸನ್ನು ಹಂಚಿಕೊಳ್ಳುತ್ತಾ ಶಾಲೆಯ ಮಕ್ಕಳ ಬಳಿ ಪ್ರತಾಪ ಕೊಚ್ಚಿಕೊಳ್ಳುತ್ತಾ ಮುಂದುವರೆದ. ಸಿಕ್ಕ ಸಮಯದಲ್ಲಿ ರೆಡ್ಡಪ್ಪ ಮಾಸ್ತರಿಗೂ ಸಾಕಷ್ಟು ಸಹಾಯ ಮಾಡುತ್ತಿದ್ದ.
ಆಲಯ ಇಷ್ಟರ ಮಟ್ಟಿಗೆ ನಿರ್ಮಾಣವಾದದ್ದೇ - ಮೂರು ವರ್ಷಗಳಿಂದ ಬರಪೀಡಿತವಾಗಿದ್ದ ಊರಿಗೆ ಇದ್ದಕ್ಕಿದ್ದಂತೆ ಮಳೆ ಹನಿ ಬಿತ್ತು. ಈ ಬಾರಿ ಮಳೆ ಚೆನ್ನಾಗಿಯೇ ಆಗುವ ನಿರೀಕ್ಷೆ ಜನರಿಗಿತ್ತು. ಮಳೆ ಪ್ರಾರಂಭವಾದದ್ದೇ ತಡ - ಮೋಹನ ಕಾಕಾ ಖುಷಿಯಿಂದ ಕುಣಿದಾಡಿದ. ಶಾಲಾ ಮಕ್ಕಳ ಮುಂದೆಲ್ಲಾ ಸಂತೋಷದ ಭಾಷಣ ಬಿಗಿದ:
"ನೋಡಿದಿರಾ, ನಿಮ್ಮ ಹಳ್ಳಿಗಿದ್ದ ಶಾಪವನ್ನು ಹೇಗೆ ದೂರಮಾಡಿದೆ.... ಈ ಆಲಯವನ್ನು ನೀವು ಇಷ್ಟುದಿನ ಮರೆತಿದ್ದರಿಂದಲೇ ನಿಮ್ಮ ಹಳ್ಳಿಗೆ ಸಕಲ ಕಷ್ಟಗಳು ಬಂದುವು. ಈಗ ಸುವರ್ಣಯುಗಿ ಪ್ರಾರಂಭವಾಗಲಿದೆ. ಮಳೆಗಾಲದ ನಂತರ ಇದಕ್ಕೆ ಸೀಮೆಂಟಿನ ಸೂರು ಹಾಕಿಸಿಬಿಟ್ಟರೆ - ದೇವರಿಗೂ ಅವನ ದಾಸನಾದ ನನಗೂ ಖುಷಿಯಾಗುವುದು."
ಮಳೆ ಚೆನ್ನಾಗಿ ಬಂದ ಸುದ್ದಿಯನ್ನು ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಖುಷಿಯಿಂದ ಸ್ವೀಕರಿಸಿದ. ಸದ್ಯ ಈ ವರ್ಷವೊಂದ ಸುಗಮವಾಗಿ ಮುಗಿದುಬಿಟ್ಟರೆ ಸಾಕು. ಆ ನಂತರ, ಊರ ಆಡಳಿತ ಇತ್ಯಾದಿಗಳನ್ನು ಹದಕ್ಕೆ ತರಲು ಮತ್ತಷ್ಟು ಸಮಯ ಸಿಗಬಹುದು. ಆಲಯದಿಂದ ಇದ ಆಯಿತೆಂದು ಜನ ನಂಬಿದರೆ ಅದರಿಂದ ತೊಂದರೆಯೇನೂ ಇಲ್ಲ... ತಾನೂ ಎಂದೂ ನಿರ್ಮಾಣ ಕಾರ್ಯವನ್ನು ವಿರೋಧಿಸಿಲ್ಲವಲ್ಲ.....
ಶ್ರೀಪ್ರಕಾಶ್ ಚಂದ್ ಶ್ರೀಮಲ್ ಗೆ ಈ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕೋ ತಿಳಿಯದಾಯಿತು. ಒಂದು ಕಡೆ ಆಲಯ ಸಮಿತಿಯ ಅಧ್ಯಕ್ಷನಾಗಿ, ಈ ಕೆಲಸ ಮಾಡಿದ್ದರಿಂದ - ಹಾಗೂ ತಕ್ಷಣ ಮಳೆ ಬಂದದ್ದರಿಂದ ತನ್ನ ಪ್ರಾಮುಖ್ಯತೆ ಹೆಚ್ಚಾಗಬಹುದು. ಜನರು ಹೆಚ್ಚಿನ ಗೌರವ ಕೊಡಬಹುದು, ಅನ್ನಿಸಿದರೆ - ಮತ್ತೊಂದು ಕಡೆ - ಒಳ್ಳೆಯ ಬೆಳೆ ಬಂದ ವರ್ಷ ಜನ ತನ್ನ ಬಳಿ ಸಾಲಕ್ಕೆ ಬರುವುದಿಲ್ಲವಲ್ಲ ಎಂದೂ ದುಃಖವಾಯಿತು. ಈ ಎಲ್ಲಕ್ಕೂ ಒಂದೇ ಉಪಾಯವೆಂದರೆ ಕುಯಿಲಿನ ಸಮಯಕ್ಕೆ ನಿರ್ಮಾಣವನ್ನು ಅಗ್ರೆಸಿವ್ ಆಗಿ ಕೈಗೊಂಡು ಜನರ ಹೆಚ್ಚುವರಿ ಹಣ ಆಲಯಕ್ಕೆ ಬರುವಂತೆ ನೋಡಿಕೊಳ್ಳುವುದಾಗಿತ್ತು.
ಇತ್ತ ಆಲಯದ ಖ್ಯಾತಿ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಿಗೆ ಹಬ್ಬಿತು. ಮಳೆ ಬಂದ ಖುಷಿಗೆ ಜನ ಹೊಸದಾಗಿ ಕಂಡುಹಿಡಿದ ಶಿವಾಲಯದ ಫಾರ್ಮುಲಾ ಬಳಸಿ ಅಲ್ಲಿಯೇ ಪೂಜೆ ಮಾಡಿಸಲು ಪ್ರಾರಂಭಿಸಿದರು. ಆಲಯ ನಿರ್ಮಾಣ ಸಮಿತಿ ಇದನ್ನು ಗಮನಿಸಿ ಕೂಡಲೇ ಒಂದು ಹೊಸ ಕಾಣಿಕೆಯ ಪೇಟಿಯನ್ನು ಪ್ರತಿಷ್ಠಾಪನೆ ಮಾಡುವುದೆಂದು ನಿರ್ಧರಿಸಿತು. ಮೊದಲಿಗೆ ಆ ಕೆಲಸ ಮಾಡಿದರೂ - ಸಮಿತಿಯೆದುರು ಮತ್ತೊಂದು ಸಮಸ್ಯೆ ಎದ್ದು ನಿಂತಿತು.
ಬರೇ ಶಿವಲಿಂಗ ತೊಳೆದು ನಾಲ್ಕಾರು ಹೂವುಗಳನ್ನಿಟ್ಟು ಐದಾರು ಸಂಸ್ಕೃತ ಶ್ಲೋಕ ಗೊಣಗುತ್ತಿದ್ದ ಮೋಹನ ಕಾಕಾ - ಆರತಿ, ಸಹಸ್ರನಾಮಾರ್ಚನೆ ಇತ್ಯಾದಿಗಳನ್ನು ಮಾಡಲಾರದವನಾಗಿದ್ದ. ಬೇರೆ ಹಳ್ಳಿಯ ಜನರೂ ಬರತೊಡಗಿ ಅವರ ಕೋರಿಕೆಗಳೂ ಕಾಂಪ್ಲಕೇಟ್ ಆಗುತ್ತಾ ಹೋದದ್ದನ್ನು ಗಮನಿಸಿದ ಸಮಿತಿ ಈ ಬಗ್ಗೆ ಏನಾದರೂ ಮಾಡಲೇ ಬೇಕಿತ್ತು.
ಶ್ರೀಪ್ರಕಾಶ್ ಚಂದ್ ಶ್ರೀಮಲ್ ಜಡಚರ್ಲದ ರಾಮ ಮಂದಿರದ ಪೂಜಾರಪ್ಪನನ್ನು ಇಲ್ಲಿಗೆ ಕರೆಸಿ ಪೂಜೆ ಮಾಡಿಕೊಳ್ಳಲು ಕೇಳಿಕೊಳ್ಳಬೇಕೆಂಬ ಪ್ರಸ್ತಾವನೆಯನ್ನು ಸಮಿತಿಯ ಮುಂದಿಟ್ಟರು. ಸಮಿತಿಯ ಮಿಕ್ಕ ಸದಸ್ಯರೆಲ್ಲಾ ಈ ಬಗ್ಗೆ ಒಮ್ಮತದಿಂದ ಒಪ್ಪಗೆ ನೀಡಿದರೂ - ರೆಡ್ಡಪ್ಪ ಮಾಸ್ತರರಿಗೆ ಏಕೋ ಯಾವುದೂ ಸರಿಯಾಗಿ ಮುಂದುವರೆಯುತ್ತಿದೆ ಅನ್ನಿಸಲಿಲ್ಲ.
"ನಮ್ಮ ಕಾಕಾ ಇಷ್ಟು ದಿನದಿಂದ ಪೂಜೆ ಮಾಡಿಕೊಂಡು ಬರುತ್ತಾ ಇದ್ದಾನೆ. ಅವನ ಪೂಜೆಯ ಫಲವಾಗಿಯೇ ಊರಲ್ಲಿ ಮಳೆ ಬೆಳೆ ಆಗಿದೆ. ಈಗ ಇದ್ದಕ್ಕಿದ್ದ ಹಾಗೆ ಹೂರಗಿನ ಪೂಜಾರಿಯನ್ನು ಕರೆತಂದರೆ ಅವನಿಗೆ ಬೇಜಾರಾಗೋದಿಲ್ಲವೇ.. ಪಾಪ ಆಲಯ ನಿರ್ಮಾಣದ ಮೊದಲ ಮಾತನಾಡಿದವನೇ ಅವನು..."
"ಹೌದು ನೀವು ಹೇಳುವುದೇನೋ ನಿಜ. ಆದರೆ ಅದರ ಪ್ರಾಕ್ಟಿಕಲ್ ಅಂಶಗಳನ್ನ ನೋಡಿ. ಆಲಯದಲ್ಲಿ ಒಬ್ಬ ಬ್ರಾಹ್ಮಣ ನಿಂತು ಸರಿಯಾಗಿ ಪೂಜೆ ಮಾಡುತ್ತಿದ್ದಾನೆ ಅಂದ ಮೇಲೆ - ಬೇರೆ ಊರಿನವರೂ ಪೂಜೆಗೆ ಇಲ್ಲಿಗೆ ಬರುತ್ತಾರೆ.... ಒಂದಿಷ್ಟು ಚಂದಾ, ಮಂಗಳಾರತಿ ಅಂತ ಹಣ ಸೇರುತ್ತೆ. ನಿರ್ಮಾಣ ಕಾರ್ಯ ಸುಗಮವಾಗಿ ಮುಂದುವರೆಯುತ್ತದೆ." ಸಮಿತಿಯ ಇತರ ಸದಸ್ಯರ ಅಭಿಪ್ರಾಯ ಹೀಗಿತ್ತು. ಮಾಸ್ತರು ಯೋಚಿಸಿ ನೋಡಿದರು. ಎರಡು ವಿಚಾರಗಳೂ ತಮ್ಮತಮ್ಮಲ್ಲೇ ಸರಿಯಿದ್ದುವು. ಕಾಕಾನ ಕಡೆಗೂ ವಾಲದೇ -ದೇವಾಲಯದ ಕಡೆಗೂ ವಾಲದೇ ಸುಮ್ಮನೆ ಗೋಡೆಯತ್ತ ನೋಡಿದರು.
"ಧರ್ಮವೂ ಸಂತೋಷವೂ ಸಾಕಾರಗೊಳ್ಳುವುದರ ಆಧಾರ ದ್ರವ್ಯಪ್ರಾಪ್ತಿಯನ್ನೇ ಅವಲಂಬಿಸಿರುವುದು" ಎಂಬ ಕೌಟಿಲ್ಯನ ಸೂಕ್ತಿ ಕಂಡಿತು. ರೆಡ್ಡಪ್ಪ ಮಾಸ್ತರು ತಲೆಯಾಡಿಸಿದ್ದೇ ರಾಮಮಂದಿರದ ಪೂಜಾರಪ್ಪನನ್ನು ಇಲ್ಲಿ ಪೂಜೆ ಮಾಡಲು ಹಳ್ಳಿಯ ಮುಖ್ಯಸ್ಥರು ಹೋಗಿ ಕೇಳಿಕೊಂಡರು.
ಆದರೆ ಜಡಚರ್ಲದ ಪೂಜಾರಪ್ಪನದ್ದು ಒಂದೆರಡು ಸಣ್ಣ ಷರತ್ತುಗಳಿದ್ದುವು: "ನೋಡಿ, ನಾನು ಪವಿತ್ರ ಬ್ರಾಹ್ಮಣ. ನನ್ನನ್ನು ನೀವು ಪೂಜೆಗೆ ಕರೆಯುತ್ತಿದ್ದೀರಿ. ಒಳ್ಳೆಯದು - ನಿಮ್ಮ ಹಾಗೆ ನಾನು ಸಮಸಮಾಜದಲ್ಲಿ ನಂಬಿಕೆಯಿಟ್ಟವನಲ್ಲ. ಗರ್ಭಗುಡಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರೆ ಯಾರೂ ಪ್ರವೇಶಿಸಬಾರದು. ಇದಕ್ಕೆ ಒಪ್ಪಿಗೆಯಾಗುವುದಾದರೆ ನಾನು ಅಲ್ಲಿ ಪೂಜೆ ಮಾಡಲು ಸಿದ್ಧ."
"ಒಪ್ಪಿಗೆ ಶಾಸ್ತ್ರಿಗಳೇ... ಆದರೆ ನಮ್ಮ ಮೋಹನ ಪ್ರಭುದಾಸ ಮುಂಚಿನಿಂದಲೂ ಆಲಯವನ್ನು ನೋಡಿಕೊಂಡವನು. ಅವನು ನಿಮಗೆ ಒಳ ಆವರಣವನ್ನು ಶುದ್ಧವಾಗಿಟ್ಟಿರಲು ಸಹಾಯ ಮಾಡುತ್ತಾನೆ. ಅವನಿಗೆ ಮಾತ್ರ ಪ್ರವೇಶಕ್ಕೆ ನೀವು ಪರ್ಮಿಟ್ ಮಾಡಬೇಕು." ಸರಪಂಚರಂದರು.
"ಏನು ಚೌಕಾಸಿ ವ್ಯಾಪಾರ ಮಾಡ್ತಾ ಇದ್ದೀರಾ? ನಾನು ಒಂದು ಮಾತು ಹೇಳಿದರೆ ಮುಗೀತು. ಹಜಾಮರನ್ನೆಲ್ಲ ಒಳಸೇರಿಸಿಕೊಳ್ಳೋ ಸ್ಥಿತಿಗೆ ನಾನಿನ್ನೂ ಇಳಿದಿಲ್ಲ. ನಿಮಗೆ ಬೇಕಿದ್ದರೆ ನನ್ನ ಷರತ್ತಿನ ಮೇಲೆ ಬರುತ್ತೇನೆ. ಇಲ್ಲವಾದರೆ, ನನಗೆ ಸಾಕಷ್ಟು ಬೇರೆ ಕೆಲಸಗಳಿವೆ....."
"ಅಲ್ಲ ಶಾಸ್ತ್ರಿಗಳೇ, ಹಿಂದಿನಿಂದಲೂ ಭಜಂತ್ರಿಗಳಿಗೆ ಆಲಯಪ್ರವೇಶ ಇದ್ದೇ ಇತ್ತಲ್ಲ....."
"ನೋಡಿ, ಗರ್ಭಗುಡಿಗೆ ಎಂದೂ ಪ್ರವೇಶವಿರಲಿಲ್ಲ... ಏನಾದರಾಗಲಿ ನಿಮ್ಮ ಜೊತೆ ಚರ್ಚೆ ಯಾಕೆ? ಇದೇ ನನ್ನ ಕಡೆಯ ಮಾತು."
ಕೆಲವೇ ತಿಂಗಳ ಹಿಂದೆ ಹರಿಜನರು, ಗಿರಿಜನರು, ಪಶು, ಪಕ್ಷಿ, ನಾಯಿ, ನರಿಗಳೆಲ್ಲಾ ಆರಾಮವಾಗಿ ಓಡಾಡುತ್ತಿದ್ದ ಜಾಗ ಈಗ ಇದ್ದಕ್ಕಿದ್ದಂತೆ ಪವಿತ್ರವಾಗಿಬಿಟ್ಟಿತ್ತು! ಮೋಹನ ಕಾಕಾ ಈ ಅರೇಂಜ್ಮೆಂಟಿನಿಂದಾಗಿ ಆಲಯ ನಿರ್ಮಾಣದ ಕೆಲಸ ಬೇಗ ಆಗುವುದಾದರೆ ಯಾಕಾಗಬಾರದು - "ಎಷ್ಟಾದರೂ ನಾನು ಇಲ್ಲಿ ಕೆಲವೇ ದಿನಗಳ ಅತಿಥಿ. ಇಲ್ಲಿಂದ ಮುಂದಕ್ಕೆ ಪ್ರಭುವು ಆದೇಶ ಕೊಟ್ಟಲ್ಲಿಗೆ ನಾನು ಹೊರಡುವವನು. ಇಲ್ಲಿಗೆ ಖಾಯಂ ಆಗಿ ಪೂಜಾರಪ್ಪ ಬೇಕು. ಆತ ಒಪ್ಪಿದರೆ ಸರಿಯೇ ಸರಿ...." ಎನ್ನುತ್ತಾ ನಕ್ಕುಬಿಟ್ಟ.
ಇದೇ ಸಮಯ ಉಪಯೋಗಿಸಿ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಮತ್ತು ಇತರೇ ಸಮಿತಿಯವರು ಸೂರು ಚಂದಾ ವಸೂಲಿ ಕಾರ್ಯಕ್ರಮ ಹಾಕಿಕೊಂಡರು. "ಈ ಊರಿನಲ್ಲಿ ಎಲ್ಲರಿಗೂ ಸೂರು ಕೊಡುವ ದೇವರಿಗೊಂದು ಸೂರಿಲ್ಲದ್ದಕ್ಕಿಂತ ಕೆಟ್ಟ ದುರ್ಗತಿ ಮನುಷ್ಯನಿಗೆ ಬರಲು ಸಾಧ್ಯವೇ?" ಎಂಬ ಪ್ರಶ್ನೆಯನ್ನೆತ್ತಿ ಹಣ ವಸೂಲಿ ಮಾಡಲು ಪ್ರಯತ್ನಿಸಿದರು. ಅದೇ ಸಮಯಕ್ಕೆ ಫಸಲು ಬರುವವರೆಗೂ ಸೂರು ಕಾರ್ಯಕ್ರಮವನ್ನು ಮುಂದೂಡಿ ಆಲಯವನ್ನು ಇದ್ದ ಸ್ಥಿತಿಯಲ್ಲೇ ಮೇಂಟೇನ್ ಮಾಡುವುದು ಎಂದು ಸಮಿತಿ ಠರಾವು ಮಾಡಿತು.
ಹೀಗಾದರೂ ಸಮಿತಿ ಎಡಬಿಡದ ತ್ರಿವಿಕ್ರಮನಂತೆ ಹಣ ಸಂಗ್ರಹಕ್ಕಾಗಿ ಪ್ರಯತ್ನ ಪಡುತ್ತಲೇ ಇತ್ತು. ಮುಖ್ಯವಾಗಿ ಹಣ ಸಂಗ್ರಹವಾದಷ್ಟು ಸಂಗ್ರಹ ಮಾಡಿಟ್ಟಿದ್ದರೆ - ಸೂರಿಗೆ ಬೇಕಾಗಬಹುದಾದ ದೊಡ್ಡ ರಖಮಿನ ಏರ್ಪಾಟು ಒಂದೇ ಸಮಯಕ್ಕೆ ಕಚ್ಚಲಾರದು ಎಂದು ಸಮಿತಿಯ ಯೋಚನೆಯಾಗಿತ್ತು. ಹೀಗೆ ಹೆಚ್ಚಿನ ಚಟುವಟಿಕೆ ಇಲ್ಲದಾಗ್ಯೂ ಒಂದಿಷ್ಟು ಚಿಲ್ಲರೆ ಹಣವನ್ನು ಸಮಿತಿ ಸೂರಿಗೆಂದು ಸಂಗ್ರಹಮಾಡಿಟ್ಟಿತ್ತು.
*
*
*
*
ಕೆಲದಿನಗಳಮಟ್ಟಿಗೆ ಈ ವಿಷಯದಲ್ಲಿ ವಿಚಿತ್ರ ಮೌನ ಆವರಿಸಿತ್ತು. ಊರಿನವರೆಲ್ಲಾ ಈ ಬಾರಿ ಬಂದ ಮೊದಲ ಮಳೆಯಿಂದಾಗಿ ಖುಷಿಗೊಂಡು ಶೇಂಗಾ ಬಿತ್ತುವ ಕೆಲಸದಲ್ಲಿ ನಿರತರಾದರು. ಈ ಬಾರಿ ಮಳೆ ಸರಿಯಾಗಿ ಬರುವ ಲಕ್ಷಣ ಕಾಣುತ್ತಿದ್ದಂತೆ ಆಲಯದಲ್ಲಿ ಜೋರು ಪೂಜೆಗಳೂ ನಡೆದುವು. ಮಳೆ ಸ್ವಲ್ಪ ಹೆಚ್ಚಾಗಿ ಸುರಿದ ದಿನ ಹೇಗೂ ಭಕ್ತರು ಬರುವುದಿಲ್ಲವೆಂದು ಆಲಯದ ಪೂಜಾರಪ್ಪ ರಜೆ ಒಗೆಯುತ್ತಿದ್ದರು. ಆದರೆ ಒಂದು ಮಾತನ್ನಂತೂ ಪೂಜಾರಪ್ಪ ಆಲಯ ನಿರ್ಮಾಣ ಸಮಿತಿಯವರಿಗೆ ಖಂಡಿತವಾಗಿ ಹೇಳಿಬಿಟ್ಟರು: "ಈ ಸಾರಿ, ಮಳೆಗಾಲದ ನಂತರ, ನೀವು ಆಲಯಕ್ಕೆ ಆರ್.ಸಿ.ಸಿ ಮಾಡಿಸದಿದ್ದರೆ ಪೂಜೆಯ ಕಾರ್ಯ ನಡೆಯುವುದು ಕಷ್ಟ. ಹೀಗೆ ನೀರು ಸೋರಿ ಒಳಗೆಲ್ಲಾ ರಾಡಿಯಾಗುವುದಾದರೆ ನನಗೆ ಸಂಭಾಳಿಸಲು ಆಗುವುದಿಲ್ಲ." ಇದೇ ಒಳ್ಳೆಯ ಸಮಯವೆಂದು ರೆಡ್ಡಪ್ಪ ಮಾಸ್ತರು ತಮ್ಮ ವಿಚಾರವನ್ನು ಛೂ ಬಿಟ್ಟು ನೋಡಿದರು: "ನಮ್ಮ ಕಾಕಾಲಿಗೆ ಒಳಹೋಗಲು ಅನುಮತಿಯಿತ್ತರೆ, ಅವನು ಎಲ್ಲವನ್ನೂ ಶುಭ್ರವಾಗಿ ಇಡುತ್ತಾನೆ." ಆದರೆ ಇದಕ್ಕೆ ರಾಮಮಂದಿರದ ಪೂಜಾರಪ್ಪ ಸುತರಾಂ ಒಪ್ಪಲಿಲ್ಲ.
ಬೆಳೆಯ ಕುಯಿಲು ಪ್ರಾರಂಭವಾಗುವುದಕ್ಕೆ ಎರಡು ಮೂರುವಾರಗಳ ಮುಂಚೆ ಒಂದು ದಿನ ರಾಮಮಂದಿರದ ಪೂಜಾರಪ್ಪ ಇಬ್ಬರು ಹೊಸಬರನ್ನು ಕರಕೂಂಡು ಸರಪಂಚರ ಮನೆಗೆ ಬಂದರು. ಸರಪಂಚರು ಅಂದು ಯಾವುದೋ ಕಾರವಾಗಿ ಬಹಳ ಪ್ರಸನ್ನಚಿತ್ತರಾಗಿದ್ದರು. ಎಲ್ಲವೂ ತಮ್ಮ ಲೆಕ್ಕಾಚಾರದಂತೆ ನಡೆಯುತ್ತಿರುವ ಹಾಗೆ ಸರಪಂಚರಿಗನ್ನಿಸಿತ್ತು. ಅದರಲ್ಲೂ ಮುಖ್ಯವಾಗಿ ಆಲಯದ ವಿಷಯದಿಂದಾಗಿ ಊರಲ್ಲಿ ಸ್ವಲ್ಟ ತಲ್ಲಣವಾಗಬಹುದೆಂದು ಎಣಿಸಿದ್ದ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯವರಿಗೆ ಏನೂ ಆಗದೆ ಎಲ್ಲ ಶಾಂತವಾಗಿದ್ದದ್ದು ವಿಶೇಷ ಖುಷಿ ತಂದಿತ್ತು.
ಇದೀಗ ರಾಮಮಂದಿರದ ಪೂಜಾರಪ್ಪ ಕರೆತಂದ ವ್ಯಕ್ತಿಗಳನ್ನು ಹಿಂದೆ ನೋಡಿದ್ದುಂಟೇ ಎಂದು ನೆನಪುಮಾಡಿಕೊಳ್ಳಲೆತ್ನಿಸಿ, ಪರಪರ ತಲೆಕೆರೆದುಕೊಂಡರು. ಆದರೆ ಏನೂ ನೆನಪಾಗಲಿಲ್ಲ.
"ಇವರು ರಾಮಮಂದಿರ ಪುನರ್ನಿರ್ಮಾಣ ಸಮಿತಿಯವರು. ನಿಮ್ಮ ಜತೆ ಕೆಲ ವಿಷಯ ಮಾತಾಡಲು ಬಂದಿದ್ದಾರೆ." ಎಂದೂ ಪೂಜಾರಪ್ಪ ಪರಿಚಯಿಸಿದರು.
"ಏನು ಶಾಸ್ತ್ರಿಗಳೇ ನಿಮ್ಮ ಮಂದಿರ ಚೆನ್ನಾಗಿಯೇ ಇದೆಯಲ್ಲಾ.. ಪುನರ್ನಿರ್ಮಾಣದ ಪ್ರಶ್ನೆ ಎಲ್ಲಿಂದ ಬಂತು? ಇದೇನು ಇದ್ದಕ್ಕಿದ್ದಂತೆ ... ಎಲ್ಲೆಲ್ಲೂ ಮಂದಿರದ ಮಾತೇನು?"
"ಅಲ್ಲಲ್ಲ ಸರಪಂಚರೇ ಇವರು ಪ್ರತಿನಿಧಿಸುತ್ತಿರುವುದು ಅಯೋಧ್ಯೆಯ ರಾಮಮಂದಿರದ ಪುನರ್ನಿರ್ಮಣ ಸಮಿತಿಯನ್ನ."
"ಓಹೋ, ಹಾಗೇನು? ಹೇಳಿ ಸ್ವಾಮಿ... ಎಲ್ಲ ಬಿಟ್ಟು ನಮ್ಮ ಹಳ್ಳಿಗೆ - ಅದೂ ನನ್ನ ಹತ್ತಿರ ಯಾಕೆ ಬಂದಿದ್ದೀರಿ? ನನಗೂ ನಿಮ್ಮ ರಾಜಕೀಯ ಐಡಿಯಾಲಜಿಗೂ ಯಾವುದೇ ದೂರದ ಸಂಬಂಧವೂ ಇಲ್ಲ... ಹೀಗಂತ ಗೊತ್ತಿದ್ದೂ ನನ್ನ ಹತ್ತಿರ ಬಂದಿದ್ದೀರಿ ಅಂದರೆ, ನನಗೆ ಆಶ್ಚರ್ಯ ಆಗ್ತಾ ಇದೆ." ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಹುಬ್ಬುಗಂಟುಕ್ಕಿಯೇ ಹೇಳಿದರು.
"ನಿಮ್ಮ ಹತ್ತಿರ ಬರೋದಕ್ಕೆ ಕಾರಣವಿದೆ ಸರ್... ನೀವು ಊರಲ್ಲಿ ನಡೆಸುತ್ತಿರೋ ಆಲಯ ಪುನರ್ನಿರ್ಮಾಣದ ಕೆಲಸ ಸುತ್ತಮುತ್ತಲ ಏರಿಯಾದಲ್ಲೆಲ್ಲ ಪ್ರಸಿದ್ಧಿಯಾಗಿದೆ. ಹೀಗಾಗಿ ಅಯೋಧ್ಯೆಯ ಮಾತು ಬಂದಾಗ ಅಲ್ಲಿಗೆ ಕೊಡೋದರಲ್ಲೂ ನಿಮ್ಮ ಹಳ್ಳಿ ಮುಂಚೂಣಿಯಲ್ಲಿದ್ದರೆ, ನಿಮಗೂ, ನೀವು ನಾಯಕರಾಗಿರುವ ಹಳ್ಳಿಗೂ ಕೀರ್ತಿ ಬರುವುದಿಲ್ಲವೇ?"
"ಓಹೋ..... ಹೀಗೆ ಯೋಚನೆ ಮಾಡುತ್ತಿದ್ದೀರೋ?... ಹಾಗಾದರೆ ಎರಡು ವಿಷಯ ನೇರವಾಗಿ ಹೇಳಿಬಿಡುವೆ. ಒಂದು: ಆಲಯ ಪುನರ್ನಿರ್ಮಾಣಕ್ಕೆ ಒಂದು ಬೇರೆಯೇ ಸಮಿತಿಯಿದೆ. ಅದರಲ್ಲಿ ನಾನು ಯಾವ ಪಾತ್ರವನ್ನೂ ವಹಿಸಿಲ್ಲ. ಎರಡು: ನಾವುಗಳು ನಮ್ಮ ಹಳ್ಳಿಯ ಆಲಯ ಪುನರ್ನಿರ್ಮಾಣವನ್ನು ದೂಡ್ಡ ಇಷ್ಯೂ ಮಾಡಿಲ್ಲ. ಅಯೋಧ್ಯೆಗೂ ನಮ್ಮ ಹಳ್ಳಿಗೂ ಬೆಸುಗೆ ಹಾಕಬೇಡಿ. ರಾಜಕೀಯವಾಗಿ ನೀವು ಮಾಡಹೊರಟಿರೋ ಕೆಲಸಕ್ಕೆ ನನ್ನ ಸಿದ್ಧಾಂತ ಒಪ್ಪುವುದಿಲ್ಲ. ಹೀಗಾಗಿ ಈ ರಾಡಿಯಲ್ಲಿ ನನ್ನನ್ನ ಎಳೆದುಕೊಳ್ಳೋ ದುಷ್ಟತನವನ್ನ ಮಾತ್ರ ಮಾಡಬೇಡಿ. ಈ ವಿಷಯ ಚರ್ಚಿಸಬೇಕಾದರೆ - ನೀವು ಶ್ರೀಪ್ರಕಾಶ್ ಚಂದ್ ಶ್ರೀಮಲ್ ಅವರನ್ನೂ ಕಾಣಬಹುದು. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ."
ಅಪ್ಪಲರೆಡ್ಡಿ ಸ್ವಲ್ಪ ರೇಗಾಡಿ, ಒಳಗಒಳಗೇ ಬೇಯುತ್ತಾ ಬಂದವರನ್ನು ಓಡಿಸಿಬಿಟ್ಟ. ಅವರುಗಳು ಸರಪಂಚರ ಮಾತನ್ನು ಸ್ವಲ್ಪ ಗಂಭೀರವಾಗಿಯೇ ತೆಗೆದುಕೊಂಡು ಶ್ರೀಮಲ್ ನನ್ನು ನೋಡಲು ಹೋದರೆಂದು ನಂತರ ತಿಳಿದುಬಂತು. ಆದರೆ ಆ ನಂತರ ತಿಳಿದ ಅದಕ್ಕಿಂತ ಮುಖ್ಯವಾದ ವಿಷಯವೆಂದರೆ ಜಡಚರ್ಲದ ರಾಮಮಂದಿರದ ಪೂಜಾರಪ್ಪ ಕಾರ್ ಸೇವಾಕ್ಕೆಂದು ಅಯೋಧ್ಯೆಗೆ ಹೊರಟುನಿಂತಿದ್ದಾರೆಂಬ ವಿಷಯ.
ರಾಮಮಂದಿರದ ಪೂಜಾರಪ್ಪ ಅಯೋಧ್ಯೆಗೆ ಹೊರಟುನಿಂತದ್ದು ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಗೆ ಬಿಸಿ ತುಪ್ಪದಂತಹ ವಿಷಯವಾಯಿತು. ಒಂದು ರೀತಿಯಲ್ಲಿ ಅಡ್ಡಗೋಡೆಯಮೇಲೆ ಕೂತಿದ್ದ ಅಪ್ಪಲರೆಡ್ಡಿಗೆ ಯಾವುದಾದರೊಂದು ನಿಲುವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಲಿತ್ತು. ಎರಡೇ ದಿನಗಳಲ್ಲಿ ಹಳ್ಳಿಯಲ್ಲಿ ಇದು ಮನೆಮಾತಾಗಿಬಿಟ್ಟಿತ್ತು. ಒಂದು ಥರದಲ್ಲಿ ಪೂಜಾರಪ್ಪ ತಮ್ಮ ಊರಿನವನೇ ಆಗಿದ್ದರಿಂದ ಇದು ಹಳ್ಳಿಯ ಹೆಮ್ಮೆಯ ಸವಾಲಾಯಿತು. ಹೀಗಾಗಿ ಆ ಯುವಕರು ಹೇಳಿದ್ದನ್ನು ವಿರೋಧಿಸಿದೇ ಕೈಲಾದಷ್ಟು ಸಹಾಯ ಮಾಡುವುದು ಸರಿ ಎಂದೂ ಒಂದು ಹಂತದಲ್ಲಿ ಅನ್ನಿಸಿತ್ತು.
ವಿಷಯ ಹೀಗಿರುವಾಗ, ಈ ಬಗ್ಗೆ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಏನು ಅಭಿಪ್ರಾಯ ಹೊಂದಿರುವನೋ ಎಂಬ ಕುತೂಹಲವುಂಟಾಗಿ, ಅಪ್ಪಲರೆಡ್ಡಿಯವರು ಆತನನ್ನು ಕರೆಸಿದರು.
"ನೋಡಿ, ನಮ್ಮ ಪೂಜಾರಪ್ಪನೇ ಈ ಕೆಲಸಕ್ಕೆ ಸ್ವತಃ ಹೋಗಬೇಕೆಂದು ನಿಂತಿರುವಾಗ ನಾವು ಮಾಡುವುದಾದರೂ ಏನು? ನಾವು ಬೇಡ ಅನ್ನೋದರಲ್ಲಿ ಅರ್ಥವಿಲ್ಲ.... ಕುಯಿಲಿನ ಸಮಯಕ್ಕೆ ಹೇಗೂ ಆಲಯವನ್ನು ಮುಚ್ಚಲೇ ಬೇಕಾಗುತ್ತೆ. ಈ ಮಧ್ಯೆ ಭಜಂತ್ರಿ ಪೂಜೆ ಮಾಡುತ್ತಾನೆಂದರೆ ಯಾರೂ ಒಪ್ಪೋದೂ ಇಲ್ಲ. ಇದನ್ನೆಲ್ಲ ನೋಡಿದರೆ ನಾವು ಈ ವರ್ಷ ನಮ್ಮ ಪ್ರೋಗ್ರಾಮನ್ನ ಕೈಬಿಟ್ಟು ಪೂಜಾರಪ್ಪನ ಗುಡ್ ವಿಲ್ ಪಡೆಯೋದೇ ಒಳ್ಳೇದು. ಲಾಂಗ್ ಟರ್ಮ್ ದೃಷ್ಟಿಯಿಂದ ನಮ್ಮ ಹಳ್ಳಿಗೆ ಪೂಜಾರಪ್ಪ ಮುಖ್ಯ ಆಗುತ್ತಾನೆ. ಈ ಭಜಂತ್ರಿ ಅನ್ನುವ ಭೈರಾಗಿಯ ಭರವಸೆಯಲ್ಲಿ ನಾವು ಜೀವಿಸುವುದಕ್ಕಾಗುವುದಿಲ್ಲ ಅಂತ ಈ ಬಡವನ ಅಭಿಪ್ರಾಯ."
ರಾಮಮಂದಿರದ ಪೂಜಾರಪ್ಪನನ್ನು ತಡೆಯುವುದು ಹೇಗೂ ಸಾಧ್ಯವಿರಲಿಲ್ಲ. ಹೀಗಾಗಿ ಕಳಿಸಿಕೊಟ್ಟಂತೆ ಮಾಡುವುದೇ ಸರಿ ಅಂತ ಅಪ್ಪಲರೆಡ್ಡಿಗೂ ಅನ್ನಿಸಿತು. ಜತೆಗೆ ಚುನಾವಣೆ ಹತ್ತಿರದಲ್ಲೇ ಇದ್ದುದರಿಂದ ಪೂಜಾರಪ್ಪನನ್ನು ಇಲ್ಲಿ ಉಳಿಸಿಕೊಂಡರೆ, ಅಯೋಧ್ಯೆಯ ಅಜೆಂಡಾ ಸಹ ಹಳ್ಳಿಯ ರಾಜಕೀಯಕ್ಕೆ ಸೇರಿಕೊಳ್ಳುವ ಸಾಧ್ಯತೆಯಿತ್ತು. ಅದಕ್ಕೂ ಇಲ್ಲಿಯ ಆಲಯಕ್ಕೂ ಇಲ್ಲದ ಸಂಬಂಧಗಳನ್ನು ಹಾಕಿ, ಹಳ್ಳಿಯ ಸಮತೋಲನವನ್ನು ಏರುಪೇರು ಮಾಡಲು ಆ ಯುವಕರು ಹೇಸುವವರಲ್ಲ. ಒಂದು ಥರದಲ್ಲಿ ಅವರ ನ್ಯೂಸೆನ್ಸ್ ವ್ಯಾಲ್ಯೂವನ್ನು ಕಡಿಮೆ ಮಾಡಲಾದರೂ ಈ ಬಗ್ಗೆ ಪೂಜಾರಪ್ಪನನ್ನು ಸಪೋರ್ಟ್ ಮಾಡುವುದು ಅವಶ್ಯ ಅನ್ನಿಸಿತು. ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲಿ ಮಂದಿರದ ರಾಜಕೀಯ ಪಸರಿಸುತ್ತರುವ ಘಟ್ಟದಲ್ಲಿ ಶುದ್ಧವಾಗಿದ್ದ ಈ ರಾಜಕೀಯ ತನ್ನ ಹಳ್ಳಿಗೆ ಇದು ಬರುವುದು ರೆಡ್ಡಿಗೆ ಖಂಡಿತವಾಗಿಯೂ ಇಷ್ಟವಿರಲಿಲ್ಲ.
ಅದು ಅಪ್ಪಲರೆಡ್ಡಿಯ ಖಾಸಗೀ ಅಭಿಪ್ರಾಯವಾದರೆ, ಇತ್ತ - ಈಗ ಹೀಗೆ ಎದ್ದು ನಿಂತಿರುವ ಅಯೋಧ್ಯೆಯ ಪ್ರಶ್ನೆಗೆ ಹಳ್ಳಿಯ ಕಡೆಯಿಂದ ಯಾವರೀತಿಯ ಯೋಗದಾನ ಹೋಗಬೇಕು ಎಂದು ಪಂಚಾಯಿತಿ, ಆಲಯ ಪುನರ್ನಿರ್ಮಾಣ ಸಮಿತಿಗಳಲ್ಲಿ ಚರ್ಚೆ ಪ್ರಾರಂಭವಾಯಿತು. ಏನು ಮಾಡಬಹುದೆಂಬ ಚರ್ಚೆಯಲ್ಲಿ ಹೊರಬಂದದ್ದೆಂದರೆ - "ನಮ್ಮ ಹಳ್ಳಿಯಿಂದ ಸಾಧ್ಯವಾದಷ್ಟು ಚಂದಾ ವಸೂಲಿ ಮಾಡಿ ಅಯೋಧ್ಯೆಗೆ ಕಳಿಸಬೇಕು - ಜಿಲ್ಲೆಯಲ್ಲೇ ಅತ್ಯಧಿಕ ಚಂದಾ ನಮ್ಮ ಹಳ್ಳಿಯಿಂದಲೇ ಹೋದರೆ, ಅದಕ್ಕಿಂತ ಹೆಮ್ಮೆಯ ವಿಚಾರ ಏನಿದ್ದೀತು?" ಎಂಬ ವಿಚಾರ ಮತ್ತು "ಅಯೋಧ್ಯೆಗೆ ಹೋಗಲಿರುವ ಕಾರ್ ಸೇವಕರಿಗೆ ಬೆಚ್ಚನೆಯ ಬಟ್ಟೆ, ಪ್ರಯಾಣಕ್ಕ, ದಾರಿ ಖರ್ಚಿಗೆ ದುಡ್ಡು ಕೊಡಬೇಕು" ಎಂಬ ವಿಚಾರ ಹೊರಬಂತು. ಹೋದ ವರ್ಷ ನಮ್ಮ ಹಳ್ಳಿಯಿಂದ ಅಯೋಧ್ಯೆಗೆ ಒಂದು ಗಾಡಿ ಇಟ್ಟಿಗೆ ಹೋಗಿತ್ತು. ಅದರ ಗತಿಯೇನಾಯಿತೆಂದು ಯಾರಿಗೂ ಗೊತ್ತಾಗಲಿಲ್ಲವಾದರೂ, ಈ ಬಾರಿ ಮಾತ್ರ ಇಟ್ಟಿಗೆಯಂತಹ ಭಾರಿ ವಸ್ತು ಬೇಡ, ಬದಲಿಗೆ ಮನೆಯಲ್ಲಿರುವ ಪ್ರತಿ ವ್ಯಕ್ತಿಗೆ ಒಂದು ರೂಪಾಯಿಯಂತೆ ಚಂದಾ ಕೊಟ್ಟು ಬಿಡಿ ಸಾಕು ಅಂತ ಅಯೋಧ್ಯಾ ಮಂದಿರ ನಿರ್ಮಾಣದ ಪ್ರತಿನಿಧಿಗಳು ಕೇಳಿಕೊಂಡಿದ್ದರು. ಹೀಗಾಗಿ ಈ ಬಾರಿ ಅಯೋಧ್ಯೆಗೆ ಹಣ ಬಿಟ್ಟು ಬೇರೇನೂ ಕಳಿಸುವಂತಿರಲಿಲಿ.
ಶ್ರೀಪ್ರಕಾಶ್ ಚಂದೇ ಶ್ರೀಮಲ್ ಗೆ ಹೊಸ ಚಂದಾ ಎತ್ತುವುದೂ ಒಂದು ಒಳ್ಳೆಯ ಕೆಲಸವಾಗಿ ಕಾಣಿಸಿತು. ಸಹಕಾರ ಸಂಘದ ಸಾಲ ತೀರಿಸಲು ಜನರ ಬಳಿ ಎಷ್ಟರ ಮಟ್ಟಿಗೆ ಹಣ ಕಡಿಮೆ ಆದರೆ ಅಷ್ಟೇ ಒಳ್ಳೆಯದಿತ್ತು. ಅಪ್ಪಲರೆಡ್ಡಿಗೂ ಊರಿನ ಆಲಯ, ಮತ್ತು ಅದರ ಜೊತೆ ಜೊತೆಗೆ ಬಂದ ಅಯೋಧ್ಯೆಯ ಮಂದಿರದಂತಹ ನಾಜೂಕು ವಿಷಯಗಳು ಅಜೆಂಡಾದಿಂದ ಎಷ್ಟು ಬೇಗ ಹೊರಹೋದರೆ ಅಷ್ಟು ಒಳ್ಳೆಯದು ಅನ್ನಿಸಿತು. ಎಂದಿನಂತೆ ಸಮಾಜವಾದದ ಬಗ್ಗೆ ಮಾತಾಡಿ ಚುನುವಣೆ ಗೆಲ್ಲಲ್ಲು ಸಾಧ್ಯವಾದರೆ - ಅದಕ್ಕಿಂತ ಸುಖ ಬೇರೇನು ಬೇಕು ಎಂದು ಯೋಚಿಸುತ್ತಾ ಕೈಚೆಲ್ಲಿ ಕೂತ.
ಅತ್ತ ಆಲಯ ಪುನರ್ನಿರ್ಮಾಣ ಸಮಿತಿಯವರು ಅಯೋಧ್ಯೆಯ ಬಗ್ಗೆ ನಿಲುವು ತಾಳಲು ಸಭೆ ಸೇರಿದರು. ಸಭೆಗೆ ಮುನ್ನ ಶ್ರೀಮಲ್ ಒಮ್ಮೆ ಅಪ್ಪಲರೆಡ್ಡಿಯವರನ್ನು ಕಂಡು ಬಂದ. ಅಂದಿನವರೆಗೆ ದೇನಸ್ಥಾನದ ಸೂರಿಗೆಂದು ಸುಮಾರು ಹದಿನೇಳು ಸಾವಿರ ರೂಪಾಯಿಗಳು ಚಂದಾ ರೂಪದಲ್ಲಿ ಶೇಖರಿಸಲಾಗಿತ್ತು. ಈ ಹಣದಲ್ಲಿ ಹೇಗೂ ಆಲಯಕ್ಕೊಂದು ಸೂರು ಹಾಕುವುದು ಸಾಧ್ಯವಿದ್ದಿಲ್ಲ. ಅದಕ್ಕೇ ಈ ಹಣವನ್ನು ಚಂದಾ ಎಂದು ಅಯೋಧ್ಯೆಗೆ ಕಳಿಸಿಬಿಡೋಣವೇ ಎಂದು ಸಮಿತಿಯ ಸದಸ್ಯರೊಬ್ಬರು ಪ್ರಸ್ತಾವಿಸಿದರು. "ಅದೇನೋ ಸರಿ, ಆದರೆ ಕಾಕಾ ಏನಾದರೂ ಕಾರ್ ಸೇವಾಗೆ ಹೋಗ್ತಾನಾಂತ ಮೊದಲು ಕೇಳಿಕೊಂಡು ಬಿಡಿ.. ಕಾಕಾ ಹೋಗೋದಾದರೆ, ಆಲಯ ಸಮಿತಿಯ ವತಿಯಿಂದ ಅವನನ್ನು ಅಯೋಧ್ಯೆಗೆ ಕಳಿಸಬಹುದು.." ಎಂದು ಮತ್ತೂಬ್ಬ ಸದಸ್ಯರು ಸೂಚಿಸಿದರು. "ಹೌದು, ಒಮ್ಮೆ ಆ ಭಜಂತ್ರಿಯನ್ನ ಕೇಳಿಬಿಡೋದು ಒಳ್ಳೇದು" ಅಂತ ಶ್ರೀಮಲ್ ಕೂಡಾ ಧ್ವನಿ ಸೇರಿಸಿದ.
ಕಾಕಾನನ್ನು ಸಭೆಯೆದುರಿಗೆ ಕರೆಸಲಾಯಿತು. ಕಾಕಾ ಭಾಷಣ ಬಿಗಿಯುತ್ತಲೇ ಬಂದ. ಬಂದು ಕೂಡಲೇ ಅಯೋಧ್ಯೆಯ ವಿಚಾರ ಅವನಿಗೆ ಹೇಳಿದರು. ಅಂದಿನವರೆಗೂ ಶಾಂತನಾಗಿ ಎಲ್ಲವನ್ನೂ ನೋಡುತ್ತಾ ಸುಮ್ಮನಿರುತ್ತಿದ್ದ ಕಾಕಾ ಅಂದೇಕೋ ವಿಪರೀತ ಸಿಡಿದುಬಿದ್ದ. ಹುಚ್ಚಾಪಟ್ಟೆ ರೇಗಾಡಿದ:
"ಎಲ್ಲರೂ ಸೂಳೇಮಕ್ಕಳು.. ಕಳ್ಳ ಸೂಳೆಮಕ್ಕಳು.. ಪ್ರಭುವಿನ ಆದೇಶ ಹೊತ್ತು ಇಲ್ಲಿ ಆಲಯ ನಿರ್ಮಾಣಕ್ಕೆಂದು ನಾನು ಬಂದಿದ್ದರೆ - ನನ್ನನ್ನು ಇಲ್ಲಿಂದ ಎಲ್ಲೋ ದೂರದ ಊರಿಗೆ ಸಾಗುಹಾಕಲು ಪಿತೂರಿ ನಡೆಸಿದ್ದೀರಾ? ನಾನು ಬಂದ ದಿನವೇ ಹೇಳಿರುವೆ: ನಾನು ಪ್ರಭುವಿನ ಆದೇಶದ ಮೇರೆಗೆ ನಡೆಯುವವನು. ಎರಡು ವರ್ಷಗಳ ಕಾಲದಲ್ಲಿ ಇಲ್ಲಿನ ಮಂದಿರ ನಿರ್ಮಾಣವಾಗದಿದ್ದರೆ - ಶಾಪ ಹಾಕಿ ಹೋಗುತ್ತೇನೆ ಎಂದೂ ಹೇಳಿದ್ದೇನೆ. ಈಗ ಮತ್ತೊಮ್ಮೆ ಹೇಳುವೆ - ಅಲ್ಲೆಲ್ಲೋ ಅಯೋಧ್ಯೆಗೆ ಹೋಗಲು ನನಗೆ ಪ್ರಭುವಿನ ಆದೇಶವಿಲ್ಲ. ನೀವುಗಳು ಎಂದಿಗೂ ಉದ್ಧಾರ ಆಗುವವರಲ್ಲ. ನಾನು ಒಂದಲ್ಲ ಒಂದು ದಿನ ಈ ಊರಿಗೆ ಶಾಪ ಹಾಕುವವನೇ."
ರೆಡ್ಡಪ್ಪ ಮಾಸ್ತರು ಕಾಕಾನ ಈ ರೌದ್ರಾವತಾರವನ್ನು ನೋಡಿ ಏನೂ ತೋರದವರಾಗಿ ಗೋಡೆಯತ್ತ ನೋಡಿದರು. "ಯಾರು ಬೇರೆಯವರಿಗಾಗಿ ಜೀವಿಸುವರೋ, ಅವರೇ ನಿಜವಾದ ಮಾನವರು" ಎಂಬ ಸೂಕ್ತಿ ಕಂಡಿತು. ಅದು ಕಂಡದ್ದೇ ಮಾಸ್ತರು ಮಾತು ಪ್ರಾರಂಭಿಸಿದರು - "ನೋಡಿ, ಮೇಲೆ ಬರೆದಿರೋ ಸೂಕ್ತಯಯ ಹಾಗೆ ತ್ಯಾಗ ಜೀವನ ನಡೆಸಿಕೊಂಡು ಬರುತ್ತಾ ಇರೋ ನಿಜ ಮಾನವ ಈ ಕಾಕಾ. ಅವನು ಹೇಳುವುದರಲ್ಲಿ ನಿಜದ ಅಂಶ ಇದೆ. ಎಂದೂ ಕಾಣಲಾಗದ ದೂರದ ಮಂದಿರಕ್ಕೆ ನಾವುಗಳು ಕಾಣಿಕೆ ಕಳಿಸೋದಕ್ಕಿಂತ ದಿವವೂ ಪೂಜಿಸೋ ಈ ದೇವರಿಗೊಂದು ಗತಿ ತೋರಿಸುವುದು ಒಳ್ಳೆಯದಲ್ಲವೇ? ಕಾಕಾನ ಮನಸ್ಸಿಗೆ ಇಷ್ಟು ನೋವು ಮಾಡಿ ಅವನ ಶಾಪ ಸ್ವೀಕರಿಸುವ ಸ್ಥಿತಿಗೆ ನಾವ್ಯಾಕೆ ಇಳೀಬೇಕು?"
"ಓ ಮಾಸ್ತರೇ..." ಕಾಕಾ ಗುಡುಗಿದ - "ನಿಮ್ಮ ಹಳ್ಳಿಯ ಕಥೆ ಚೆನ್ನಾಗಿ ಅರಿತವನು ನಾನು. ನೀವೂ ಈಗ ಅಲ್ಲಿ ಮೇಲೆ ಓದಿ ಹೇಳಿದ ಸೂಕ್ತಿ ಈ ಹಳ್ಳಿಯ ಹೆಂಗಸರಿಗೆ ಮಾತ್ರ ವರ್ತಿಸುತ್ತದೆ ಅಷ್ಟೇ. ಇಲ್ಲಿನ ಹೆಂಗಸರು ಬೇರೆಯವರಿಗಾಗಿಯೇ ಜೀವಿಸುವವರು. ಇಂಥ ಹಳ್ಳಿಯ ನಾಮರ್ದ ಗಂಡಸರಿಂದ ಗಂಡಸ್ತನ ನಿರೀಕ್ಷಿಸುವುದೇ ನಾನು ಮಾಡಿದ ತಪ್ಪು. ನೀವು ನಿಮ್ಮ ಕರ್ಮಕ್ಕನುಸಾರವಾಗಿ ಏನಾದರೂ ಮಾಡಿಕೊಳ್ಳಿ." ಎಂದು ಬುಸುಗುಡುತ್ತಾ ಅಲ್ಲಿಂದ ಹೊರಟುಬಿಟ್ಟ.
ಅವನು ಆ ಕಡೆ ಹೋದಂತೆ - ಸಮಿತಿಯ ಸದಸ್ಯರು ಏನೂ ಆಗಿಲ್ಲವೆಂಬಂತೆ ಮುಂದಿನ ಚರ್ಚೆಗೆ ಇಳಿದರು:
"ಹಾಗಾದರೆ ಈ ಭಜಂತ್ರಿ ಅಯೋಧ್ಯೆಗೆ ಹೋಗೋದಿಲ್ಲಾಂತ ಆಯಿತು. ಸರಿ ಹಾಗಾದರೆ... ನಾವು ನಮ್ಮ ಹಳ್ಳಿಯ ವತಿಯಿಂದ ರಾಮಮಂದಿರದ ಶಾಸ್ತ್ರಿಗಳನ್ನು ಕಳಿಸಿಕೊಡೋಣ. ಅವರ ಜೊತೆಗೆ ಆಲಯಕ್ಕೆಂದು ಸಂಗ್ರಹಿಸಿರೋ 17000 ರೂಪಾಯಿ ಚಂದಾ ಹಣವನ್ನೂ ಅಯೋಧ್ಯಗೆ ಕಳಿಸೋಣ. ಎಷ್ಟೇ ಆದರೂ ಆ ದೇವಸ್ಥಾನ ರಾಷ್ಟ್ರ ಮಟ್ಟದ ಖ್ಯಾತಿ ಗಳಿಸುವುದಲ್ಲವೇ. ಅದರಲ್ಲಿ ನಮ್ಮ ಅಳಿಲ ಕಾಣಿಕೆ ಇರುವುದೂ ಒಳ್ಳೆಯದು."
ಇಷ್ಟು ಮಾತಾದಾಗ ಪಾಪ, ರೆಡ್ಡಪ್ಪ ಮಾಸ್ತರಿಗೆ ಯಾಕೋ ತುಂಬಾ ಸಿಟ್ಟು ಬಂತು. ಸಮಿತಿಯ ಬೈಠಕ್ ನಿಂದ ಎದ್ದು ಹೋಗಬೇಕು ಅನ್ನಸಿದರೂ ಯಾಕೋ ದ್ವಂದ್ವ ತಡೆಯಿತು. ಇವರುಗಳು ಕಡೆಗೆ ಏನು ಠರಾವು ಮಾಡುತ್ತಾರೋ ನೋಡೇಬಿಡೋಣವೆಂದು ಅಲ್ಲೇ ಕೂತರು.
ಚರ್ಚೆ ಹೆಚ್ಚು ಹೊತ್ತು ಮುಂದುವರೆಯಲಿಲ್ಲ. ರಾಮಮಂದಿರದ ಶಾಸ್ತ್ರಿಗಳಿಗೆ ಒಂದು ಸಣ್ಣ ಸನ್ಮಾನ ಕಾರ್ಯಕ್ರಮ ಮಾಡಿ ಎಲ್ಲ ಹಣವನ್ನೂ ಅವರಿಗೆ ಕೊಡುವುದು - ದಾರಿ ಖರ್ಚು ನೋಡಿಕೊಂಡು ಮಿಕ್ಕ ರಖಮನ್ನು ಅವರು ಅಯೋಧ್ಯೆಯಲ್ಲಿ ಕಾಣಿಕೆಯಾಗಿ ಕೊಟ್ಟು ಬರುವುದೆಂದು ಠರಾವು ಆಯಿತು. ಜತೆಜತೆಗೆ, ಊರ ಶಿವಾಲಯದ ಕೆಲಸವನ್ನು ಒಂದು ವರ್ಷದ ಮಟ್ಟಿಗೆ ಸ್ಥಗಿತಗೊಳಿಸುವುದು, ಹಾಗೂ ಶಾಸ್ತ್ರಿಗಳು ಅಯೋಧ್ಯೆಗೆ ಹೊರಡುವವರೆಗೂ ಏನೇ ಚಂದಾ ಸೇರಿದರೂ, ಅವರೊಡನೆ ಕಳಿಸಿಕೊಡುವುದೆಂದೂ ಠರಾವು ಪಾಸಾಯಿತು.
ರೆಡ್ಡಪ್ಪ ಮಾಸ್ತರಿಗೆ ಕಡೆಗೂ ತಡೆಯಲು ಸಾಧ್ಯವಾಗದೇ ಬಾಯು ತೆರೆದರು:
"ಕನಿಷ್ಠ ಸನ್ಮಾನ ಕಾರ್ಯಕ್ರಮದಲ್ಲಾದರೂ ನಮ್ಮ ಕಾಕಾನಿಗೆ ಒಂದಿಷ್ಟು ಗೌರವ ಕೊಟ್ಟು ಒಂದು ಜೊತೆ ಹೊಸ ಬಟ್ಟೆ ಕೊಡಲು ಸಾಧ್ಯವೇ..... ಎಷ್ಟೆಂದರೂ ಈ ಎಲ್ಲಕ್ಕೂ ಮೂಲ ಕಾರಣಕರ್ತ ಅವನೇ ತಾನೇ?"
ಈ ಬಗ್ಗೆ ಒಂದಿಷ್ಟು ಚರ್ಚೆ ಆಯಿತಾದರೂ ಮಾಸ್ತರ ಪ್ರಸ್ತಾಪಕ್ಕೆ ಒಪ್ಪಿಗೆ ದೊರೆಯಿತು. ನಾಲ್ಕು ದಿನಗಳ ನಂತರ ಸನ್ಮಾನ ಮಾಡುವುದೆಂದೂ ಇದಕ್ಕೆ ಹೈದರಾಬಾದಿನಿಂದ ಸನಾತನ ಸ್ವಾಮಿಗಳನ್ನು ಮುಖ್ಯ ಅತಿಥಿಯಾಗಿ ಕರೆಸಬೇಕೆಂದೂ ತೀರ್ಮಾನ ಮಾಡಲಾಯಿತು.
ನಾಲ್ಕು ದಿನಗಳ ನಂತರ ಸನ್ಮಾನ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಆದರೆ ರೆಡ್ಡಪ್ಪ ಮಾಸ್ತರಿಗೆ ತುಂಬಾ ಬೇಸರವಾಗುವ ಘಟನೆಯೂ ಅಂದೇ ನಡೆಯಲಿತ್ತು. ವೇದಿಕೆಯ ಮೇಲಿಂದ ನಾಲ್ಕಾರು ಬಾರಿ ಮೋಹನ ಪ್ರಭುದಾಸ ಭಜಂತ್ರಿಯ ಹೆಸರು ಕರೆದರೂ ಅವನ ಪತ್ತೆಯಿರಲಿಲ್ಲ. ರಾಮಮಂದಿರದ ಪೂಜಾರಪ್ಪನಿಗೆ ಒಂದೇ ವೇದಿಕೆಯ ಮೇಲೆ ತನಗೂ ಭಜಂತ್ರಿಗೂ ಸನ್ಮಾನ ಆಗಲಿಲ್ಲವಲ್ಲ ಎಂದು ಒಳಗೊಳಗೇ ಸಮಾಧಾನವಾಯಿತು. ಕಾರ್ಯಕ್ರಮ ಮುಗಿದ ಮೇಲೆ ಸಣ್ಣ ಹುಡುಗನೊಬ್ಬ ಬಂದು ತಾನು ಕಾಕಾನನ್ನು ಮುಂಜಾನೆ ಅಷ್ಟು ಹೊತ್ತಿಗೇ ಊರಿಗೆಲ್ಲ ಶಾಪ ಹಾಕುತ್ತಾ ದಕ್ಷಿಣದ ದಿಕ್ಕಿನಲ್ಲಿ ನಡೆದದ್ದನ್ನು ಕಂಡೆ ಎಂದು ವರದಿ ಮಾಡಿದ. ಬಯಲಿಗೆ ಕೂತದ್ದರಿಂದ ಕಾಕಾನನ್ನು ಮಾತನಾಡಿಸಲೂ ಅವನಿಗೆ ಸಾಧ್ಯ ಆಗಲಿಲ್ಲವಂತೆ.
ಅಂದು ರಾತ್ರೆ ವಿಪರೀತವಾಗಿ ಮಳೆ ಸುರಿದು ಆಲಯದ ತಡಿಕೆ, ಹಾಗೂ ಹೊಸಗೋಡೆ ಕುಸಿದು ಬಿತ್ತು. ಈ ಸುದ್ದಿ ಕೇಳಿ ಅಪ್ಪಲರೆಡ್ಡಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಯಿತಾದರೂ ಒಳಗೊಳಗೇ ಸ್ವಲ್ಪ ಖುಷಿಯಾಯಿತು.
"ಸದ್ಯ... ಊರಿಗೆ ದೇವರು, ಆಲಯ, ಮಂದಿರ, ಜಾತಿ, ಪಂಥ, ಎಂಬಂಥ ಶನಿ ಈ ಪೆಟ್ಟಿನಿಂದಾಗಿ ಬಿಟ್ಟು ಹೋದರೆ ಅಷ್ಟೇ ಒಳ್ಳೆಯದು. ಮತ್ತೆಂದೂ ಈ ಮಂದಿರದ ಸುದ್ದಿ ಏಳದಿದ್ದರೆ ಒಂದು ಕರಾಳ ಅಧ್ಯಾಯ ಮುಗಿದಂತೆ." ಅಂತ ಅಂದುಕೊಂಡ.
ಬಳೆಯೆಲ್ಲಾ ಮುಳುಗಿ ನಾಶವಾಗುವ ಸ್ಥಿತಿಯಲ್ಲಿದ್ದುದರಿಂದ ಶ್ರೀಮಲ್-ಗೂ ಒಂದು ಥರ ಸಂತೋಷ ಆಯಿತು. ದೇವರದಯದಿಂದ ಈ ಬಾರಿಯಾದರೂ ಜನ ತನ್ನ ಬಳಿಗೆ ವಾಪಸ್ ಬರುತ್ತಾರೆ ಅಂದುಕೊಂಡು ಮನಸ್ಸಿನಲ್ಲೇ ದೇವರಿಗೊಂದು ನಮಸ್ಕಾರ ಹಾಕಿದ.
ರೆಡ್ಡಪ್ಪ ಮಾಸ್ತರಿಗೆ ಮಾತ್ರ ಶಾಲೆಯ ಆವರಣ ಭಣಭಣಗುಟ್ಟುತ್ತಿತ್ತು. ಮಕ್ಕಳು ಮತ್ತೆ ಧ್ವಜಸ್ಥಂಬದೆದುರು ನಿಂತು ದೇಶಭಕ್ತಿಗೀತಿಯನ್ನೇ ಹಾಡಲಿ ಎಂದು ಮಾಸ್ತರು ಆದೇಶ ಇತ್ತರು. ಪ್ರಿಯವಾದದ್ದನ್ನೇನೋ ಕಳಕೊಂಡಂತೆ ಶಾಲೆಗೋ ನಿತ್ಯ ಬರುತ್ತಿದ್ದವರಿಗೆ ಅನ್ನಿಸಿತು. ಅದು ಕಾಕಾನ ಅಸ್ತಿತ್ವವೋ ಅಥವಾ ದೇವಾಲಯದ ಚಟುವಟಿಕೆಯೋ ಬಿಡಿಸಿ ಹೇಳುವುದು ಕಷ್ಟವಿತ್ತು. ಕಾಕಾ ಅಷ್ಟರ ಮಟ್ಟಿಗೆ ಆಲಯದ ಒಂದು ಭಾಗವಾಗಿಬಿಟ್ಟಿದ್ದ.
ಶಾಲೆಯ ಆವರಣದಲ್ಲಿ ಸ್ವಲ್ಪ ನೀರು ನಿಂತು ಆಲಯದ ಸುತ್ತ ರಾಡಿಯಾಗಿತ್ತು. ಏನು ಮಾಡುವುದೋ ತೋರದ ರೆಡ್ಡಪ್ಪ ಮಾಸ್ತರು ಕೆಳಗೆ ಬಿದ್ದ ಇಟ್ಟಿಗೆಯ ರಾಶಿಯಿಂದ ಒಂದೊಂದೇ ಇಟ್ಟಿಗೆ ಜೋಡಿಸತೊಡಗಿದರು. ದಿನವೂ ನಾಲ್ಕು ಹುಡುಗರನ್ನ ಈ ಕೆಲಸಕ್ಕೆ ಹಾಕಿದರೆ ಒಂದು ವಾರದಲ್ಲಿ ಶಿವಲಿಂಗದ ಸುತ್ತಲಿನ ಜಾಗ ಶುಭ್ರವಾದೀತು ಅಂತ ಅವರ ಮನಸ್ಸು ಲೆಕ್ಕ ಹಾಕುತ್ತಿತ್ತು.
ಆಗಸ್ಟ್ 1994.
No comments:
Post a Comment